ಮುಂಬೈ: ಮಮತಾ ಕುಲಕರ್ಣಿ.. ಈ ಹೆಸರು ಕೇಳಿದರೇ ತೊಂಬತ್ತರ ದಶಕದಲ್ಲಿ ಹುಡುಗರಿಗೆ ರೋಮಾಂಚನವಾಗುತ್ತಿತ್ತು. ಶ್ರೀದೇವಿ, ಮಾಧುರಿ ದೀಕ್ಷಿತ್, ಕಾಜೊಲ್‌ರಂಥ ಘಟಾನುಘಟಿ ನಾಯಕಿಯರ ನಡುವೆ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟವರು ಮಮತಾ ಕುಲಕರ್ಣಿ. ತಮ್ಮ 20ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಕಾಜೊಲ್ ತಮ್ಮ ಸೂಜಿಗಣ್ಣು, ಆಕರ್ಷಕ ಮೈಮಾಟ ಮತ್ತು ಉತ್ತಮ ನಟನೆಯಿಂದ ಎಲ್ಲರ ಗಮನ ಸೆಳೆದಾಕೆ. ಸಿನಿಮಾಗಳ ಜತೆಗೆ ಮಾಡೆಲ್ ಆಗಿಯೂ ಮಿಂಚಿದ ಆಕೆ ಸ್ಟಾರ್ ಡಸ್ಟ್ ಮ್ಯಾಗಜಿನ್‌ನಲ್ಲಿ ಎದೆಯನ್ನು ಕೇವಲ ಕೈಗಳಿಂದ ಮುಚ್ಚಿಕೊಂಡು ನೀಡಿದ ಪೋಸ್ ಆ ಕಾಲಕ್ಕೆ ರಾಷ್ಟ್ರೀಯ ಸುದ್ದಿ!
ತಿರಂಗಾ, ಆಶಿಕ್ ಆವಾರಾ, ವಕ್ತ್ ಹಮಾರಾ ಹೈ, ಕ್ರಾಂತಿ ವೀರ್, ಕರಣ್ ಅರ್ಜುನ್, ಸಬ್ಸೇ ಬಡಾ ಖಿಲಾಡಿ, ಘಾತಕ್, ಚೈನಾ ಗೇಟ್, ಸೆವೆನ್ ಸಮುರಾಯ್ ಹೀಗೆ ಹಲವು ಪ್ರಮುಖ ಚಿತ್ರಗಳಲ್ಲಿ ನಟಿಸಿದ ಆಕೆಗೆ ಬಹುದೊಡ್ಡ ಫ್ಯಾನ್ ಫಾಲೋವಿಂಗ್ ಇತ್ತು.
ಆಕೆ ಸಿನಿಮಾ ರಂಗಕ್ಕೆ ಬಂದಾಗ ಕೇವಲ 20 ವರ್ಷ. ಈಗ ಆಕೆಗೆ 50 ವರ್ಷ. ತಮ್ಮ ಇತ್ತೀಚಿನ ಒಂದು ಚಿತ್ರವನ್ನು ಆಕೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಆಕೆಯ ಹೊಸ ರೂಪವನ್ನು ನೋಡಿ ಹಳೆಯ ಅಭಿಮಾನಿಗಳು ಶಾಕ್ ಆಗಿದ್ದಾರೆ. ಯಾಕೆಂದರೆ, ಒಂದು ಕಾಲದ ಪರಮ ಸುಂದರಿ ಈಗ ಮೊದಲಿನ ಹಾಗಿಲ್ಲ ಎನ್ನುವುದು ಅವರ ದೂರು. ನಿಜ, ಕಣ್ಣೋಟದಲ್ಲೇ ಎಲ್ಲರನ್ನೂ ಕೆಡವಿ ಹಾಕುತ್ತಿದ್ದ ಆಕೆ ಈಗ ಮೊದಲಿನಂತಿಲ್ಲ. ಕೆಣಕುತ್ತಿದ್ದ ಕಣ್ಣುಗಳು ಸ್ವಲ್ಪ ಕಾಂತಿ ಕಳೆದುಕೊಂಡಿವೆ. ತುಟಿಗಳ ನಗು ಸ್ವಲ್ಪ ಮಾಸಿದೆ. ನಾಸಿಕವೀಗ ಮೊದಲಿನ ಹಾಗೆ ಸಂಪಿಗೆಯಂತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮುಖ ಸ್ವಲ್ಪ ಬಿಳಿಚಿಕೊಂಡಿದೆ.
90ರ ದಶಕದಲ್ಲಿ ನಟನೆ ಮತ್ತು ಸೌಂದರ್ಯದಿಂದಲೇ ಮನೆ ಮಾತಾಗಿದ್ದ ಮಮತಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಉದ್ಯಮವನ್ನು ತೊರೆದಿದ್ದರು. ಆಗಲೇ ಅಭಿಮಾನಿಗಳಿಗೆ ತುಂಬ ಬೇಸರವಾಗಿತ್ತು. ಇದೀಗ ಇನ್‌ಸ್ಟಾ ಗ್ರಾಂನಲ್ಲಿ ಅವರೇ ಹಂಚಿಕೊಂಡಿರುವ ಫೋಟೊ ನೋಡಿ ಮತ್ತೆ ಬೇಜಾರಾಗುವ ಸರದಿ! ಯಾಕೆಂದರೆ, ಕನಸಿನ ಕನ್ಯೆಯರು ಕೊನೆಯವರೆಗೂ ಒಂದೇ ರೀತಿ ಇರಬೇಕು ಎನ್ನುವುದು ಅಭಿಮಾನಿಗಳ ಅಸೆಬುರುಕತನ!
ಮಮತಾ ಕುಲಕರ್ಣಿ ಮತ್ತು ವಿವಾದಗಳು
ಮಮತಾ ಕುಲಕರ್ಣಿ ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಉತ್ತುಂಗಕ್ಕೆ ಏರಿದವರು. ಮತ್ತು ಅಷ್ಟೆ ವೇಗವಾಗಿ ಕಳೆದು ಹೋದರು ಕೂಡಾ. ಅವರ ಅಕಾಲಿಕ ನಿರ್ಗಮನ ಅಷ್ಟೇ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಒಂದು ಕಾಲದಲ್ಲಿ ಮಮತಾ ಕುಲಕರ್ಣಿ ಜನಪ್ರಿಯತೆ ಎಷ್ಟಿತ್ತೆಂದರೆ ಭೂಗತ ಜಗತ್ತಿಗೂ ಆಕೆ ಫೇವರಿಟ್ ಆಗಿದ್ದರು! ಆಕೆಯನ್ನು ಹಾಕಿಕೊಂಡು ಸಿನಿಮಾ ಮಾಡಿ ಎಂದು ಭೂಗತ ದೊರೆಯಾಗಿದ್ದ ಚೋಟಾ ರಾಜನ್‌ನೇ ನಿರ್ಮಾಪಕರಿಗೆ ಸೂಚನೆ ಕೊಡುತ್ತಿದ್ದ ಎಂಬ ಸುದ್ದಿಗಳೂ ಹರಿದಾಡುತ್ತಿದ್ದವು. ಜತೆಗೆ ಆಕೆಗೇನಾದರೂ ಸಮಸ್ಯೆಯಾದರೇ ಅವನೇ ಮಧ್ಯಪ್ರವೇಶ ಮಾಡುತ್ತಿದ್ದ ಎನ್ನಲಾಗಿದೆ.
ಅದೊಂದು ಸಾರಿ ರಾಜ್ ಕುಮಾರ್ ಸಂತೋಷಿ ಮತ್ತು ಮಮತಾ ಕುಲಕರ್ಣಿ ಮಧ್ಯೆ ಜಗಳವಾಗಿತ್ತು. ಸಂತೋಷಿ ತಮ್ಮ ಚೈನಾ ಗೇಟ್ ಸಿನಿಮಾದಿಂದ ಮಮತಾಗೆ ಗೇಟ್ ಪಾಸ್ ಕೊಟ್ಟಿದ್ದರು. ಆಗ ರಾಜನ್ ಧಮ್ಕಿ ಹಾಕಿ ಮತ್ತೆ ನಾಯಕಿ ಪಾತ್ರ ಕೊಡಿಸಿದ್ದ. ಆದರೆ, ಸಂತೋಷಿ ಬೇರೊಂದು ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದರು. ಚಿತ್ರದಲ್ಲಿ ಚಮ್ಮಾ ಚಮ್ಮಾ ಎನ್ನುವ ಐಟಂ ಸಾಂಗ್ ಹಾಕಿದ್ದರು. ಆ ಕಾಲದಲ್ಲಿ ಇಂಥ ನೃತ್ಯಗಳಿಗೆ ಮಮತಾ ಹೆಸರುವಾಸಿಯಾಗಿದ್ದರೂ ಅದಕ್ಕೆ ಊರ್ಮಿಳಾ ಮಾತೋಂಡ್ಕರ್ ಅವರನ್ನು ಆಯ್ಕೆ ಮಾಡಿದ್ದರು. ಚಿತ್ರ ಅಷ್ಟೇನೂ ಹಿಟ್ ಆಗದಿದ್ದರೂ ಹಾಡು ಮಾತ್ರ ಸೂಪರ್ ಹಿಟ್ ಆಯ್ತು. ಇದರಿಂದ ಉರಿದೆದ್ದು ಹೋದರು ಮಮತಾ ಕುಲಕರ್ಣಿ!
ಒಮ್ಮೆ ಭೂಗತ ಲೋಕದ ನಂಟಿನಿಂದ ಖುಷಿಯಾದ ಮಮತಾ ಕುಲಕರ್ಣಿ ಮತ್ತೆ ಅದೇ ಮತ್ತಿನಲ್ಲಿ ಕಳೆದುಹೋದರು. ಯಶಸ್ಸಿನ ಉತ್ತುಂಗದಲ್ಲಿದ್ದ ಆಕೆಯ ಹೆಸರು ಶಂಕಿತ ಡ್ರಗ್ ಡೀಲರ್ ವಿಕ್ಕಿ ಗೋಸ್ವಾಮಿ ಜತೆಗೆ ಕೇಳಿಬಂದಿತ್ತು. ಗುಜರಾತ್‌ನ ನಿವೃತ್ತ ಪೊಲೀಸ್ ಅಧಿಕಾರಿ ಆನಂದ ಗಿರಿ ಗೋಸ್ವಾಮಿ ಅವರ ಪುತ್ರ ವಿಕ್ಕಿ ಗೋಸ್ವಾಮಿ ಆಗಲೇ ದೊಡ್ಡ ಮಟ್ಟದ ಸ್ಮಗ್ಲರ್ ಆಗಿದ್ದ. ಮುಂದೆ ಅವನೊಂದಿಗೇ ಬದುಕು ಕಳೆದ ಮಮತಾ 2013ರಲ್ಲಿ ಆತನನ್ನು ಮದುವೆಯಾದರು. 2016ರಲ್ಲಿ ವಿಕ್ಕಿ ಗೋಸ್ವಾಮಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಮತಾ ಕುಲಕರ್ಣಿಯ ಬಂಧನವೂ ಆಗಿತ್ತು. ಪ್ರಸಕ್ತ ಕೀನ್ಯಾದಲ್ಲಿ ವಾಸವಾಗಿರುವ ಆಕೆ ಈಗ ಲೇಟೆಸ್ಟ್ ಚಿತ್ರದ ಮೂಲಕ ಮತ್ತೆ ನೆನಪಾಗಿದ್ದಾಳೆ.
ಇದನ್ನೂ ಓದಿ:ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಮತ್ತೊಮ್ಮೆ ವಧು