ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ (Vikrant Rona) ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಎರಡು ಲಿರಿಕ್ ಸಾಂಗ್‌ಗಳು ಬಿಡುಗಡೆಗೊಂಡಿದ್ದು, ಸಖತ್ ಹವಾ ಕ್ರಿಯೇಟ್ ಮಾಡಿದೆ. ಇದರ ಮಧ್ಯೆ ಸುದೀಪ್ ಅವರು ಸಿನಿಮಾ ಪ್ರಚಾರಕ್ಕೆ ದೆಹಲಿಗೆ ತೆರಳಿದ್ದಾರೆ. ಆದರೆ, ಈಗ ಸುದೀಪ್ ನವ ದೆಹಲಿ ಭೇಟಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ!
ಶನಿವಾರ (ಜು.16) ಬೆಳಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜತೆ ಉಪಹಾರ ಸೇವಿಸಿ ಸಿನಿಮಾ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಜೋಶಿ, “ಇಂದು ದೆಹಲಿಯ ನನ್ನ ನಿವಾಸಕ್ಕೆ ಕನ್ನಡದ ಖ್ಯಾತ ಚಿತ್ರನಟ @KicchaSudeep ಅವರು ಭೇಟಿ ನೀಡಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. 13 ವರ್ಷಗಳ ನಂತರ ದೆಹಲಿಗೆ ಭೇಟಿ ನೀಡುತ್ತಿರುವ ಸುದೀಪ್ ಅವರು, ಕಲೆ ಸಂಸ್ಕೃತಿ ಮತ್ತು ಸಾಮಾಜಿಕ ಚಟುವಟಿಕೆ ಬಗ್ಗೆ ಚರ್ಚಿಸಿದರು” ಎಂದು ಬರೆದುಕೊಂಡಿದ್ದಾರೆ.
೧೩ ವರ್ಷ ನವ ದೆಹಲಿಗೆ ಕಾಲಿಟ್ಟಲ್ಲವೇ ಬಾದ್ ಷಾ?
ಸಾಮಾನ್ಯವಾಗಿ ಸಿನಿಮಾ ಹೀರೋಗಳು ಯಾವುದಾದರೂ ಒಂದು ಕಾರಣಕ್ಕೆ ದೇಶದ ರಾಜಧಾನಿ ನವ ದೆಹಲಿಗೆ ಹೋಗಿಯೇ ಇರುತ್ತಾರೆ. ಕೊನೇ ಪಕ್ಷ ಶೂಟಿಂಗ್ ಕಾರಣಕ್ಕಾಗಿಯಾದರೂ ಭೇಟಿ ಇದ್ದೇ ಇರುತ್ತದೆ. ಆದರೆ, ಈಗ ಕೇಂದ್ರ ಸಚಿವರು ಮಾಡಿರುವ ಟ್ವೀಟ್ ಅನ್ನು ಗಮನಿಸಿದರೆ ಕಿಚ್ಚ ಸುದೀಪ್ ಅವರು ೧೩ ವರ್ಷಗಳ ಕಾಲ ನವ ದೆಹಲಿಗೆ ಕಾಲಿಟ್ಟಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲಿದ್ದು, ಸುದೀಪ್ ಅವರೇ ಇದಕ್ಕೆ ಕಾರಣವನ್ನು ಹೇಳಬೇಕಿದೆ.
ಇದನ್ನೂ ಓದಿ | Vikrant Rona | ವಿಕ್ರಾಂತ್ ರೋಣ ಎರಡನೇ ಹಾಡು ರಿಲೀಸ್: ರಾಜಕುಮಾರಿ ಲೋಕಕ್ಕೆ ಕೊಂಡೊಯ್ದ ಕಿಚ್ಚ
ಸುದೀಪ್ ನವ ದೆಹಲಿ ಭೇಟಿ ಬಗ್ಗೆ ಕೇಂದ್ರ ಸಚಿವರು ಮಾಡಿರುವ ಟ್ವೀಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಅವರು ಶೂಟಿಂಗ್ ನಿಮಿತ್ತವಾದರೂ ದೆಹಲಿಗೆ ಇಷ್ಟು ವರ್ಷಗಳಲ್ಲಿ ಹೋಗಲಿಲ್ಲವೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಜುಲೈ 28ಕ್ಕೆ ವಿಕ್ರಾಂತ್ ರೋಣ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಸುದೀಪ್ ಹಂತ ಹಂತವಾಗಿ ಪ್ರಮೋಷನ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಡಿಯಾ ಗೇಟ್ ಬಳಿ ಸಹ ಕಿಚ್ಚ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
ಕಿಚ್ಚ ಸುದೀಪ್ ನಟಿಸಿರುವ ಪ್ಯಾನ್ ವರ್ಲ್ಡ್ ಸಿನಿಮಾ ವಿಕ್ರಾಂತ್ ರೋಣವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗು ಇಂಗ್ಲಿಷ್ ಭಾಷೆಗೆ ಕಿಚ್ಚ ಸುದೀಪ್ ಅವರೇ ವಾಯ್ಸ್ ಡಬ್ ಮಾಡಿರುವುದು ಇನ್ನೂ ವಿಶೇಷ. ವಿಕ್ರಾಂತ್ ರೋಣ 14 ಭಾಷೆಗಳಲ್ಲಿ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಜುಲೈ 28ರಂದು ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ | Vikrant Rona | ವಿಕ್ರಾಂತ್ ರೋಣ ಚಿತ್ರದ ʼಹೇ ಫಕೀರಾʼ ಲಿರಿಕಲ್ ಸಾಂಗ್ ಔಟ್