ಬೆಂಗಳೂರು: ʻವಿಕ್ರಾಂತ್ ರೋಣ’ ಸಿನಿಮಾ ಬಳಿಕ ಕಿಚ್ಚ ಸುದೀಪ್ (Kichcha Sudeepa) ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಅಷ್ಟೇ ಅಲ್ಲದೇ ಕಿಚ್ಚನ ಅಭಿಮಾನಿಗಳು ಸುದೀಪ್ ಅವರ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ʻಕಿಚ್ಚ 46ʼ ಎಂಬುದು ಟ್ರೆಂಡ್ ಆಗುತ್ತಿದೆ. ಇದೀಗ ಸ್ವತಃ ಕಿಚ್ಚ ಅವರೇ ತಮ್ಮ ಸಿನಿಮಾ ಕುರಿತಾಗಿ ಟ್ವೀಟ್ ಮೂಲಕ ಹೊಸ ಅಪ್‌ಡೇಟ್ ನೀಡಿದ್ದಾರೆ.
ಕಿಚ್ಚ ಸುದೀಪ್ ಟ್ವೀಟ್‌ನಲ್ಲಿ ಹೇಳಿದ್ದೇನು?
ಕಿಚ್ಚ ಸುದೀಪ್ ಟ್ವೀಟ್‌ನಲ್ಲಿ ʻʻಎಲ್ಲರಿಗೂ ನಮಸ್ಕಾರ. ನಿಮ್ಮೆಲ್ಲರ ಟ್ವೀಟ್‌ಗಳು ಮತ್ತು ಮೀಮ್ಸ್‌ಗಳು ಇತ್ಯಾದಿಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನೀವೆಲ್ಲರೂ ಕರೆಯುವ “ಕಿಚ್ಚ 46” ನನಗೆ ತಿಳಿದಿದೆ. ಇದು ನನಗೆ ವಿಶೇಷ ಮತ್ತು ಪ್ರೀತಿಯ ಭಾವನೆಯನ್ನು ನೀಡುತ್ತದೆ. ಆದ್ದರಿಂದ ಈ ಸಣ್ಣ ಸ್ಪಷ್ಟೀಕರಣವನ್ನು ನೀಡಲು ನಾನು ಈ ಮೂಲಕ ಹೇಳುತ್ತಿದ್ದೇನೆ.
ನಾನು ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದೇನೆ. ಇದು ನನ್ನ ಮೊದಲ ಬ್ರೇಕ್ ಎಂತಲೇ ಹೇಳಬಹುದು. ಕೋವಿಡ್ ಸಮಯದ ನಂತರ, ಹಾಗೇ ಬಿಗ್ ಬಾಸ್ ಒಟಿಟಿ ಮತ್ತು ವಿಕ್ರಾಂತ್ ರೋಣ ಸಿನಿಮಾದ ದೀರ್ಘ ವೇಳಾಪಟ್ಟಿಯ ನಂತರ ವಿರಾಮದ ಅಗತ್ಯವಿತ್ತು. ನನ್ನ ಈ ವಿರಾಮವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ನನಗೆ ಸಂತೋಷವನ್ನುಂಟು ಮಾಡುವ ಕೆಲಸವನ್ನು ಮಾಡುವುದು. ಕ್ರಿಕೆಟ್ ಖಂಡಿತವಾಗಿಯೂ ನನಗೆ ವಿಶ್ರಾಂತಿ ನೀಡುವ ಮತ್ತು ಆ ವಲಯದಲ್ಲಿ ನಾನು ಸಂತೋಷವಾಗಿರುವ ಕ್ರೀಡೆಯಾಗಿದೆ. KCCಯೊಂದಿಗೆ ಮತ್ತು KBಯೊಂದಿಗೆ ಸಮಯ ಕಳೆಯುವುದರಲ್ಲಿ ನನಗೆ ಸಂತೋಷವಾಯಿತು. ಇದು ಉತ್ತಮ ವಿರಾಮ ಮತ್ತು ಉತ್ತಮ ಸಮಯ ಎಂದು ನಾನು ಖಂಡಿತವಾಗಿ ಹೇಳಬಲ್ಲೆ.
ಇದೆಲ್ಲದರ ನಡುವೆಯೂ, ನನ್ನ ಸ್ಕ್ರಿಪ್ಟ್ ಚರ್ಚೆಗಳು ನನ್ನ ದೈನಂದಿನ ಜೀವನದ ಒಂದು ಭಾಗವಾಗಿತ್ತು. ಈಗಾಗಲೇ ಮೂರು ಸ್ಕ್ರಿಪ್ಟ್‌ಗಳನ್ನು ಅಂತಿಮಗೊಳಿಸಿದ್ದೇವೆ. ಅಂದರೆ ಮೂರು ಚಿತ್ರಗಳನ್ನು ಈಗಾಗಲೇ ಫೈನಲೈಸ್ ಆಗಿದೆ. ಈ ಮೂರು ಸ್ಕ್ರಿಪ್ಟ್‌ಗಳಿಗೆ ತಯಾರಿ ನಡೆದಿದ್ದು, ಸಿದ್ಧತೆಗಳು ನಡೆಯುತ್ತಿವೆ. ಆಯಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ ಮತ್ತು ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಮಾಡುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಮೂರು ಸಿನಿಮಾಗಳು ತಮ್ಮ ಕೈಯಲ್ಲಿ ಇವೆ ಎಂದು ಕನ್‌ಫರ್ಮ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಟ್ವೀಟ್
ಕಿಚ್ಚನ ಚಿತ್ರ ನಿರ್ಮಿಸಲಿದೆ ಹೊಂಬಾಳೆ
ಈಗಾಗಲೇ ಮೂರು ಸಿನಿಮಾಗಳ ಕೆಲಸ ಆಗುತ್ತಿದೆ ಎಂದು ಕಿಚ್ಚ ಸುದೀಪ್ ಸ್ಪಷ್ಟನೆ ನೀಡುತ್ತಿದ್ದಂತೆ ಕನ್ನಡದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಸುದೀಪ್ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನಲಾಗುತ್ತಿದೆ. ಸುದೀಪ್ ಜತೆ ಹೊಂಬಾಳೆ ಫಿಲ್ಮ್ಸ್ ಮೊದಲ ಸಲ ಕೈ ಜೋಡಿಸಲಿದೆ ಎಂದೇ ಹೇಳಲಾಗುತ್ತಿದೆ. ಈ ವಿಚಾರ ಅಭಿಮಾನಿ ವಲಯದಲ್ಲಿಯೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕನ್ನಡ ಚಿತ್ರೋದ್ಯಮವನ್ನು ಬೇರೆ ಹಂತಕ್ಕೆ ಕೊಂಡೊಯ್ದಿರುವ ಹೊಂಬಾಳೆ ಫಿಲ್ಮ್ಸ್ ಕಿಚ್ಚನ 46ನೇ ಚಿತ್ರವನ್ನು ನಿರ್ಮಾಣ ಮಾಡಲು ಮನಸ್ಸು ಮಾಡಿದೆಯಂತೆ. ಅಷ್ಟೇ ಅಲ್ಲ ತೆರೆಮರೆಯಲ್ಲಿ ಕೆಲಸಗಳೂ ಆರಂಭವಾಗಿವೆಯಂತೆ. ತಮಿಳಿನಲ್ಲಿ ಈ ಹಿಂದೆ ರಿಲೀಸ್ ಆಗಿದ್ದ ‘ಸೂರರೈ ಪೊಟ್ರು’ ಚಿತ್ರ ನಿರ್ದೇಶನ ಮಾಡಿದ್ದ ಸುಧಾ ಕೊಂಗಾರ, ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.