ತಿರುವನಂತಪುರಂ: ಚಲನಚಿತ್ರಗಳಲ್ಲಿ ನಟಿಸಬೇಕು, ನಾಯಕ ನಟಿಯಾಗಿ ಮಿಂಚಬೇಕು ಎನ್ನುವ ಆಸೆ ಹೊಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಹೀರೊಯಿನ್ ಮಾಡುವ ಆಸೆ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಲ್ಲಿ ಮಲಯಾಳಂನ ಪ್ರಸಿದ್ಧ ಚಿತ್ರ ನಿರ್ದೇಶಕ ಜಾಸಿಕ್ ಅಲಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ಜಾಸಿಕ್ ಅವರನ್ನು ಬಂಧಿಸಿದ್ದಾರೆ.
ದೂರು ದಾಖಲಾದ ಹಿನ್ನೆಲೆಯಲ್ಲಿ ಜಾಸಿಕ್ ಅಲಿ ಅವರು ಕೇರಳದ ನಡಕ್ಕಾವುವಿನಲ್ಲಿರುವ ಮನೆಯೊಂದರಲ್ಲಿ ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದರು. ಅವರಿಗಾಗಿ ತೀವ್ರ ಶೋಧ ನಡೆಸಿದ ಪೊಲೀಸರು ಕೊನೆಗೂ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೋಕ್ಸೋ ಆರೋಪದಡಿ ಜಾಸಿಕ್ ಅಲಿ ಅವರನ್ನು ಸದ್ಯ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಇದನ್ನೂ ಓದಿ: Viral News: 25 ವರ್ಷದ ರೈತನನ್ನು ಒಂದೇ ಏಟಿಗೆ ನುಂಗಿದ್ದ 23 ಅಡಿ ಉದ್ದದ ಹೆಬ್ಬಾವು!
ಕೋಯಿಕ್ಕೋಡ್‌ನ ಕುದುವಂಗಡ್ ಮೂಲದವರಾಗಿರುವ ಜಾಸಿಕ್ ಅಲಿ (36) ಅಪ್ರಾಪ್ತ ವಯಸ್ಸಿನ ಬಾಲಕಿಗೆ ತನ್ನ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಕೊಡುವುದಾಗಿ ಹೇಳಿದ್ದರು. ಅದೇ ಆಸೆ ತೋರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ್ದರು. ವಿವಿಧ ಸ್ಥಳಗಳಿಗೆ ಆಕೆಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಈ ವಿಚಾರವಾಗಿ ಬಾಲಕಿಯ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಿರ್ದೇಶಕನ ವಿರುದ್ಧ ದೂರು ನೀಡಿತ್ತು. ಕೊಯಿಲಾಂಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ವಿ.ಬಿಜು ಅವರ ನೇತೃತ್ವದ ತಂಡ ಜಾಸಿಕ್‌ಗಾಗಿ ಹುಡುಕಾಟ ನಡೆಸಿ ಅವರನ್ನು ಬಂಧಿಸಿದೆ.
ಜಾಸಿಕ್ ಅಲಿ ಅವರು ಈ ವರ್ಷ ಮಲಯಾಳಂನಲ್ಲಿ ತೆರೆ ಕಂಡ ʼಬೈನರಿʼ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಕೈಲಾಶ್, ಜಾಯ್ ಮ್ಯಾಥ್ಯೂ ಮತ್ತು ನಿರ್ಮಲ್ ಪಲಾಜಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾ ಮೇ 26ರಂದು ಬಿಡುಗಡೆಯಾಗಿತ್ತು.