Site icon Vistara News

Oscars 2023 : ಆಸ್ಕರ್ ವಿಜೇತ ʼನಾಟು ನಾಟುʼ ಹಾಡಿನ ರೂವಾರಿ ಇವರು

#image_title

ಹೈದರಾಬಾದ್:‌ ದಕ್ಷಿಣ ಭಾರತದ ಪ್ರಸಿದ್ಧ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರ ನಿರ್ದೇಶನದ ʼಆರ್‌ಆರ್‌ಆರ್‌ʼ ಸಿನಿಮಾದ ʼನಾಟು ನಾಟುʼ ಹಾಡು ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸಿದೆ. ಗೋಲ್ಡನ್ಸ್‌ ಗ್ಲೋಬ್ಸ್‌ ಹಾಡನ್ನು ತನ್ನದಾಗಿಸಿಕೊಂಡಿದ್ದ ಹಾಡು ಈಗ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯನ್ನೂ ತನ್ನ ಮುಡಿಗೇರಿಸಿಕೊಂಡಿದೆ. ಈ ಹಾಡಿಗಾಗಿ ಪರಿಶ್ರಮಿಸಿದವರು ಅನೇಕರು. ಹಾಡಿನ ರೂವಾರಿಯಾಗಿದ್ದು ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ(MM Keeravani). ಯಾರು ಈ ಕೀರವಾಣಿ, ಅವರ ಹಿನ್ನೆಲೆಯೇನು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ(Oscars 2023).

ಇದನ್ನೂ ಓದಿ: Oscars 2023: ಆಸ್ಕರ್ ಪ್ರಶಸ್ತಿ ಸ್ವೀಕರಿಸಿ RRR ಚಿತ್ರದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಹೇಳಿದ್ದೇನು?
ಕೀರವಾಣಿ ಅವರ ಪೂರ್ತಿ ಹೆಸರು ಕೊಡುರಿ ಮರಾಕಥಮಣಿ ಕೀರವಾಣಿ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕೊವೂರಿನಲ್ಲಿ ಜನಿಸಿದವರು. ಇವರ ತಾಯಿ ಭಾನುಮತಿ ಅವರು ನಿರ್ದೇಶಕ ರಾಜಮೌಳಿ ಅವರ ಚಿಕ್ಕಮ್ಮ. ಕೀರವಾಣಿ ಅವರು 1980ರಲ್ಲಿಯೇ ಸಂಗೀತ ನಿರ್ದೇಶನ ಆರಂಭಿಸಿದವರು. ಇವರ ವೃತ್ತಿ ಬದುಕಿನಲ್ಲಿ ಒಳ್ಳೆಯ ತಿರುವು ತಂದುಕೊಟ್ಟಿದ್ದು 1990ರ ʼಮನಸು ಮಮಥಾʼ ಸಿನಿಮಾ. ರಾಮ್‌ಗೋಪಾಲ್‌ ವರ್ಮಾ ಅವರ ʼಕ್ಷಣ ಕ್ಷಣಂʼ ಮತ್ತು ʼಅನ್ನಮಯ್ಯʼ ಸಿನಿಮಾಗಳಲ್ಲೂ ಇವರ ಸಂಗೀತ ಕಮಾಲ್‌ ಮಾಡಿತ್ತು. ಅನ್ನಮಯ್ಯ ಸಿನಿಮಾದ ಸಂಗೀತಕ್ಕಾಗಿ ಕೀರವಾಣಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತು. ಅಂದ ಹಾಗೆ ಕೀರವಾಣಿ ಅವರು ಸಂಗೀತ ನಿರ್ದೇಶನದ ಜತೆಯಲ್ಲಿ ಗಾಯಕರಾಗಿಯೂ ಕೆಲಸ ಮಾಡಿರುವುದು ವಿಶೇಷ.


2015ರಲ್ಲಿ ಕೀರವಾಣಿ ಅವರು ತಮ್ಮ ಸೋದರ ಸಂಬಂಧಿ ರಾಜಮೌಳಿ ಅವರೊಂದಿಗೆ ಒಪ್ಪಂದ ಮಾಡಿಕೊಂಡರು. ನಂತರ ಅವರ ʼಬಾಹುಬಲಿ: ದಿ ಬಿಗಿನಿಂಗ್‌ʼ ಮತ್ತು ʼಬಾಹುಬಲಿ 2′ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದರು. ಅದರ ಬೆನ್ನಲ್ಲಿ ಆರ್‌ಆರ್‌ಆರ್‌ ಸಿನಿಮಾಕ್ಕೂ ಸಂಗೀತ ಸಂಯೋಜಿಸಿ ಕೊಟ್ಟರು. ಕೀರವಾಣಿ ಅವರು ಸಂಯೋಜಿಸಿದ್ದ ನಾಟು ನಾಟು ಹಾಡಿಗೆ ಕಾಲಭೈರವ್‌ ಮತ್ತು ರಾಹುಲ್‌ ಸಿಪ್ಲಿಗುಂಜ್‌ ಅವರು ಧ್ವನಿ ನೀಡಿದ್ದಾರೆ.

ಕನ್ನಡದ ಸಿನಿಮಾಗಳಿಗೂ ಸಂಗೀತ ನಿರ್ದೇಶನ


ಎಂ.ಎಂ.ಕೀರವಾಣಿ ಅವರು ತೆಲುಗು ಮಾತ್ರವಲ್ಲದೆ ಹಲವಾರು ಭಾಷೆಗಳ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ, ತಮಿಳು, ಮಲಯಾಂ ಮತ್ತು ಹಿಂದಿ ಸಿನಿಮಾಗಳಲ್ಲೂ ಇವರ ಛಾಪನ್ನು ಕಾಣಬಹುದು. ಕನ್ನಡದ ಪ್ರಸಿದ್ಧ ʼಜಮೀನ್ದಾರ್, ʼವೀರ ಮದಕರಿʼ, ʼದೀಪಾವಳಿʼ ಸೇರಿ ಅನೇಕ ಸಿನಿಮಾಗಳಿಗೆ ಕೀರವಾಣಿ ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಿಂದಿಯ ಈಸ್ ರಾತ್ ಕಿ ಸುಬಾಹ್ ನಹಿನ್ (1996), ಸುರ್ – ದಿ ಮೆಲೊಡಿ ಆಫ್ ಲೈಫ್, ಝಖ್ಮ್, ಸಾಯಾ, ಜಿಸ್ಮ್, ಕ್ರಿಮಿನಲ್, ರೋಗ್ ಮತ್ತು ಪಹೇಲಿ ಸಿನಿಮಾಗಳಲ್ಲಿ ಕೀರವಾಣಿ ಸಂಗೀತವಿದೆ. ಒಟ್ಟಾರೆಯಾಗಿ 220ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿಕೊಟ್ಟಿರುವ ಹೆಮ್ಮೆ ಕೀರವಾಣಿ ಅವರದ್ದು.

ಕುಟುಂಬದ ತುಂಬೆಲ್ಲ ಕಲಾವಿದರು


ವಿಶೇಷವೆಂದರೆ ಕೀರವಾಣಿ ಅವರ ಕುಟುಂಬವೇ ಕಲಾವಿದರ ಕುಟುಂಬ ಎನ್ನಬಹುದು. ಅವರ ಸಹೋದರ ಕಲ್ಯಾಣಿ ಮಲಿಕ್‌ ಕೂಡ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಗಾಯಕರು. ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕಿ ಹಾಗೂ ಗಾಯಕಿ ಎಂ.ಎಂ.ಶ್ರೀಲೇಖಾ ಅವರ ಸೋದರ ಸಂಬಂಧಿಗಳು. ಬಾಲಿವುಡ್‌ನ ಚಲನಚಿತ್ರ ಚಿತ್ರಕಥೆಗಾರ ಹಾಗೂ ನಿರ್ದೇಶಕ ಕೆ.ವಿ.ವಿಜಯೇಂದ್ರ ಪ್ರಸಾದ್‌ ಅವರು ಕೀರವಾಣಿ ಅವರ ಸೋದರಳಿಯ. ಕೀರವಾಣಿ ಅವರ ಪತ್ನಿ ಶ್ರೀವಲ್ಲಿ ತೆಲುಗು ಸಿನಿಮಾಗಳ ಲೈನ್‌ ಪ್ರೊಡ್ಯುಸರ್‌. ಇನ್ನು ಅವರ ಮಗ ಕಾಲಭೈರವ್‌ ಗಾಯಕ. ಅವರೇ ನಾಟು ನಾಟು ಹಾಗೂ ಬಾಹುಬಲಿ 2 ಸಿನಿಮಾದ ʼದಂಡಾಲಯ್ಯʼ ಹಾಡಿಗೆ ಧ್ವನಿಯಾದವರು!

Exit mobile version