ಮುಂಬೈ: ಹಾಲಿವುಡ್ ನಟ ಟಾಮ್ ಕ್ರೂಸ್ ಅಭಿನಯದ ʼMission Impossible Dead Reckoning: Part 1′ (MI 7 Movie) ಸಿನಿಮಾ ಬುಧವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಟಾಮ್ ಕ್ರೂಸ್ ಅವರು ಹಯ್ಲೆ ಅಟ್ವೆಲ್ ಅವರೊಂದಿಗೆ ಸೇರಿಕೊಂಡು ಹಲವಾರು ಸಾಹಸಮಯ ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಚಿತ್ರದ ಕ್ಲೈಮ್ಯಾಕ್ಸ್ ಮಾತ್ರ ಶಾರುಖ್ ಅವರ ಪಠಾಣ್ ಸಿನಿಮಾದಿಂದ ಬಟ್ಟಿ ಇಳಿಸಿದಂತಿದೆ ಎನ್ನುತ್ತಿದ್ದಾರೆ ವೀಕ್ಷಕರು.
MI 7 ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರೈಲ್ವೆ ಸೇತುವೆ ಬಾಂಬ್ ಇಂದ ಸ್ಫೋಟಗೊಳ್ಳುತ್ತದೆ. ಆಗ ಟಾಮ್ ಕ್ರೂಸ್ ಮತ್ತು ಹಯ್ಲೆ ಅಟ್ವೆಲ್ ಅವರು ರೈಲಿನ ಮೇಲಕ್ಕೆ ಜಿಗಿದು ಅದರ ಮೇಲೆ ಓಡುವ ಸೀನ್ ಇದೆ. ಇದೇ ರೀತಿಯ ಸೀನ್ ಶಾರುಖ್ ನಟನೆಯ ಪಠಾಣ್ ಸಿನಿಮಾದಲ್ಲೂ ಇದೆ. ಅದರಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇಬ್ಬರೂ ರೈಲಿನ ಮೇಲೆ ಓಡುವ ದೃಶ್ಯವಿದೆ. ಹಾಗಾಗಿ ಹಾಲಿವುಡ್ ಸಿನಿಮಾ ಕೂಡ ಬಾಲಿವುಡ್ ಸಿನಿಮಾದಿಂದ ಕದಿಯುವ ಕೆಲಸ ಮಾಡಿದೆ ಎಂದು ಬಾಲಿವುಡ್ ಅಭಿಮಾನಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: Viral Video: ಅಬ್ಬಾ ಮಳೆಯೇ; ಮನಾಲಿಯಲ್ಲಿ 4 ಅಂತಸ್ತಿನ ಹೋಟೆಲನ್ನು ಅರೆಕ್ಷಣದಲ್ಲಿ ನುಂಗಿದ ಪ್ರವಾಹ!
ಈ MI 7 ಸಿನಿಮಾದ ಬಗ್ಗೆ ಈಗಾಗಲೇ ಅತ್ಯದ್ಭುತ ಪ್ರತಿಕ್ರಿಯೆ ಕೇಳಿಬರುತ್ತಿದೆ. ಸಿನಿಮಾದ 10 ನಿಮಿಷಗಳ ಕ್ಲೈಮ್ಯಾಕ್ಸ್ ಮೈ ರೋಮಾಂಚನ ಮಾಡಿಸುವಂತಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ನಂತರ ʼMission Impossible Dead Reckoning Part 2′ ಕೂಡ ತಯಾರಾಗಲಿದೆ. ಅದು 2024ರಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ‘MI: Falloutʼ ಸಿನಿಮಾದ ನಂತರದ ಭಾಗವಾಗಿ ಈಗ MI 7 ಸಿನಿಮಾ ತೆರೆಗೆ ಬಂದಿದೆ.
MI 1 ಸಿನಿಮಾ 1996ರಲ್ಲಿ ಬಿಡುಗಡೆಯಾಗಿತ್ತು. ಆಗಲೇ ಆ ಸಿನಿಮಾ ಭಾರತದಲ್ಲಿ 2 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿತ್ತು. 2000ನೇ ಇಸವಿಯಲ್ಲಿ ಬಿಡುಗಡೆಯಾದ MI 2 ಸಿನಿಮಾ ದೇಶದಲ್ಲಿ 7 ಕೋಟಿ ರೂ. ಗಳಿಸಿಕೊಂಡಿತು. 2006ರಲ್ಲಿ ಬಿಡುಗಡೆಯಾದ MI 3 ಸಿನಿಮಾ 10 ಕೋಟಿ ರೂ. ಗಳಿಸಿತು. ಸಿನಿಮಾದ ನಾಲ್ಕನೇ ಭಾಗ 2011ರಲ್ಲಿ ಬಿಡುಗಡೆಯಾಗಿ ದೇಶದಲ್ಲಿ 46 ಕೋಟಿ ಗಳಿಸುವಲ್ಲಿ ಯಶಸ್ವಿಯಾಯಿತು. ಐದನೇ ಭಾಗ 2015ರಲ್ಲಿ ಬಿಡುಗಡೆಯಾಗಿ ದೇಶಾದ್ಯಂತ 54 ಕೋಟಿ ರೂ. ಗಳಿಸಿತು. MI 6 2018ರಲ್ಲಿ ಬಿಡುಗಡೆಯಾಗಿ 80 ಕೋಟಿ ರೂ. ಗಳಿಸಿತು. ಇದೀಗ ಬಿಡುಗಡೆಯಾಗಿರುವ MI 7 ಭಾರತದಲ್ಲಿ 200 ಕೋಟಿ ರೂ. ಗಳಿಸಬಹುದು ಎನ್ನುವ ಅಂದಾಜಿದೆ.