Site icon Vistara News

Kirik Party: ʼಕಿರಿಕ್‌ ಪಾರ್ಟಿ 2ʼ ಬರುತ್ತಾ?; ಪರಂವಃ ಸ್ಟುಡಿಯೊದಿಂದ ಕುತೂಹಲಕಾರಿ ಸುಳಿವು!

kirik party

kirik party

ಬೆಂಗಳೂರು: 2೦16ರಲ್ಲಿ ತೆರೆಕಂಡ ಕನ್ನಡ ಚಿತ್ರ ʼಕಿರಿಕ್‌ ಪಾರ್ಟಿʼ (Kirik party) ಇಂದಿಗೂ ಹಲವರಿಗೆ ಅಚ್ಚುಮೆಚ್ಚು. ರಿಷಬ್‌ ಶೆಟ್ಟಿ (Rishab Shetty) ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ (Rakshit Shetty) ನಾಯಕನಾಗಿ ಕಾಣಿಸಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗಡೆ ನಾಯಕಿಯರಾಗಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. 2೦16ರ ಡಿಸೆಂಬರ್‌ 30ರಂದು ತೆರೆಕಂಡ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು. ಸುಮಾರು 7 ವರ್ಷಗಳ ಬಳಿಕ ಇದೀಗ ಚಿತ್ರದ ಎರಡನೇ ಭಾಗ ನಿರ್ಮಿಸಲು ತೆರೆ ಹಿಂದೆ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದ್ದು, ನಿರೀಕ್ಷೆ ಮೂಡಿಸಿದೆ.

ಕಾಲೇಜು ಜೀವನದ ರಸ ನಿಮಿಷಗಳನ್ನು ತೆರೆದಿಟ್ಟಿದ್ದ ʼಕಿರಿಕ್‌ ಪಾರ್ಟಿʼ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರ ಮನ ರಂಜಿಸಿತ್ತು. ಹಾಸ್ಯ, ಲವ್‌ ಸ್ಟೋರಿ, ಹಾಡುಗಳು, ಸೆಂಟಿಮೆಂಟ್‌ ಹೀಗೆ ಎಲ್ಲ ಅಂಶಗಳು ಈ ಚಿತ್ರದಲ್ಲಿ ಹದವಾಗಿ ಬೆರೆತಿತ್ತು. ಜತೆಗೆ ಕಲಾವಿದರ ಲವಲವಿಕೆಯ ಅಭಿನಯ ಸಿನಿಮಾವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿತ್ತು. ಹೀಗಾಗಿ ಹಲವರು ಈ ಚಿತ್ರದ ಎರಡನೇ ಭಾಗಕ್ಕಾಗಿ ಕಾದು ಕುಳಿತಿದ್ದಾರೆ.

ಸುಳಿವು ಕೊಟ್ಟ ಪರಂವಃ ಸ್ಟುಡಿಯೊ

ರಕ್ಷಿತ್‌ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋಸ್ ʼಕಿರಿಕ್‌ ಪಾರ್ಟಿʼ ಚಿತ್ರವನ್ನು ನಿರ್ಮಿಸಿತ್ತು. ಇದೀಗ ಪರಂವಃ ಸ್ಟುಡಿಯೋಸ್ ತನ್ನ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ʼಕಿರಿಕ್‌ ಪಾರ್ಟಿ 2ʼ ಸಿನಿಮಾದ ಕುರಿತು ಸುಳಿವು ನೀಡಿದೆ. ವಿಡಿಯೊವನ್ನು ಹಂಚಿಕೊಂಡ ಪರಂವಃ ಸ್ಟುಡಿಯೋಸ್, ʼಮತ್ತೆ ಪಾರ್ಟಿ ಮಾಡೋಕೆ ರೆಡಿನಾ?ʼ ಎಂದು ಪ್ರಶ್ನಿಸುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದೆ. ವಿಡಿಯೊದಲ್ಲಿ ಹಲವು ಮಂದಿ ಕಿರಿಕ್‌ ಪಾರ್ಟಿ ತೆರೆಕಂಡು 7 ವರ್ಷವಾಯ್ತು ಇನ್ನೂ ಎರಡನೇ ಭಾಗ ಯಾಕೆ ತೆರೆಗೆ ಬಂದಿಲ್ಲ? ಎಂದು ಪ್ರಶ್ನಿಸುತ್ತಾರೆ. ಕೊನೆಯಲ್ಲಿ ಹೆಚ್ಚಿನ ಮಾಹಿತಿ ಡಿಸೆಂಬರ್‌ 13 (ನಾಳೆ) ಬೆಳಗ್ಗೆ 10.06 ನಿಮಿಷಕ್ಕೆ ಬಹಿರಂಗಪಡಿಸುವುದಾಗಿ ತಿಳಿಸಲಾಗಿದೆ.

ಸದ್ಯ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಿಷಬ್‌ ಶೆಟ್ಟಿ ಸದ್ಯ ʼಕಾಂತಾರ ಚಾಪ್ಟರ್‌ 1ʼ ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ. ಬಹು ನಿರೀಕ್ಷಿತ ಚಿತ್ರ ಮುಂದಿನ ವರ್ಷ ತೆರೆ ಕಾಣುವ ಸಾಧ್ಯತೆ ಇದೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ರಿಷಬ್‌ ʼಕಾಂತಾರ 1ʼರಲ್ಲಿ ಕೆಲಸ ಮಾಡುತ್ತಿರುವುದರಿಂದ ʼಕಿರಿಕ್‌ ಪಾರ್ಟಿ 2ʼಗೆ ಅವರೇ ಆ್ಯಕ್ಷನ್‌ ಕಟ್‌ ಹೇಳುತ್ತಾರಾ ಅಥವಾ ಹೊಸ ನಿರ್ದೇಶಕರ ಎಂಟ್ರಿಯಾಗುತ್ತ ಎನ್ನುವ ಕುತೂಹಲ ಮೂಡಿಸಿದೆ. ಈ ಮಧ್ಯೆ ರಕ್ಷಿತ್‌ ಶೆಟ್ಟಿ ಕೂಡ ಹಲವು ಚಿತ್ರಗಳಲ್ಲಿ ಬ್ಯುಸಿ ಇರುವುದರಿಂದ ನಾಯಕನಾಗಿ ಮುಂದುವರಿಯುತ್ತಾರಾ ಎನ್ನುವ ಪ್ರಶ್ನೆಯೂ ಎದ್ದಿದೆ. ಇನ್ನು ಮೊದಲ ಭಾಗದ ಕಥೆಯಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಅಂತ್ಯವಾಗುವುದರಿಂದ ನಾಯಕಿಯಾಗಿ ಹೊಸ ನಟಿ ಅಭಿನಯಿಸಲಿದ್ದಾರೆ ಎನ್ನುವ ಲೆಕ್ಕಾಚಾರವೂ ಇದೆ. ಈ ಎಲ್ಲ ಕಾರಣಗಳಿಂದ ಚಿತ್ರದ ಬಗ್ಗೆ ಕುತೂಹಲ ಗರಿಗೆದರಿದೆ.

ಇದನ್ನೂ ಓದಿ: Rakshit Shetty: ರಕ್ಷಿತ್‌ ಶೆಟ್ಟಿ ಅಭಿನಯ, ಸಿನಿಮಾವನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್‌!

ʼಕಿರಿಕ್‌ ಪಾರ್ಟಿʼ ಸಿನಿಮಾದಲ್ಲಿ ಅಜನೀಶ್‌ ಲೋಕನಾಥ್‌ ಅವರ ಸಂಗೀತ ಗಮನ ಸೆಳೆದಿತ್ತು. ಎಲ್ಲ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು. ಅಲ್ಲದೆ ಅಚ್ಯುತ್‌ ಕುಮಾರ್‌, ಅರವಿಂದ್‌ ಅಯ್ಯರ್‌, ಧನಂಜಯ್‌ ರಂಜನ್‌, ಪ್ರಮೋದ್‌ ಶೆಟ್ಟಿ ಮತ್ತಿತರರ ಪಾತ್ರಗಳೂ ಜನ ಮೆಚ್ಚುಗೆ ಗಳಿಸಿದ್ದವು. ಹೀಗಾಗಿ ಇವೆರಲ್ಲ ಮತ್ತೆ ಮುಂದುವರಿಯುತ್ತಾರಾ ಎನ್ನುವ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version