Site icon Vistara News

Krystyna Pyszkova: ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಕೋವಾಗೆ ಈ ಬಾಲಿವುಡ್‌ ತಾರೆ ಅಚ್ಚುಮೆಚ್ಚು

Krystyna Pyszkova

Krystyna Pyszkova

ಮುಂಬೈ: 2024ನೇ ಸಾಲಿನ ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆ (Miss World 2024)ಗೆ ವರ್ಣರಂಜಿತ ತೆರೆ ಎಳೆಯಲಾಗಿದೆ. 28 ವರ್ಷಗಳ ಬಳಿಕ ಭಾರತದಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 112 ಸ್ಪರ್ಧಿಗಳನ್ನು ಹಿಂದಿಕ್ಕಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ (Krystyna Pyszkova) ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಮಾತನಾಡಿ, ತಾವು ಹಿಂದಿ ಚಿತ್ರಗಳನ್ನು ನೋಡುವುದಾಗಿ ತಿಳಿಸಿದ್ದಾರೆ. ಜತೆಗೆ ಕುತೂಹಲಕಾರಿ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ. ಕ್ರಿಸ್ಟಿನಾ ಪಿಸ್ಕೋವಾ ಅವರು ತಾವು ಬಾಲಿವುಡ್‌ ಸ್ಟಾರ್‌ ಶಾರುಖ್‌ ಖಾನ್‌ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಈ ವಿಷಯ ಕೇಳಿ ಬಾಲಿವುಡ್‌ ಬಾದ್‌ ಷಾ ಫ್ಯಾನ್ಸ್‌ ಖುಷಿಯಾಗಿದ್ದಾರೆ.

ಕ್ರಿಸ್ಟಿನಾ ಪಿಸ್ಕೋವಾ ಹೇಳಿದ್ದೇನು?

ಸಂದರ್ಶನ ವೇಳೆ ಅವರು ಭಾರತೀಯ ಸಿನಿಮಾಗಳ ಮೇಲಿನ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ʼಕಭಿ ಖುಷಿ ಕಭಿ ಗಮ್ʼ ಬಾಲಿವುಡ್‌ ಚಿತ್ರ ತಮಗೆ ಇಷ್ಟ ಎಂದು ಹೇಳಿದ ಅವರು, ನೀವು ಶಾರುಖ್ ಖಾನ್ ಅಭಿಮಾನಿಯೇ ಎಂದು ಕೇಳಿದಾಗ, ಹೌದು ಎಂದು ಉತ್ತರಿಸಿದರು. ಜತೆಗೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಕೂಡ ತನಗೆ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ.

ಕ್ರಿಸ್ಟಿನಾ ಪಿಸ್ಕೋವಾ ಅವರಿಗೆ ಬಾಲಿವುಡ್‌ ಮಾತ್ರವಲ್ಲ ಇನ್ನೂ ಅನೇಕ ಕಾರಣಕ್ಕೆ ಭಾರತ ಅಚ್ಚುಮೆಚ್ಚು. ಅವರು ಭಾರತೀಯ ಆಹಾರವನ್ನು ಸಹ ಇಷ್ಟಪಡುತ್ತಾರೆ. ಬಟರ್ ಚಿಕನ್ ಇಷ್ಟಪಡುವ ಅವರು ಭಾರತಕ್ಕೆ ಭೇಟಿ ನೀಡಿದಾಗ ಪ್ರತಿದಿನ ಈ ಖಾದ್ಯವನ್ನು ಸೇವಿಸುತ್ತಾರಂತೆ. ಸದ್ಯ ಕ್ರಿಸ್ಟಿನಾ ಕಾನೂನು ಮತ್ತು ವ್ಯವಹಾರ ಆಡಳಿತ ಎರಡರಲ್ಲೂ ಪದವಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರು ಕ್ರಿಸ್ಟಿನಾ ಫೌಂಡೇಶನ್ ಸ್ಥಾಪಿಸಿದ್ದಾರೆ.

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಲೆಬನಾನ್‌ನ ಯಾಸ್ಮಿನಾ ಜೈತೌನ್​​ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರೆ ಭಾರತದ ಸಿನಿ ಶೆಟ್ಟಿ ಅವರು ಕೊನೆ ಕ್ಷಣದಲ್ಲಿ ಎಡವಿದ್ದರು. ಟಾಪ್‌ 8ರಲ್ಲಿ ಸ್ಥಾನ ಪಡೆದುಕೊಂಡಿದ್ದ ಅವರು ಕೊನೆಯ ಸುತ್ತಿಗೆ ಅರ್ಹತೆ ಪಡೆದಿರಲಿಲ್ಲ. ಆ ಮೂಲಕ ಕರ್ನಾಟಕ ಮೂಲದ ಅವರು ನಿರಾಸೆ ಅನುಭವಿಸಿದ್ದರು.

ಇದನ್ನೂ ಓದಿ: Miss World 2024: ವಿಶ್ವ ಸುಂದರಿ ಆಗಲು `ಕ್ರಿಸ್ಟಿನಾ ಪಿಸ್ಕೋವಾʼಗೆ ಕೇಳಿದ ಪ್ರಶ್ನೆ ಏನು? ಅವರ ಉತ್ತರ ಏನಾಗಿತ್ತು?

ಭಾರತ ಇದುವರೆಗೆ 6 ವಿಶ್ವ ಸುಂದರಿ ಪಟ್ಟ ಗಳಿಸಿದೆ. ಮೊದಲ ಬಾರಿಗೆ ರೀಟಾ ಫರಿಯಾ 1966ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು. ನಂತರ ಐಶ್ವರ್ಯಾ ರೈ ಬಚ್ಚನ್‌ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಇತ್ತೀಚೆಗೆ ಮಾನುಷಿ ಚಿಲ್ಲರ್ (2017) ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದರು. 7ನೇ ವಿಶ್ವ ಸುಂದರಿ ಪಟ್ಟವನ್ನು ಕನ್ನಡತಿ ತರುತ್ತಾರೆ ಎನ್ನುವ ನಿರೀಕ್ಷೆ ಮೂಡಿತ್ತು. ಆದರೆ ಈ ಕನಸು ಈಗ ಕನಸಾಗಿಯೇ ಉಳಿದಿದೆ. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. ಬೆಂಗಳೂರಿನಲ್ಲಿ ನಡೆದ ಈ ಸ್ಪರ್ಧೆಯ ಬಳಿಕ 2024ರಲ್ಲಿ ಭಾರತಕ್ಕೆ ಈ ಅವಕಾಶ ಒದಗಿ ಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version