ಹೈದರಾಬಾದ್: ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಹಾಡಿನ ಸಂಗೀತ ನಿರ್ದೇಶಕರಾಗಿರುವ ಎಂ.ಎಂ.ಕೀರವಾಣಿ (MM Keeravani) ಮತ್ತು ಹಾಡಿಗೆ ಸಾಹಿತ್ಯ ಬರೆದಿರುವ ಚಂದ್ರ ಬೋಸ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅವರಿಗೆ ಇಡೀ ದೇಶವೇ ಶುಭ ಹಾರೈಸುತ್ತಿದೆ. ಹಾಗೆಯೇ ಕಾರ್ಪೆಂಟರ್ ಖ್ಯಾತಿಯ ರಿಚರ್ಡ್ ಕಾರ್ಪೆಂಟರ್ ಅವರೂ ಈ ಜೋಡಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನಾಟು ನಾಟು ಹಾಡು ಮತ್ತು ಕೀರವಾಣಿ – ಈಗ ಸ್ವರ್ಗಕ್ಕೆ ಒಂದೇ ಗೇಣು!
ʼಟಾಪ್ ಆಫ್ ದಿ ವರ್ಲ್ಡ್ʼ ಹಾಡಿನ ತುಣಕನ್ನು ಹಾಡಿ ರಿಚರ್ಡ್ ಅವರ ಕುಟುಂಬ ಕೀರವಾಣಿ ಅವರಿಗೆ ಶುಭ ಹಾರೈಸಿದೆ. ರಿಚರ್ಡ್ ಅವರು ಪಿಯಾನೋ ನುಡಿಸಿದ್ದರೆ, ಅವರ ಕುಟುಂಬದ ಇನ್ನಿಬ್ಬರು ಹೆಣ್ಣು ಮಕ್ಕಳು ಹಾಡನ್ನು ಹಾಡಿದ್ದಾರೆ. ಈ ವಿಡಿಯೊವನ್ನು ರಿಚರ್ಡ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಕೀರವಾಣಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಈ ವಿಡಿಯೊ ಕಂಡೊಡನೆ ಕೀರವಾಣಿ ಅವರು ಭಾವುಕರಾಗಿದ್ದಾರೆ. ವಿಡಿಯೊವನ್ನು ಹಂಚಿಕೊಂಡಿರುವ ಅವರು, “ಇದು ನಾನು ಸ್ವಲ್ಪವೂ ನಿರೀಕ್ಷಿಸದ ವಿಷಯ. ಸಂತೋಷದಿಂದ ಕಣ್ಣೀರು ಹರಿಯುತ್ತದೆ. ಇದು ನನಗೆ ಈ ಜಗತ್ತಲ್ಲಿ ಸಿಕ್ಕ ಅತ್ಯಮೂಲ್ಯ ಉಡುಗೊರೆ” ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ ಈ ವಿಡಿಯೊ ಬಗ್ಗೆ ಆರ್‌ಆರ್‌ಆರ್ ನಿರ್ದೇಶಕ ಹಾಗೂ ಕೀರವಾಣಿ ಅವರ ಸೋದರ ಸಂಬಂಧಿ ರಾಜಮೌಳಿ ಅವರೂ ಮಾತನಾಡಿದ್ದಾರೆ. “ರಿಚರ್ಡ್ ಸರ್, ಈ ಆಸ್ಕರ್ ಅಭಿಯಾನದ ಉದ್ದಕ್ಕೂ, ಆಸ್ಕರ್ ಗೆಲ್ಲುವ ಮೊದಲು ಅಥವಾ ನಂತರ ನನ್ನ ಸಹೋದರ ತನ್ನ ಭಾವನೆಗಳನ್ನು ಹೊರಹಾಕದೆ ಶಾಂತವಾಗಿದ್ದ. ಆದರೆ ಇದನ್ನು ನೋಡಿದ ಕ್ಷಣದಲ್ಲಿ ಅವನ ಕೆನ್ನೆಯ ಮೇಲೆ ಹರಿಯುವ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಮ್ಮ ಕುಟುಂಬಕ್ಕೆ ಇದು ಸ್ಮರಣೀಯ ಕ್ಷಣ. ತುಂಬಾ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.