ಮಂಬಯಿ: ಈ ಬಾರಿ ಫುಟ್ಬಾಲ್ ತರಬೇತುದಾರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅಜಯ್ ದೇವಗನ್ (Ajay Devgn) ಅಭಿನಯದ ಬಹು ನಿರೀಕ್ಷಿತ ಮೈದಾನ್ ಚಿತ್ರದ ಎರಡನೇ ಮತ್ತು ಕೊನೆಯ ಟ್ರೈಲರ್ (Maidaan Trailer) ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಕಳೆದ ತಿಂಗಳಷ್ಟೇ ಇದರ ಮೊದಲ ಟ್ರೈಲರ್ ಬಿಡುಗಡೆಯಾಗಿತ್ತು. ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ (Syed Abdul Rahim) ಅವರ ಜೀವನ ಕಥೆಯನ್ನು ಈ ಚಿತ್ರ ಆಧರಿಸಿದೆ. ಸೈಯದ್ ಅಬ್ದುಲ್ ರಹೀಮ್ ಅವರ ನೇತೃತ್ವದಲ್ಲಿ ಭಾರತೀಯ ಫುಟ್ಬಾಲ್ ತಂಡವು (Indian football team ) 1951 ಮತ್ತು 1962 ರಲ್ಲಿ ಏಷ್ಯನ್ ಗೇಮ್ಸ್ (Asian Games) ಅನ್ನು ಗೆದ್ದುಕೊಂಡಿತು.
ಚಿತ್ರಕ್ಕೂ ಅನೇಕ ಸವಾಲು
ಚಿತ್ರದ ಚಿತ್ರೀಕರಣ ಮುಗಿದಿದ್ದರೂ ಹಲವು ಬಾರಿ ತೆರೆಗೆ ಬರಲು ಪ್ರಯತ್ನಿಸಿದರೂ ಕಾರಣಾಂತರದಿಂದ ವಿಳಂಬವಾಯಿತು. ಇದೀಗ ಚಿತ್ರದ ಅಂತಿಮ ಟ್ರೈಲರ್ ಬಿಡುಗಡೆಯಾಗಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಫುಟ್‌ಬಾಲ್ ತಂಡ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಿಯಾಮಣಿ ಅಜಯ್ ದೇವಗನ್‌ಗೆ ಹೇಳುವ ಮೂಲಕ ಟ್ರೈಲರ್ ತೆರೆದುಕೊಳ್ಳುತ್ತದೆ. ರಹೀಮ್ ಪಾತ್ರದಲ್ಲಿ ಅಜಯ್ ದೇವಗನ್ ತಮ್ಮ ದಾರಿಯಲ್ಲಿ ಬರುವ ಅಸಂಖ್ಯಾತ ಸವಾಲುಗಳ ನಡುವೆ ತಂಡವನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ತರಬೇತಿ ನೀಡಲು ಪ್ರಯತ್ನಿಸುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.
ಭಾರತೀಯ ಫುಟ್‌ಬಾಲ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಕಾರಣವಾದ ನಾಯಕನ ಕಥೆಯನ್ನು ಈ ಚಿತ್ರ ಹೇಳುತ್ತದೆ. ಆ ಕಾಲದಲ್ಲಿ ಭಾರತೀಯ ಫುಟ್ ಬಾಲ್ ತಂಡವು ಚುನ್ನಿ ಗೋಸ್ವಾಮಿ, ಪಿ.ಕೆ. ಬ್ಯಾನರ್ಜಿ, ಬಲರಾಮ್, ಫ್ರಾಂಕೋ ಮತ್ತು ಅರುಣ್ ಘೋಷ್ ಅವರಂತಹ ಪ್ರಸಿದ್ಧ ಆಟಗಾರರನ್ನು ಒಳಗೊಂಡಿತ್ತು.
ಚಿತ್ರದ ಬಗ್ಗೆ ಬೋನಿ ಕಪೂರ್ ಏನು ಹೇಳುತ್ತಾರೆ ?
ಚಿತ್ರದ ಕುರಿತು ಪ್ರತಿಕ್ರಿಯಿಸಿರುವ ನಿರ್ಮಾಪಕ ಬೋನಿ ಕಪೂರ್, ಸೈಯದ್ ಅಬ್ದುಲ್ ರಹೀಮ್ ಅವರಷ್ಟು ಮಹತ್ವದ ವ್ಯಕ್ತಿಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಎಂಬುದು ನನಗೆ ಆಶ್ಚರ್ಯವಾಯಿತು. ಅವರು ಅಸಾಧಾರಣ ವೀರರಾಗಿದ್ದು ಅವರ ಸಾಧನೆಗಳಿಗೆ ಗೌರವ ಸಲ್ಲಲೇಬೇಕು ಎಂದು ಹೇಳಿದ್ದಾರೆ.
ಸೈಯದ್ ಅಬ್ದುಲ್ ರಹೀಮ್ ಪಾತ್ರ ಮಾಡಲು ಅಜಯ್ ದೇವಗನ್ ಅವರಂತಹವರು ಬೇಕು. ಅವರ ಜೊತೆಯಲ್ಲಿ ನಮ್ಮ ಚಿತ್ರವು ಯುವಕರನ್ನು ಫುಟ್‌ಬಾಲ್ ಆಡಲು ಮತ್ತು ಭಾರತ ತಂಡ ಶೀಘ್ರದಲ್ಲೇ ವಿಶ್ವಕಪ್ ಅನ್ನು ತರಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಚಿತ್ರವು ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಇದನ್ನು ಓದಿ: NETFLIX: ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುವ ಈ ಸಿನಿಮಾ, ಸೀರಿಸ್ಗಳು ನಿಮ್ಮ ಮನಸ್ಸು ಗೆಲ್ಲೋದು ಗ್ಯಾರಂಟಿ
ಅಜಯ್ ದೇವಗನ್ ಅವರ ಸ್ಟಾರ್ಟರ್ ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರದೊಂದಿಗೆ ಪೈಪೋಟಿ ನಡೆಸಲಿದೆ. ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರ ಈದ್ ಹಬ್ಬದಂದು ಬಿಡುಗಡೆಯಾಗಲಿದೆ.