ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ನಟಿ ಲೀಲಾವತಿ (Leelavathi) ಮತದಾನ ಮಾಡಿದ್ದಾರೆ. ಮೇ 10ರಂದು ಮತದಾನ ದಿನಾಂಕ ಘೋಷಣೆ ಆಗಿದ್ದರೂ, ಚುನಾವಣೆ ಆಯೋಗ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಏಪ್ರಿಲ್ 29ರಂದು ವೋಟ್ ಮಾಡಿದ್ದಾರೆ.
ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ. ಮಗ ವಿನೋದ್ ರಾಜ್ ಸಹಾಯದಿಂದ ಅವರು ಮನೆಯಲ್ಲಿ ಮತದಾನ ಮಾಡಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಮನೆಯಿಂದ ಮತದಾನ ಮಾಡುವ ಅವಕಾಶ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಲೀಲಾವತಿ, ‘ಚುನಾವಣೆ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತಹ ಹಿರಿಯರಿಗೆ ಅನುಕೂಲವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಿ’ ಎಂದು ಹೇಳಿದರು. ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದೆ. ಈ ಮೂಲಕ ಮೊದಲ ಮತದಾನ ಮಾಡಿದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: Karnataka Election: ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ; ಪ್ರಿಯಾಂಕಾ ಗಾಂಧಿ ಮನವಿ
ರಾಜ್ಯದಲ್ಲಿ ಈ ಬಾರಿ 80 ವರ್ಷ ದಾಟಿದ ಹಿರಿಯ ಮತದಾರರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣೆ (Karnataka Election 2023) ಆಯೋಗ ಕ್ರಮ ತೆಗೆದುಕೊಂಡಿದೆ. ಅದರಂತೆ, ರಾಜ್ಯದಲ್ಲಿ 80 ವರ್ಷ ದಾಟಿದ 12,15,920 ಮತದಾರರಿದ್ದು, ಇವರಲ್ಲಿ 80 ಸಾವಿರಕ್ಕೂ ಅಧಿಕ ಜನ ಮನೆಯಿಂದಲೇ ಹಕ್ಕು ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಇವರು ಮತದಾನ ಮಾಡಲು ಚುನಾವಣೆ ಆಯೋಗವು ಕ್ರಮ ತೆಗೆದುಕೊಂಡಿದೆ. ಏಪ್ರಿಲ್ 29ರಿಂದ ಮೇ 6ರವರೆಗೆ 80 ವರ್ಷ ದಾಟಿದ ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆ.
ಚುನಾವಣೆ ಅಧಿಕಾರಿಗಳು ಮತದಾರರ ಮನೆಗೆ ಹೋಗಿ ಬ್ಯಾಲೇಟ್ ಪೇಪರ್‌ನಲ್ಲಿ ಮತ ಹಾಕಿಸಿಕೊಳ್ಳಲಿದ್ದಾರೆ. ಮೂರೂ ಪಕ್ಷಗಳ ಏಜೆಂಟ್‌ಗಳೊಂದಿಗೆ ಚುನಾವಣೆ ಅಧಿಕಾರಿಗಳು ಮತದಾರರ ಮನೆಗೆ ತೆರಳಿ, ಅವರ ಸಮ್ಮುಖದಲ್ಲಿಯೇ ಮತ ಹಾಕಿಸಿಕೊಳ್ಳಲಿದ್ದಾರೆ.