ಬೆಂಗಳೂರು: ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಹಾಡುಗಳನ್ನು ಹಾಡಿರುವ ಹಿರಿಯ ಹಿನ್ನೆಲೆ ಗಾಯಕಿ ಎಲ್.ಆರ್. ಈಶ್ವರಿ (LR Eswari) ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. 83ರ ಹರೆಯದ ಗಾಯಕಿ ಇತ್ತೀಚಿನ ದಿನಗಳಲ್ಲಿ ಚಿತ್ರಗಳಲ್ಲಿನ ಐಟಂ ಹಾಡುಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ವಿಭಿನ್ನ ಧ್ವನಿ ಮೂಲಕ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಮನಸ್ಸಿನಲ್ಲಿದ್ದಾರೆ. ಅದರಲ್ಲೂ ‘ಜೋಕೆ ನಾನು ಬಳ್ಳಿಯ ಮಿಂಚು’ ಎಂದು ಹಾಡಿರುವ ಕನ್ನಡ ಹಾಡು ತುಂಬಾನೇ ಫೇಮಸ್ ಅಗಿತ್ತು. ಈಗ ಅಲ್ಲು ಅರ್ಜುನ್, ಮತ್ತು ಸಮಂತಾ ಸ್ಟೆಪ್ ಹಾಕಿರುವ (Samantha) ಪುಷ್ಪ ಚಿತ್ರದ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪುಷ್ಪ ಚಿತ್ರದ ‘ಊ ಅಂಟಾವ ಮಾವ’ ಹಾಡಿನ ಬಗ್ಗೆ ಸಂದರ್ಶನವೊಂದರಲ್ಲಿ ಬೇಸರ ಹೊರಹಾಕಿದ್ದಾರೆ.
ಎಲ್.ಆರ್.ಈಶ್ವರಿ ಮಾತನಾಡಿ ʻʻಈಗ ಬರುತ್ತಿರುವ ಹಾಡುಗಳು ನನಗೆ ಇಷ್ಟವಾಗುತ್ತಿಲ್ಲ. ಇತ್ತೀಚೆಗೆ, ನಾನು ‘ಊ ಅಂಟಾವ ಮಾವ’ ಹಾಡನ್ನು ಕೇಳಿದೆ. ಅದೆಲ್ಲ ಹಾಡೇ? ಆರಂಭದಿಂದ ಕೊನೆಯವರೆಗೂ ಒಂದೇ ಪಿಚ್‌ನಲ್ಲಿತ್ತು. ಗಾಯಕರಿಗೆ ಏನು ಗೊತ್ತು? ಹಾಡುಗಾರರಿಗೆ ತಂಡದವರು ಸೂಚಿಸಿದಂತೆ ಹಾಡುತ್ತಾರೆ. ಗಾಯಕರ ಮೇಲೆ ನಿಗಾ ಇಡೋದು ಸಂಗೀತ ನಿರ್ದೇಶಕರ ಜವಾಬ್ದಾರಿ ಆಗಿರುತ್ತದೆ. ಅದೇ ಹಾಡನ್ನು ನನಗೆ ಹಾಡಲು ಬಿಟ್ಟಿದ್ದರೆ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದೆ ಎಂದರು.
ಇದನ್ನೂ ಓದಿ: Samantha: ʻಖುಷಿʼ ಸಿನಿಮಾ ಸೆಟ್‌ನಲ್ಲಿ ಸಮಂತಾ: ಕೇಕ್ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ
ಮಾತು ಮುಂದುವರಿಸಿ ʻʻನನಗೆ ಹಾಡು ಇಷ್ಟವಾಗಲಿಲ್ಲ. ಹೊಸದಾಗಿ ಬರುವ ಮಕ್ಕಳಿಗೆ (ಗಾಯಕರು) ಏನು ಗೊತ್ತು? ಸಂಗೀತ ನಿರ್ದೇಶಕರು ಗಮನ ಹರಿಸಿಬೇಕು. ನಮ್ಮ ಕಾಲದ ಆ ಹಾಡುಗಳನ್ನು ಇಂದಿಗೂ ಎಲ್ಲರಿಗೂ ಮನರಂಜನೆಯನ್ನು ನೀಡುತ್ತದೆ. ನಮ್ಮ ಹಾಡುಗಳು ಕ್ಲಾಸಿಕ್ ಆಗಿ ಉಳಿದಿರುವುದಕ್ಕೆ ಕಾರಣವಿದೆ ಮತ್ತು ಇಂದಿಗೂ ಗಮನಾರ್ಹವಾಗಿದೆ. ಕಥೆ ಮತ್ತು ವೀಕ್ಷಕರನ್ನು ಸೆಳೆಯುವ ಪ್ರತಿಭೆ ಎಲ್ಲಿಗೆ ಬಂದು ನಿಂತಿದೆ’ ಎಂದು ಈಶ್ವರಿ ಹೇಳಿದ್ದಾರೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ‘ಊ ಅಂಟಾವ ಮಾವ’ ಹಾಡು 2022ರಲ್ಲಿ ಅತ್ಯಂತ ಜನಪ್ರಿಯ ಟ್ರ್ಯಾಕ್‌ಗಳಲ್ಲಿ ಒಂದಾಗಿದೆ. ಈ ಹಾಡನ್ನು ಇಂದ್ರಾವತಿ ಚೌಹಾಣ್ ಹಾಡಿದ್ದಾರೆ ಮತ್ತು ಸಾಹಿತ್ಯವನ್ನು ಚಂದ್ರಬೋಸ್ ಬರೆದಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.