ಬೆಂಗಳೂರು: ತ್ರಿಶಾ ಕೃಷ್ಣನ್, ಚಿರಂಜೀವಿ ಮತ್ತು ಖುಷ್ಬೂ ಸುಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಮನ್ಸೂರ್ ಅಲಿ ಖಾನ್ಗೆ ತೀವ್ರ ಹಿನ್ನಡೆ ಆಗಿದೆ. ಜತಗೆ ಮದ್ರಾಸ್ ಹೈಕೋರ್ಟ್ ಮನ್ಸೂರ್ ಅಲಿಖಾನ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಕೆಲವು ದಿನಗಳ ಹಿಂದೆ ಮನ್ಸೂರ್ ಅಲಿ ಖಾನ್ ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ನಾನು ʼಲಿಯೋʼ ಸಿನಿಮಾದಲ್ಲಿ ತ್ರಿಶಾ ಜತೆ ನಟಿಸುತ್ತೇನೆ ಎಂದಾಗ ಖುಷಿಯಾಯಿತು. ಬೇರೆ ನಟಿಯರ ಜತೆ ಇದ್ದಂತೆ ತ್ರಿಶಾ ಅವರ ಜತೆಗೂ ಒಂದು ಬೆಡ್‌ರೂಮ್ ಸೀನ್ ಇರುತ್ತದೆ ಎಂದು ಭಾವಿಸಿದ್ದೆ. ನಾನು ತುಂಬ ರೇಪ್ ದೃಶ್ಯಗಳಲ್ಲಿ ನಟಿಸಿರುವ ಕಾರಣ ಇದೆಲ್ಲ ನನಗೆ ಏನೂ ಅನಿಸುವುದಿಲ್ಲ. ಆದರೆ ಸಿನಿಮಾ ತಂಡದವರು ಕಾಶ್ಮೀರದಲ್ಲಿ ಶೂಟಿಂಗ್ ಮಾಡುವ ವೇಳೆ ನನಗೆ ತ್ರಿಶಾ ಅವರನ್ನು ತೋರಿಸಲೇ ಇಲ್ಲ” ಎಂದು ಹೇಳಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.
ತ್ರಿಶಾ ಕೃಷ್ಣನ್, ಚಿರಂಜೀವಿ ಮತ್ತು ಖುಷ್ಬೂ ಸುಂದರ್ ಈ ಬಗ್ಗೆ ಆಕ್ರೋಶ ಹೊರ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಮನ್ಸೂರ್ ಅವರು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತ್ರಿಷಾ, ಚಿರಂಜೀವಿ ಹಾಗೂ ಖುಷ್ಬೂ ಅವರು ಮಾನಹರಣ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಲು ಒಪ್ಪಿಗೆ ನೀಡಬೇಕು ಎಂದು ಕೇಳಿದ್ದರು. ಡಿಸೆಂಬರ್ 11ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸತೀಶ್ ಕುಮಾರ್ ಅವರು ʻʻತ್ರಿಶಾ ಅವರ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಾರೆ. ನಿಜವಾಗಿ ಹೇಳಬೇಕು ಎಂದರೆ ನಟಿ ತ್ರಿಷಾ ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು’ ಎಂದಿದ್ದರು. ಈಗ ಕೋರ್ಟ್ ಮನ್ಸೂರ್ ಅಲಿ ಖಾನ್ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಚೆನ್ನೈನ ಕ್ಯಾನ್ಸರ್ ಸಂಸ್ಥೆಗೆ ಈ ಹಣವನ್ನು ಡಿಪೋಸಿಟ್ ಮಾಡುವಂತೆ ಸೂಚನೆ ನೀಡಿದೆ. ʻಮನ್ಸೂರ್ ಅವರು ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ತಿಳಿದಿರಬೇಕು, ವಿಶೇಷವಾಗಿ ಜನರು ನಟರನ್ನು ನೋಡಿ ಕಲಿಯುತ್ತಾರೆ. ಮಾದರಿಯಾಗಬೇಕು ಹೊರತು ಈ ರೀತಿ ವರ್ತಿಸುವುದಲ್ಲʼʼ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: Mansoor Ali Khan: ಅಸಭ್ಯ ಹೇಳಿಕೆ ನೀಡಿದ್ದಲ್ಲದೆ ತ್ರಿಶಾ ವಿರುದ್ಧವೇ ಮೊಕದ್ದಮೆ; ನಟನಿಗೆ ಕೋರ್ಟ್ ತಪರಾಕಿ
ಮನ್ಸೂರ್ ಅಲಿ ಖಾನ್ ವಿರುದ್ಧ ತ್ರಿಶಾ ಆಕ್ರೋಶ ವ್ಯಕ್ತಪಡಿಸಿದ್ದರು. “ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ ವಿಡಿಯೊ ನೋಡಿದೆ. ಇಂತಹ ಕೀಳು ಅಭಿರುಚಿಯ, ಸ್ತ್ರೀದ್ವೇಷದಿಂದ ಕೂಡಿರುವ, ತುಚ್ಛ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಾನು ಇಂತಹ ವ್ಯಕ್ತಿಯ ಜತೆ ಇದುವರೆಗೆ ತೆರೆ ಹಂಚಿಕೊಂಡಿಲ್ಲ ಎಂಬುದೇ ಸಮಾಧಾನದ ಸಂಗತಿ. ಅಷ್ಟೇ ಅಲ್ಲ, ನಾನು ಸಿನಿಮಾ ಕ್ಷೇತ್ರದಲ್ಲಿ ಇರುವವರೆಗೆ ಈ ವ್ಯಕ್ತಿಯ ಜತೆ ನಟಿಸುವುದಿಲ್ಲ. ಇಂತಹ ವ್ಯಕ್ತಿಗಳು ಮನುಕುಲಕ್ಕೇ ಕೆಟ್ಟ ಹೆಸರು ತರುತ್ತಾರೆ” ಎಂದು ಪೋಸ್ಟ್ ಮಾಡಿದ್ದರು.
ವಿವಾದದ ಬಳಿಕ ಮನ್ಸೂರ್ ಅಲಿ ಖಾನ್ ಸ್ಪಷ್ಟನೆ ನೀಡಿ, “ನಾನು ನಟಿಯರನ್ನು ಗೌರವಿಸುತ್ತೇನೆ. ನನ್ನ ಮಗಳು ತ್ರಿಶಾ ಅವರ ದೊಡ್ಡ ಅಭಿಮಾನಿ. ನಾನು ಉದ್ದೇಶಪೂರ್ವಕವಾಗಿ ನೋವುಂಟು ಮಾಡಬೇಕು ಎಂದು ಹಾಗೆ ಹೇಳಿಲ್ಲ. ತಮಾಷೆಯಾಗಿ ಮಾತನಾಡುವಾಗ ಹಾಗೆ ಹೇಳಿದೆ” ಎಂದಿದ್ದರು. ಬಳಿಕ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು.