ಮುಂಬೈ: ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದಿರುವ ಬಾಲಿವುಡ್ ಚಿತ್ರ `ಮೆರ‍್ರಿ ಕ್ರಿಸ್‌ಮಸ್ʼ (Merry Christmas) ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿದೆ. ಜನವರಿ 12ರಂದು ಬಿಡುಗಡೆಯಾದ ಈ ಚಿತ್ರ ಎರಡು ದಿನಗಳಲ್ಲಿ ಕೇವಲ 6.50 ಕೋಟಿ ರೂ. ಗಳಿಸಿದೆ ಎಂದು ಮೂಲಗಳು ತಿಳಿಸಿವೆ (Merry Christmas Box Office Day 2).
ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಮೊದಲ ಬಾರಿ ತೆರೆ ಹಂಚಿಕೊಂಡಿರುವ ಈ ಥ್ರಿಲ್ಲರ್ ಚಿತ್ರ ಬಿಡುಗಡೆಯಾದ ಮೊದಲ ದಿನ ಕಲೆಕ್ಟ್ ಮಾಡಿದ್ದು 2.55 ಕೋಟಿ ರೂ. ಮಾತ್ರ. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿರುವ `ಮೆರ‍್ರಿ ಕ್ರಿಸ್‌ಮಸ್ʼ ಸಿನಿಮಾದ ಎರಡನೇ ದಿನದ ಗಳಿಕೆಯಲ್ಲಿ ತುಸು ಚೇತರಿಕೆ ಕಂಡು ಬಂದಿದೆ. ಶನಿವಾರ (ಜನವರಿ 13) ಸುಮಾರು 3.50 ಕೋಟಿ ರೂ. ಗಳಿಸಿದೆ. ಆ ಮೂಲಕ 6.50 ಕೋಟಿ ರೂ. ಕಲೆಕ್ಷನ್ ಮಾಡಿದಂತಾಗಿದೆ.
ನಿರ್ದೇಶಕ ಶ್ರೀರಾಮ್ ರಾಘವನ್ ʻಮೆರ‍್ರಿ ಕ್ರಿಸ್‌ಮಸ್ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕ್ರಿಸ್‌ಮಸ್‌ನ ಮುನ್ನಾ ದಿನದಂದು ಇಬ್ಬರು ಅಪರಿಚಿತರ ಮುಖಾಮುಖಿಯಾಗುವ ಘಟನೆ ಸುತ್ತ ಕಥೆ ಸಾಗುತ್ತದೆ. ಭಾವೋದ್ರಿಕ್ತ ಪ್ರಣಯದ ಸಂಜೆ ದುಃಸ್ವಪ್ನವಾಗಿ ಬದಲಾಗುವುದನ್ನು ನಿರ್ದೇಶಕ ಶ್ರೀರಾಮ್ ರಾಘವನ್ ಥ್ರಿಲ್ಲರ್ ಶೈಲಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಹಿಂದಿ ಚಿತ್ರದಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ರಾಧಿಕಾ ಶರತ್ ಕುಮಾರ್, ಷನ್ಮುಖರಾಜ, ಕೆವಿನ್ ಜೈ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ಈ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಾಧಿಕಾ ಆಮ್ಟೆ ಮತ್ತು ಅಶ್ವಿನಿ ಕಲ್ಶೇಖರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಗಮನ ಸೆಳೆದ ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್
ಈ ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ಕೂಡ ಕೇಳಿ ಬಂದಿದೆ. ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಸೀಟಿನ ಅಂಚಿಗೆ ಕೂರಿಸುವ ಥ್ರಿಲ್ಲರ್ ಎಂದು ನೋಡುಗರು ಅಭಿಪ್ರಾಯ ಪಟ್ಟಿದ್ದು, ಕ್ರಮೇಣ ಗಳಿಕೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
2023ರಲ್ಲಿ ತೆರೆಕಂಡ ʼಮುಂಬೈಕರ್ʼ ಚಿತ್ರದ ಮೂಲಕ ವಿಜಯ್ ಸೇತುಪತಿ ಬಾಲಿವುಡ್‌ಗೆ ಕಾಲಿಟ್ಟದ್ದರು. ಜಿಯೋ ಸಿನಿಮಾ ಒಟಿಟಿಯಲ್ಲಿ ಇದು ತೆರೆ ಕಂಡಿತ್ತು. ಬಳಿಕ ವಿಜಯ್ ಸೇತುಪತಿ ಶಾರುಖ್ ಖಾನ್-ನಯನತಾರಾ ಅಭಿನಯದ ʼಜವಾನ್ʼ ಚಿತ್ರದ ಖಳ ನಾಯಕನ ಪಾತ್ರದಲ್ಲಿ ಮಿಂಚಿದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂ.ಗಿಂತ ಹೆಚ್ಚಿನ ಕಲೆಕ್ಷನ್ ಮಾಡಿತು. ಈ ಚಿತ್ರದ ಕಾಳಿ ಗಾಯಕ್ವಾಡ್ ಪಾತ್ರ ವಿಜಯ್ ಸೇತುಪತಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಸದ್ಯ ʼವಿಧುತಲೈ ಪಾರ್ಟ್ 2ʼ ಮತ್ತು ʼಮಹಾರಾಜʼ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.
ಇತ್ತ ಕತ್ರಿನಾ ಕೈಫ್ ʼಟೈಗರ್ 3ʼ ಚಿತ್ರದ ಮೂಲಕ ಸಾಧಾರಣ ಯಶಸ್ಸು ಗಳಿಸಿದ್ದಾರೆ. ಸಲ್ಮಾನ್ ಖಾನ್ ಜತೆ ನಟಿಸಿದ್ದ ʼಟೈಗರ್ 3ʼ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಿರಲಿಲ್ಲ. ಹೀಗಾಗಿ ಬಹು ದೊಡ್ಡ ಗೆಲುವಿಗಾಗಿ ಅವರು ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ `ಮೆರ‍್ರಿ ಕ್ರಿಸ್‌ಮಸ್ʼ ಕಲೆಕ್ಷನ್ ಹೆಚ್ಚುತ್ತ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ