Site icon Vistara News

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Action Prince Dhruva Sarja much awaited film Martin to hit the screens on October 11

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ನಟನೆಯ ಬಹುನಿರೀಕ್ಷಿತ, ಪ್ಯಾನ್‌ ವರ್ಲ್ಡ್‌ ಸಿನಿಮಾ ಮಾರ್ಟಿನ್‌ ರಿಲೀಸ್‌ಗೆ ಕೌಂಟ್‌ ಡೌನ್‌ ಶುರುವಾಗಿದೆ. ಅಕ್ಟೋಬರ್ 11 ರಂದು ಭಾರತದಾದ್ಯಂತ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಮಾರ್ಟಿನ್‌ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

ಭರ್ಜರಿ ಬರ್ತ್‌ ಡೇ ಸೆಲೆಬ್ರೆಷನ್‌ಗೆ ಫ್ಯಾನ್ಸ್‌ ಸಜ್ಜು

ಮಾರ್ಟಿನ್‌ ಸಿನಿಮಾಗೂ ಮೊದಲೇ ಧ್ರುವ ಸರ್ಜಾರ ಬರ್ತ್ ಡೇ ಸೆಲೆಬ್ರೆಷನ್‌‌ಗೆ ಫ್ಯಾನ್ಸ್ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಆಟಂ ಬಾಂಬ್ ಧ್ರುವ ಸರ್ಜಾ ನಟನೆಯಲ್ಲಿ ರಿಲೀಸ್ ಆಗಿರುವುದುದು ನಾಲ್ಕೇ ಸಿನಿಮಾವಾದರೂ, 40 ಸಿನಿಮಾ ಮಾಡಿರುವಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅಭಿಮಾನಿಗಳನ್ನು ವಿಐಪಿ ಅಂತೇಳು ಧ್ರುವ, ಅವರಿಗಾಗಿಯೇ ಒಂದು ದಿನ ಮೀಸಲಿಟ್ಟಿದ್ದಾರೆ. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿಯಾಗುವ ಬಹದ್ಧೂರ್, ಈ ಬಾರಿ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಇರುವ ಜಾಗಕ್ಕೆ ಭೇಟಿ ಕೊಡುತ್ತಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿರುವ ಧ್ರುವ ಮನೆಯ ರಸ್ತೆಯು, ಅಭಿಮಾನಿಗಳಿಂದ ತುಂಬಿ ಹೋಗಿತ್ತು.

ಧ್ರುವ ಹುಟ್ಟುಹಬ್ಬಕ್ಕೂ ಮೊದಲು ಮಾರ್ಟಿನ್ ಚಿತ್ರತಂಡ ಅಕ್ಟೋಬರ್ 4ರಂದು ಹೈದರಾಬಾದ್‌ನಲ್ಲಿ ಧ್ರುವ ಅವರ ಇಂಟ್ರೋಡಕ್ಷನ್ ಸಾಂಗ್ ರಿಲೀಸ್ ಮಾಡುತ್ತಿದೆ. ಅಕ್ಟೋಬರ್ 5ರಂದು ಹುಬ್ಬಳಿಯಲ್ಲಿ ಧ್ರುವ ತಮ್ಮ ಫ್ಯಾನ್ಸ್‌ನ ಮೀಟ್ ಮಾಡಲಿದ್ದಾರೆ. ತಮ್ಮ ಹುಟ್ಟುಹಬ್ಬದಂದು ದಾವಣಗೆರೆಯಲ್ಲಿ ಮಾರ್ಟಿನ್ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿದ್ದಾರೆ. ಒಟ್ಟಾರೆ ಉತ್ತರ ಕರ್ನಾಟಕ ಜನರ ಜತೆ ಧ್ರುವ ಈ ಬಾರಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

ಮುಂಬೈನಲ್ಲಿ ಸಾಂಗ್‌ ರಿಲೀಸ್‌

ಹುಟ್ಟುಹಬ್ಬದ ನಂತರ ಅಕ್ಟೋಬರ್ 8ರಂದು ಮುಂಬೈನಲ್ಲಿ ಮಾರ್ಟಿನ್ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗುತ್ತಿದೆ. ಅಂದ‌ ಹಾಗೆ ಮಾರ್ಟಿನ್ ಒಂದಲ್ಲ ಒಂದು ಕಾರಣಕ್ಕೆ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.ಇದೇ ತಿಂಗಳ 11ರಂದು ಮಾರ್ಟಿನ್ ಆಲ್ ಓವರ್ ಇಂಡಿಯಾ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಅತಿ ಹೆಚ್ಚು ಬಜೆಟ್‌ನ ಮಾರ್ಟಿನ್‌, ಶೇಖಡಾ 80ರಷ್ಟು ಚಿತ್ರವನ್ನು ಸೆಟ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಹಾಲಿವುಡ್‌ನ ಫಾಸ್ಟ್ ಆ್ಯಂಡ್ ಪ್ಯೂರಿಯಸ್ ಚಿತ್ರ ನೋಡಿದ ಅನುಭವ ಆಗುತ್ತೆ ಎನ್ನುವ ಮಾತನ್ನು ಸಿನಿಮಾ ತಂಡ ಹೇಳಿಕೊಂಡಿದೆ.

ಮಾರ್ಟಿನ್ ತಂಡದಿಂದ ನಿರ್ದೇಶಕರೇ ಔಟ್!

ಮಾರ್ಟಿನ್ ಗೆಲ್ಲುತ್ತೆ ಎಂಬ ಭರವಸೆ ಕೂಡ ಗಾಂಧಿನಗರಕ್ಕಿದೆ. ಆದರೆ ಈ ಸಮಯದಲ್ಲಿ ಜತೆಯಾಗಿರಬೇಕಿದ್ದ ತಂಡದಲ್ಲಿ ಬಿರುಕು ಮೂಡಿದೆ. ಚಿತ್ರದ ಪ್ರಚಾರದಿಂದ ನಿರ್ದೇಶಕ ಎಪಿ ಅರ್ಜುನ್ ಅವರನ್ನು ದೂರ ಇಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮಾರ್ಟಿನ್‌ಗೆ ದ್ರೋಹದ ವಿಚಾರ ಜಗಜ್ಜಾಹೀರಾಗಿತ್ತು. ಚಿತ್ರದ ಹೆಸರಿನಲ್ಲಿ ನಿರ್ಮಾಪಕ ಉದಯ್ ಮೆಹ್ತಾಗೆ ನಿರ್ದೇಶಕ ಎ.ಪಿ.ಅರ್ಜುನ್ ಅವರಿಂದ ಮೋಸವಾಗಿದೆ. ಕೇವಲ ಸಿಜಿ ಮತ್ತು ವಿಎಫ್‌ಎಕ್ಸ್ ಒಂದರಲ್ಲೇ 73 ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕೆ ಉದಯ್ ಮೆಹ್ತಾ ಮತ್ತು ಎಪಿ ಅರ್ಜುನ್ ನಡುವೆ ಸಂಬಂಧ ಹಳಸಿದೆ. ತಮ್ಮದೇ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಎಪಿ ಅರ್ಜುನ್ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆ ಅರ್ಜಿ ವಜಾ ಆಗಿದೆ ಎಂದು ಹೊಸ ಬಾಂಬ್ ಕೂಡ ಉದಯ್ ಮೆಹ್ತಾ ಸಿಡಿಸಿದ್ದಾರೆ.

ಮಾರ್ಟಿನ್ ಚಿತ್ರದ ಕಥೆ ಚಿತ್ರಕಥೆಯನ್ನು ಆ್ಯಕ್ಷನ್ ಹೀರೋ ಅರ್ಜುನ್ ಸರ್ಜಾ ಬರೆದಿದ್ದಾರೆ. ಹೀಗಿರುವಾಗ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಬೇಕಿದ್ದ ”ಮಾರ್ಟಿನ್‌” ಚಿತ್ರತಂಡದಲ್ಲಿ, ಸಿನಿಮಾ ರಿಲೀಸ್‌ಗೂ ಮೊದಲೇ ಬಿರುಕು ಮೂಡಿದೆ. ಇವೆಲ್ಲದರ ನಡುವೆ ಅಕ್ಟೋಬರ್ 6 ರಂದು ಧ್ರುವ ಸರ್ಜಾ ಬರ್ತ್ ಡೇ ಸೆಲೆಬ್ರೇಶನ್ ಮಾಡಿ ಮತ್ತೊಂದು ಮೆಗಾ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version