Site icon Vistara News

Child Artists : ಸೀರಿಯಲ್‌, ರಿಯಾಲಿಟಿ ಶೋದಲ್ಲಿ ಮಕ್ಕಳ ಅಭಿನಯ; ಡಿಸಿ ಅನುಮತಿ ಸಹಿತ ಹಲವು ಕಂಡಿಷನ್ಸ್‌

Child Artists labour rules

ಬೆಂಗಳೂರು: ಸಿನಿಮಾ, ಸೀರಿಯಲ್‌, ರಿಯಾಲಿಟಿ ಶೋ ಸೇರಿದಂತೆ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ (Child Artists) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಇದರ ಮೂಲಕ ಮಕ್ಕಳು ಮತ್ತು ಪೋಷಕರು ಆದಾಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಮಕ್ಕಳ ಬಳಕೆಗೆ ಕೆಲವೊಂದು ಷರತ್ತುಗಳನ್ನು ಕಾರ್ಮಿಕ ಇಲಾಖೆ (Labour Department) ವಿಧಿಸಲು ಮುಂದಾಗಿದೆ. 14 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಸೇರಿದಂತೆ ಯಾವುದೇ ಉದ್ಯೋಗದಲ್ಲಿ ಬಳಸಬಾರದು ಎಂಬ ಬಾಲ ಕಾರ್ಮಿಕ ವಿರೋಧಿ ನಿಯಮಗಳನ್ನು (Child labour rules) ಮನರಂಜನಾ ಕ್ಷೇತ್ರಕ್ಕೂ (Entertainment field) ಅನ್ವಯವಾಗಿಸಲು ಸಿದ್ಧತೆ ನಡೆದಿದೆ. ಇದರ ನಿಯಮಗಳಲ್ಲಿ ಅತ್ಯಂತ ಪ್ರಮುಖವಾದುದು ಎಂದರೆ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳು ನಟಿಸುವ ಮುನ್ನ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು ಮತ್ತು ಈ ರೀತಿಯ ನಟನೆಗೆ ಸಮಯದ ಮಿತಿ ವಿಧಿಸಬೇಕು ಹಾಗೂ ನಟನೆಯಿಂದ ಗಳಿಸಿದ ಹಣದಲ್ಲಿ ಒಂದಂಶವನ್ನು ಅವರ ಹೆಸರಿನಲ್ಲೇ ಠೇವಣಿಯಾಗಿ ಇಡಬೇಕು ಎನ್ನುವುದು.

ಮಕ್ಕಳ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಾಯೋಜಕರು ದಂಡಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಶೂಟಿಂಗ್ ನಲ್ಲಿ 5 ಗಂಟೆಗಿಂತ ಹೆಚ್ಚು ಅವಧಿ ಮಕ್ಕಳನ್ನು ಬಳಸುವಂತಿಲ್ಲ. ಶಿಕ್ಷಣಕ್ಕೆ ತೊಂದರೆಯಾಗದಂತೆ ನಿರಂತರವಾಗಿ 27 ದಿನಕ್ಕಿಂತ ಹೆಚ್ಚು ದಿನಗಳನ್ನು ಈ ಕೆಲಸಗಳಲ್ಲಿ ತೊಡಗಿಸಬಾರದು ಎನ್ನುವುದು ಪ್ರಮುಖ ಸೂಚನೆಗಳಾಗಿವೆ.

ಸದ್ಯ ಈ ಸುತ್ತೋಲೆ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೂ ತಲುಪಿದೆ. ಮುಂದಿನ ದಿನಗಳಲ್ಲಿ ನಿಯಮಾವಳಿ ಹೇಗೆಲ್ಲ ಬಾಲ ಕಾರ್ಮಿಕರ ಅಭಿನಯಕ್ಕೆ ಅನ್ವಯ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಹಾಗಿದ್ದರೆ ಸುತ್ತೋಲೆಯಲ್ಲಿ ಏನೆಲ್ಲ ಅಂಶಗಳನ್ನು ತಿಳಿಸಲಾಗಿದೆ.?

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಕರ್ನಾಟಕ ನಿಯಮಗಳನ್ವಯ ಮಕ್ಕಳು ಬಾಲ ನಟ/ನಟಿಯಾಗಿ ನಟನಾ ಕೆಲಸ ಮಾಡಲು ಇರುವ ಕಾನೂನಾತ್ಮಕ ಅಂಶಗಳು ಹಾಗೂ ಅನುಷ್ಠಾನ ಮಾಡುವ ಕುರಿತ ಸುತ್ತೋಲೆ ಇದಾಗಿದೆ. ಇದರ ಪ್ರಕಾರ, ಈಗಿರುವ ಕಾಯಿದೆ ಪ್ರಕಾರ ನಟನಾ ಕ್ಷೇತ್ರದಲ್ಲಿ ಮಕ್ಕಳು ತೊಡಗಿಸಿಕೊಳ್ಳಬಹುದು. ಆದರೆ, ಅದಕ್ಕೂ ಕೆಲವೊಂದು ನಿಯಮಗಳಿವೆ ಎಂದು ತಿಳಿಸಲಾಗಿದೆ.

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ,2016 ರನ್ವಯ ಮಕ್ಕಳ ಶಿಕ್ಷಣದ ಹಕ್ಕಿಗೆ ಮಾರಕವಾಗದಂತೆ ಬಾಲ ನಟ/ನಟಿಯಾಗಿ ನಟನಾ ಕೆಲಸ ನಿರ್ವಹಿಸುವ ಚಟುವಟಿಕೆಗಳನ್ನು ಹೊರತುಪಡಿಸಿ, ಕಾಯ್ದೆಯು ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಹಾಗೂ ಕಾಯ್ದೆಯು 14- 18ರ ವಯಸ್ಸಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ತಪ್ಪಿತಸ್ಥ ಮಾಲಿಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ, ರೂ.20,000/- ರಿಂದ ರೂ.50.000/- ರವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ ಎಂದು ಸುತ್ತೋಲೆಯಲ್ಲಿ ನೆನಪಿಸಲಾಗಿದೆ.

ಇದನ್ನೂ ಓದಿ : Jio Cinema : ಜಿಯೋಸಿನಿಮಾದ ‘ಜೀತೋ ಧನ್ ಧನಾ ಧನ್‌’ ಸ್ಪರ್ಧೆಗೆ ಟಿವಿಎಸ್​ ಯೂರೋಗ್ರಿಪ್​ ಪ್ರಾಯೋಜಕತ್ವ

ಹಾಗಿದ್ದರೆ ಬಾಲ ಕಲಾವಿದರಿಗೆ ಅನ್ವಯವಾಗುವ ನಿಯಮಗಳೇನು?

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಕರ್ನಾಟಕ ನಿಯಮಗಳು ‘2ಸಿ’ ರಲ್ಲಿ ಒಬ್ಬ ಕಲಾವಿದನಾಗಿ ಕೆಲಸ ಮಾಡಬೇಕಾದ ಮಗು(1) ಕಲಂ 3ರ ತಡೆಗಳನ್ವಯ ಕೆಳಗಿನ ಪರಿಸ್ಥಿತಿಗಳಿಗೆ ನಿಯಮಗಳಿಗೆ ಒಳಪಟ್ಟಂತೆ ಮಗು ಕಲಾವಿದನಾಗಿ ಕೆಲಸ ಮಾಡಬಹುದು ಎಂದು ಹೇಳಿದೆ.

  1. ಮಕ್ಕಳನ್ನು ಬಳಸಿ ಚಿತ್ರ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅವರ ನಿರ್ಲಕ್ಷ್ಯ ಅಥವಾ ಶೋಷಣೆ ನಡೆಯದಂತೆ ಕ್ರಮ ಕೈಗೊಂಡಿರಬೇಕು. ಇಲ್ಲವಾದಲ್ಲಿ ಚಲನಚಿತ್ರಗಳ ಅಥವಾ ದೂರದರ್ಶನದ ಪ್ರದರ್ಶನದ ಹಕ್ಕು ನಿರಾಕರಣೆಯ ಅವಕಾಶಗಳಿಗೆ
    ಒಳಪಟ್ಟಿದೆ ಎಂಬುದನ್ನು ನಿರ್ಮಾಪಕರಿಗೆ ಖಚಿತಪಡಿಸುವುದು.
  2. ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಖಾತ್ರಿಪಡಿಸುವುದು.
  3. ಮಗುವಿಗೆ ಸಕಾಲಿಕ ಪೌಷ್ಠಿಕ ಆಹಾರ ಒದಗಿಸುವುದು.
  4. ದೈನಂದಿನ ಅಗತ್ಯಗಳಿಗೆ ಸಾಕಾಗುವಷ್ಟು ಸಾಮಾಗ್ರಿಗಳು, ಸ್ವಚ್ಚ ಮತ್ತು ಸುರಕ್ಷಿತವಾ ಆಶ್ರಯ ಒದಗಿಸುವುದು.
  5. ಶಿಕ್ಷಣದ ಹಕ್ಕು ಸಂರಕ್ಷಣೆ, ಲೈಂಗಿಕ ಅಪರಾಧಗಳಿಂದ ರಕ್ಷಣೆ ಒಳಗೊಂಡಂತೆ ಮಕ್ಕಳ ರಕ್ಷಣೆ ಕುರಿತಾಗಿ ಕಾಲ ಕಾಲಕ್ಕೆ ಜಾರಿಯಲ್ಲಿರುವ ಎಲ್ಲಾ ಕಾನೂನುಗಳ ಮಾಡುವುದು.
  6. ಮಗು ಶಾಲೆಯ ಪಾಠ ಪ್ರವಚನಗಳಿಗೆ ಗೈರಾಗದಂತೆ ಶಿಕ್ಷಣದಲ್ಲಿ ನಿರಂತದ ಮುಂದುವರೆಯಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದನ್ನು ಖಾತರಿಪಡಿಸಬೇಕು ಮತ್ತು ಯಾವುದೇ ಮಗು ನಿರಂತರವಾಗಿ 27 ದಿನಗಳಿಗಿಂತ ಹೆಚ್ಚಿನ ದಿನಗಳು ಕೆಲಸದಲ್ಲಿ ತೂಡಗಲು ಅವಕಾಶ ನೀಡಬಾರದು.
  7. ಮಗುವಿನ ರಕ್ಷಣೆ, ಪೋಷಣೆ ಮತ್ತು ಹಿತಾಸಕ್ತಿಯನ್ನು ಕಾಪಾಡಲು ನಿರ್ಮಾಣ ಆ ಕಾರ್ಯಕ್ರಮದಲ್ಲಿ ತೊಡಗಿರುವ ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಬ್ದಾರಿ ವ್ಯಕ್ತಿ ನೇಮಿಸುವುದು.
  8. ನಿರ್ಮಾಣ ಅಥವಾ ಕಾರ್ಯಕ್ರಮದಿಂದ ಮಗುವಿಗೆ ಬರುವ ಒಟ್ಟು ಆದಾಯದ ಕನಿಷ್ಠ ಭಾಗವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ ಖಾತೆ ತೆರೆದು ಇಡಬೇಕು. ಅದನ್ನು ಮಗು ಪ್ರಾಯಸ್ಥನಾದಾಗ ಪಡೆಯಲು ಅವಕಾಶ ಕಲ್ಪಿಸುವುದು.
  9. ಯಾವುದೇ ಮಗುವಿನ ಒಪ್ಪಿಗೆ ಮತ್ತು ಇಚ್ಛೆಗೆ ವಿರುದ್ಧವಾಗಿ ಯಾವುದೇ ಧ್ವನಿ, ದೃಶ್ಯ ಕ್ರೀಡಾ ಚಟುವಟಿಕೆ ಅನೌಪಚಾರಿಕ ಮನರಂಜನಾ ಚಟುವಟಿಕೆ ಒಳಗೊಂಡಂತೆ ಭಾಗವಹಿಸುವಂತೆ ಮಾಡಬಾರದು.
Exit mobile version