Site icon Vistara News

Kirik Keerthi: ವಿಚ್ಛೇದನ ಪಡೆದ ಕಿರಿಕ್ ಕೀರ್ತಿ; ಅರ್ಪಿತಾ ಜತೆಗಿನ ವಿವಾಹ ಬಂಧನಕ್ಕೆ ಪೂರ್ಣ ವಿರಾಮ

Kirik keerthi and Arpita

ಬೆಂಗಳೂರು: ಬಿಗ್‌ಬಾಸ್ ಸೀಸನ್ 4ರ ಖ್ಯಾತಿಯ ಕಿರಿಕ್ ಕೀರ್ತಿ (Kirik Keerthi) ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಮೂಲಕ 11 ವರ್ಷಗಳ ವಿವಾಹ ಬಂಧನಕ್ಕೆ ಕಿರಿಕ್ ಕೀರ್ತಿ‌ ಮತ್ತು ಅರ್ಪಿತಾ ಪೂರ್ಣ ವಿರಾಮ ಇಟ್ಟಿದ್ದಾರೆ. ಹಲವು ತಿಂಗಳ ಹಿಂದೆ ತಮ್ಮ ವೈವಾಹಿಕ ಸಂಬಂಧದ ಬಗ್ಗೆ ಕಹಿಯಾಗಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಕಾನೂನಿನ ಪ್ರಕಾರ ಈ ಜೋಡಿ ಡಿವೋರ್ಸ್‌ ಪಡೆದಿದೆ.

ಈ ಬಗ್ಗೆ ಅಧಿಕೃತವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಕಿರಿಕ್‌ ಕೀರ್ತಿ, ಕಾನೂನಿನ ಪ್ರಕಾರ ನನ್ನ ಮತ್ತು ಅರ್ಪಿತಾ ನಡುವಿನ ಪತಿ-ಪತ್ನಿ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನುಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ… ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ. ಕಹಿ ನೆನಪುಗಳು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲಿ. ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕೆಲವು ದಿನಗಳಿಂದ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಇಬ್ಬರೂ ಒಟ್ಟಿಗೆ ಜೀವಿಸುತ್ತಿರಲಿಲ್ಲ. ಅರ್ಪಿತಾ ಅವರು ತಮ್ಮ ತಂದೆಯ ಮನೆಯಲ್ಲಿ ಮಗನ ಜತೆಗೆ ಜೀವಿಸುತ್ತಿದ್ದರು, ಕಿರಿಕ್ ಕೀರ್ತಿ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು ಎನ್ನಲಾಗಿತ್ತು. ಇದೀಗ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ.

ಡೆತ್​ನೋಟ್​ ಬರೆದು ಡಿಲೀಟ್​ ಮಾಡಿದ್ದ ಕಿರಿಕ್​ ಕೀರ್ತಿ!

ಬಿಗ್​ ಬಾಸ್ ಮಾಜಿ ​ಸ್ಪರ್ಧಿ ಕಿರಿಕ್​ ಕೀರ್ತಿ ಸೋಷಿಯಲ್​ ಮೀಡಿಯಾಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ತೀಕ್ಷ್ಣ ಮಾತುಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಆದರೆ, ಕೆಲವು ತಿಂಗಳ ಹಿಂದೆ ಒಮ್ಮೆ ಶಾಕಿಂಗ್​ ವಿಷಯವನ್ನು ತಮ್ಮ ಫೇಸ್​ಬುಕ್​ ಪೋಸ್ಟ್​​ನಲ್ಲಿ ಹಾಕಿಕೊಂಡು ಸುದ್ದಿಯಾಗಿದ್ದರು. ‘ನಾನು ಈ ಜಗತ್ತಿಗೆ ವಿದಾಯ ಹೇಳಿಬಿಡಬೇಕು ಎಂದು ನಿರ್ಧಾರ ಮಾಡಿದ್ದೆ. ಡೆತ್​ ನೋಟ್​​ನ್ನು ಕೂಡ ಬರೆದಿಟ್ಟಿದ್ದೆ’ ಎಂದು ಅವರು ಫೇಸ್​​ಬುಕ್​​ನಲ್ಲಿ ಬರೆದುಕೊಂಡಿದ್ದರು. ಅಷ್ಟೇ ಅಲ್ಲ, ತಾವೀಗ ಡಿಪ್ರೆಶನ್​​ (ಖಿನ್ನತೆ)ಗೆ ಜಾರಿದ್ದು, ಅದರಿಂದ ಹೊರಬರಲು ನಿಮ್ಮೆಲ್ಲರ ಸಹಕಾರ ಬೇಕು ಎಂದಿದ್ದರು.

‘ನಿರ್ಧಾರ ಮಾಡಿಬಿಟ್ಟಿದ್ದೆ…ಜಗತ್ತಿಗೆ ವಿದಾಯ ಹೇಳಿಬಿಡಬೇಕು ಅಂತ…ಕಾರಣಗಳು ಹಲವು…ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು. ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು. ಎಲ್ಲ ಪ್ರಯತ್ನಗಳೂ ಕೈಕೊಡ್ತಿತ್ತು… ಒಂದು ಕಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು. ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ. ಆದ್ರೆ ಈಗ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಹೇಗೆ..? ನನ್ನ ನಂಬಿ ಹೂಡಿಕೆ ಮಾಡಿರೋರಿಗೆ ನ್ಯಾಯ ಸಿಗೋದು ಹೇಗೆ…? ನನ್ನ ಮಗನ ಭವಿಷ್ಯ ಕಟ್ಟೋದು ಹೇಗೆ..? ಈ ಪ್ರಶ್ನೆಗಳು ಕಾಡಿದವು. ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡ್ದೆ. 10 ನಿಮಿಷ ಧ್ಯಾನ ಮಾಡಿದೆ. ತಡವಾದ್ರೂ ಪರವಾಗಿಲ್ಲ ನನ್ನ ನಂಬಿದ ಎಲ್ಲರಿಗೂ ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋ ಹಾಗೆ ಸಾಧಿಸಬೇಕು ಅಂತ ಡಿಸೈಡ್ ಮಾಡ್ದೆ. ಮನಸ್ಸಲ್ಲಿದ್ದ ಕೆಟ್ಟ ಅಲೋಚನೆಗಳನ್ನು ಕಿತ್ತು ಬಿಸಾಕಿದ್ದೇನೆ. ಕೆಲವರನ್ನು ಕಳೆದುಕೊಂಡಿದ್ದರ ಹೊರತು ಬೇರೆ ಎಲ್ಲವನ್ನೂ ಟ್ರ್ಯಾಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ. ನಿಮ್ಮ ಬೆಂಬಲ‌ ಜೊತೆಗಿರಲಿ. ಡಿಪ್ರೆಷನ್‌ನಿಂದ ಮತ್ತೆ ವಾಪಸ್ ಬರಲು ಸಹಕರಿಸಿ. ಮತ್ತೆ ನನ್ನ ಮುಖದ ಮೇಲಿನ ನಗು ವಾಪಸ್ ತರುವ ತನಕ ಪ್ರಯತ್ನ‌ ನಿರಂತರ… ಇದು ಹೇಳಿಕೊಳ್ಳಬಾರದ ವಿಷಯ.. ಆದ್ರೆ ಹೇಳಿಕೊಂಡರಷ್ಟೆ ಸಮಾಧಾನ’ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

ನಂತರ‌ ವೈಯಕ್ತಿಕ ಜೀವನದ ಬಗ್ಗೆ ಕೆಲ ವದಂತಿಗಳು ಹಬ್ಬಿದ್ದರಿಂದ ಪ್ರತಿಕ್ರಿಯಿಸಿದ್ದ ಕಿರಿಕ್‌ ಕೀರ್ತಿ, ʻʻನಮಗೆ ಬದುಕಲು ಬಿಡಿ. ಯಾಕೆ ನಮಗೆ ಟಾರ್ಚರ್‌ ಮಾಡುತ್ತಿರುವುದು? ನಮ್ಮ ಜೀವನದಲ್ಲಿ ಏನಾಗಿದೆ ಏನಾಗಿಲ್ಲ ಎಂಬುದರ ಬಗ್ಗೆ ನಿಮಗೆ ಗೊತ್ತಿಲ್ಲ. ನಮಗೆ ಕ್ಲಾರಿಟಿ ಇಲ್ಲ ಅಂದ ಮೇಲೆ ನಿಮಗೆ ಹೇಗೆ ಕ್ಲಾರಿಟಿ ಸಿಗುತ್ತದೆ? ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬ ಅರಿವು ನಮ್ಮ ಕುಟುಂಬಕ್ಕೆ ಇಲ್ಲ. ವೈಯಕ್ತಿಕ ಜೀವನ ಪ್ರತಿಯೊಬ್ಬರಿಗೂ ಇರುತ್ತದೆ. ಮತ್ತೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಯಾಕೆ ಅಷ್ಟೊಂದು ಆಸಕ್ತಿ? ಎಂದು ಕೀರ್ತಿ ಹೇಳಿದ್ದರು.

Exit mobile version