Site icon Vistara News

Kummatty Film | ಮಲಯಾಳಂನ ಕ್ಲಾಸಿಕ್‌ ಕುಮ್ಮಟ್ಟಿ ಸಿನಿಮಾ TFFನಲ್ಲಿ ಪ್ರದರ್ಶನ

Kummatty Film

ಬೆಂಗಳೂರು: ನಾಲ್ಕು ದಶಕಗಳ ಹಿಂದಿನ ಮಲಯಾಳಂನ ಕುಮ್ಮಟ್ಟಿ ಚಿತ್ರದ (Kummatty Film) ಕುರಿತು ಅಮೆರಿಕದ ಪ್ರಖ್ಯಾತ ಫಿಲ್ಮ್‌ಮೇಕರ್‌ ಮಾರ್ಟಿನ್‌ ಸ್ಕಾರ್ಸೆಸ್‌ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಸಿನಿಮಾವನ್ನು ಪ್ರಶಂಶಿಸಿ ಸಾಕಷ್ಟು ವಿಚಾರಗಳನ್ನು ಬರೆದುಕೊಂಡಿದ್ದಾರೆ.

1979ರ ಮಲಯಾಳಂ ಕ್ಲಾಸಿಕ್ ಸಿನಿಮಾ ಕುಮ್ಮಟ್ಟಿಯ ಮರುಸ್ಥಾಪಿತ ಆವೃತ್ತಿಯನ್ನು ಮಾರ್ಟಿನ್‌ ಸ್ಕಾರ್ಸೆಸ್‌ ಅವರ ದಿ ಫಿಲ್ಮ್ ಫೌಂಡೇಶನ್‌ನಲ್ಲಿ (TFF) ಪ್ರದರ್ಶಿಸಲಾಗುವುದು ಎಂದು ಚಲನಚಿತ್ರ ನಿರ್ಮಾಪಕರು ಘೋಷಿಸಿದ್ದಾರೆ.

ಅರವಿಂದನ್ ಗೋವಿಂದನ್ ನಿರ್ದೇಶನದ ಈ ಚಿತ್ರವನ್ನು ದಿ ಫಿಲ್ಮ್ ಫೌಂಡೇಶನ್ ರಿಸ್ಟೋರೇಶನ್ ಸ್ಕ್ರೀನಿಂಗ್ ರೂಮ್‌ನಲ್ಲಿ ಪ್ರದರ್ಶಿಸಲಾಗುತ್ತಿದೆ. ಇದು ಹಳೆಯ ಚಲನಚಿತ್ರಗಳ ಮರುಸ್ಥಾಪಿತ ಆವೃತ್ತಿಗಳನ್ನು ಪ್ರಸ್ತುತಪಡಿಸುವ ಉಚಿತ ವರ್ಚುವಲ್ ಸ್ಥಳವಾಗಿದೆ ಎಂದು ಮಾರ್ಟಿನ್‌ ಸ್ಕಾರ್ಸೆಸ್‌ ಸೋಮವಾರ (ಜು.11) ತಮ್ಮ ಇನ್ಸ್ಟಾ ಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಫಿಲ್ಮ್ ಫೌಂಡೇಶನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಇದನ್ನು 1990ರಲ್ಲಿ ಮಾರ್ಟಿನ್‌ ಸ್ಕಾರ್ಸೆಸ್‌ ಸ್ಥಾಪಿಸಿದ್ದರು.

ಇದನ್ನೂ ಓದಿ | Tyson: ಮಲಯಾಳಂಗೆ ಹೊಂಬಾಳೆ ಫಿಲ್ಮ್ಸ್‌ ಎಂಟ್ರಿ, ಸೂಪರ್‌ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್ ಸಾ‍ಥ್‌

ಏನಿದು ಕುಮ್ಮಟ್ಟಿ?

ಕುಮ್ಮಟ್ಟಿ ಎಂಬುದು ಮಧ್ಯ ಕೇರಳದ ಜಾನಪದ ಕತೆಯ ರೂಪಾಂತರವಾಗಿದೆ. ಪೌರಾಣಿಕ ಮತ್ತು ನೈಜತೆಯ ಎರಡು ಅಂಶಗಳ ಸಮ್ಮಿಶ್ರವೇ ಕುಮ್ಮಟ್ಟಿ ಎಂಬುದಾಗಿದೆ. ಈ ಚಿತ್ರದಲ್ಲಿ ಆಕರ್ಷಕರವಾದ ಕಥೆ ಮತ್ತು ಬೆರಗುಗೊಳಿಸುವಂತಹ ಸನ್ನಿವೇಶಗಳು ಇದ್ದು, ಸಿನಿಪ್ರಿಯರು ನೋಡಲೇಬೇಕಾದ ಸಿನಿಮಾವಾಗಿದೆ ಎಂದು ಮಾರ್ಟಿನ್‌ ಸ್ಕಾರ್ಸೆಸ್‌ ಈ ಹಿಂದೆ ಹೇಳಿಕೊಂಡಿದ್ದರು.

ಗೌರವಕ್ಕೆ ಪಾತ್ರವಾದ ಕುಮ್ಮಟ್ಟಿ

1979ರಲ್ಲಿ ಕುಮ್ಮಟ್ಟಿ ಸಿನಿಮಾವನ್ನು ಅರವಿಂದನ್‌ ಅವರೇ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ರಾಮುನ್ನಿ, ಮಾಸ್ಟರ್ ಅಶೋಕ್ ಮತ್ತು ವಿಲಾಸಿನಿ ರೀಮಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. 1979ರಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿತ್ತು.

ಮಾರ್ಟಿನ್‌ ಸ್ಕಾರ್ಸೆಸ್‌ ಪ್ರಶಂಶಿಸಿದ ಕುಮ್ಮಟ್ಟಿ

ಮಾರ್ಟಿನ್‌ ಸ್ಕಾರ್ಸೆಸ್‌ ಅವರು ಈಗ ಪೋಸ್ಟ್‌ ಹಂಚಿಕೊಂಡಿದ್ದಾರೆ. ಕೇರಳದ ಜಾನಪದ ಚಿತ್ರವನ್ನು ನೆನಪಿಸಿದ್ದಕ್ಕಾಗಿ ಕಮೆಂಟ್‌ ಮೂಲಕ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಪೋಸ್ಟ್‌ ಈಗಾಗಲೇ ೨ ಲಕ್ಷ ಲೈಕ್‌ಗಳನ್ನು ಪಡೆದುಕೊಂಡಿದೆ. ಇದರ ಹೊರತಾಗಿ ಈ ಸಿನಿಮಾ ನಿರ್ಮಾಣವಾಗಿ ಹಲವು ವರ್ಷಗಳು ಸಂದಿರುವ ಪರಿಣಾಮ ಸಿನಿಮಾ ಕಲರ್‌ ಗ್ರೇಡಿಂಗ್ ಕಳೆದುಕೊಂಡಿದ್ದು, ಅಂತಾರಾಷ್ಟ್ರೀಯ ಮರುಸ್ಥಾಪನೆ ಯೋಜನೆ‌ ಬಂದಿದ್ದರಿಂದ ಮತ್ತೆ ಮೂಲ ಬಣ್ಣದಲ್ಲಿ ಸಿನಿಮಾವನ್ನು ನೋಡಬಹುದಾಗಿದೆ.

ಶಿವೇಂದ್ರ ಸಿಂಗ್ ಡುಂಗರ್ಪುರ್ ಕಂಡ ನಿರ್ದೇಶಕ

ಕುಮ್ಮಟ್ಟಿ ಸಿನಿಮಾ ಬಗ್ಗೆ ಫಿಲ್ಮ್ ಹೆರಿಟೇಜ್ ಫೌಂಡೇಶನ್ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಶಿವೇಂದ್ರ ಸಿಂಗ್ ಡುಂಗರ್ಪುರ್ ಮಾತನಾಡಿ, ʻಕುಮ್ಮಟ್ಟಿ ಚಿತ್ರ ಸೇರಿದಂತೆ ಅರವಿಂದನ್ ಅವರ ಇನ್ನೂ ಐದು ಚಲನಚಿತ್ರಗಳ ನಿರ್ಮಾಪಕರಾದ ಜನರಲ್ ಪಿಕ್ಚರ್ಸ್‌ನ ಕೆ. ರವೀಂದ್ರನಾಥನ್ ನಾಯರ್ ಅವರನ್ನು ಭೇಟಿ ಮಾಡಲು ಕೊಲ್ಲಂಗೆ ಪ್ರಯಾಣ ಬೆಳೆಸಿದ್ದೆ. ಮರುಸ್ಥಾಪನೆಗೆ ಅನುಮತಿ ನೀಡಲು ಮತ್ತು ತಂಡಕ್ಕೆ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ (NFAI) ನಿಂದ ಪ್ರಿಂಟ್‌ಗಳನ್ನು ತರಲು ಅವರು ಒಪ್ಪಿಕೊಂಡರು ಎಂದರು.

ಅರವಿಂದನ್ ಅವರ ಚಲನಚಿತ್ರಗಳು ಅಗ್ರಸ್ಥಾನದಲ್ಲಿವೆ. ಅವರ ಹಲವಾರು ಸಿನಿಮಾಗಳು ಅರ್ಹವಾದ ಮನ್ನಣೆ ಪಡೆದಿಲ್ಲ. ಇನ್ನೂ ದುಃಖಕರವಾದ ವಿಚಾರ ಅಂದರೆ ಅವರ ಚಲನಚಿತ್ರಗಳ ಎಲ್ಲ ಮೂಲ ಕ್ಯಾಮೆರಾ ನೆಗೆಟಿವ್‌ಗಳು ಕಳೆದುಹೋಗಿವೆ ಮತ್ತು ನಮ್ಮ ಬಳಿಯಿರುವುದು ಪ್ರಿಂಟ್‌ಗಳು, ಉತ್ತಮ ಸ್ಥಿತಿಯಲ್ಲಿಲ್ಲʼ ಎಂದು ಡುಂಗರ್ಪುರ್ ಕಳೆದ ವರ್ಷ ಹೇಳಿಕೆ ನೀಡಿದ್ದರು.

ಇದನ್ನೂ ಓದಿ | Vikrant Rona | ವಿಕ್ರಾಂತ್ ರೋಣ ಚಿತ್ರದ ʼಹೇ ಫಕೀರಾʼ ಲಿರಿಕಲ್ ಸಾಂಗ್‌ ಔಟ್‌

Exit mobile version