Site icon Vistara News

Movie Review | ಗಾಳಿಪಟ 2 ಸಿನಿಮಾ ಒಂದು ಸುಂದರ ಹಾಗೂ ಆಹ್ಲಾದಕರ ಪಯಣ

ಬೆಂಗಳೂರು: ಸುರಿಯುವ ಮಳೆ, ಹಸಿರು ಗುಡ್ಡ, ಹಳೇ ಕಾಲೇಜು, ಮೈನೇವರಿಸುವ ಹಿಮದ ರಾಶಿ, ಕಚಗುಳಿ ಕೊಡುವ ಮಾತುಗಳು, ಒಂದಿಷ್ಟು ಅಧ್ಯಾತ್ಮ, ಚೂರು ಜೀವನ ಪಾಠ, ಕಣ್ಣಂಚು ಒದ್ದೆಯಾಗಿಸುವ ಸನ್ನಿವೇಶಗಳು. ಇವೆಲ್ಲವೂ ಹದವಾಗಿ ಬೆರೆತ ಚಿತ್ರ ಗಾಳಿಪಟ 2. ಆಗಸ್ಟ್‌ 12ರಂದು ರಾಜ್ಯಾದ್ಯಂತ ಬಿಡುಗಡೆಯಾದ ಗಾಳಿಪಟ 2 ಸಿನಿಮಾ ಫುಲ್‌ ಮನರಂಜನೆ ನೀಡಿ, ಪ್ರೇಕ್ಷಕರನ್ನು ಮನದುಂಬಿ ನಗಿಸುವಲ್ಲಿ ಯಶಸ್ವಿಯಾಗಿದೆ.

ಚಿತ್ರ: ಗಾಳಿಪಟ 2
ನಿರ್ದೇಶನ: ಯೋಗರಾಜ್‌ ಭಟ್‌
ನಿರ್ಮಾಣ: ಸೂರಜ್‌ ಪ್ರೊಡಕ್ಷನ್‌
ಛಾಯಾಗ್ರಹಣ: ಸಂತೋಶ್‌ ರೈ ಪಾತಾಜೆ
ಸಂಗೀತ: ಅರ್ಜುನ್‌ ಜನ್ಯ
ತಾರಾಗಣ: ಗಣೇಶ್‌, ದಿಗಂತ್‌, ಪವನ್‌ ಕುಮಾರ್‌, ಅನಂತ್‌ ನಾಗ್‌, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ವೈಭವೀ ಶಾಂಡಿಲ್ಯ, ರಂಗಾಯಣ ರಘು, ಸುಧಾ ಬೆಳವಾಡಿ ಮತ್ತು ಇತರರು.
ರೇಟಿಂಗ್:‌ 3.5/5

ಗಾಳಿಪಟದಲ್ಲಿ ಯೋಗರಾಜ್‌ ಭಟ್‌ ಹೀರೋ!

ಈ ಸಿನಿಮಾದ ಕಥೆ ಶುರುವಾಗುವುದು ನೀರ್‌ಕೋಟೆ ಎಂಬ ಹಳ್ಳಿಯ ಕಾಲೇಜಿನಲ್ಲಿ. ಒಂದು ದಿನ ಈ ಕಾಲೇಜಿಗೆ ಮೂವರು ಸ್ನೇಹಿತರು ವಿದ್ಯಾರ್ಥಿಗಳಾಗಿ ಪ್ರವೇಶಿಸುತ್ತಾರೆ. ಬದುಕನ್ನು ತಮಾಷೆ ಎಂದೇ ಜೀವಿಸುವ ಈ ಮೂವರ ಬದುಕಿನಲ್ಲಿ ಅನೇಕ ರೋಮಾಂಚಕ ಘಟನೆಗಳು ಸಂಭವಿಸುತ್ತವೆ. ಪ್ರೀತಿಸುತ್ತಾರೆ, ಪ್ರೀತಿಸಿದವರು ಇವರನ್ನು ಬಿಟ್ಟು ಹೋಗುತ್ತಾರೆ ಮತ್ತೆ ಸಿಗುತ್ತಾರೆ. ಅನಿರೀಕ್ಷಿತ ಪರೀಕ್ಷೆಗಳು ಎದುರಾಗುತ್ತವೆ. ಇವೆಲ್ಲವೂ ಈ ಮೂವರ ಜೀವನವನ್ನು ಅಲುಗಾಡಿಸಿಬಿಡುತ್ತವೆ. ಆಘಾತಕಾರಿ ಘಟನೆಗಳಿಂದ ನೊಂದ ಮನಗಳು ಊರು ಬಿಟ್ಟು ಬೇರೊಂದು ಊರಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಮತ್ತೊಂದಿಷ್ಟು ಹುಡುಕಾಟ ಹಾಗೂ ಸತ್ಯದ ಅನ್ವೇಷಣೆ. ತಮ್ಮಿಷ್ಟದ ಶಿಕ್ಷಕನ ಬದುಕಿಗೆ ನೆರವಾಗಲು ಇವರು ಪ್ರಯತ್ನಿಸುತ್ತಾರೆ. ಈ ಎಲ್ಲವೂ ಸಮವಾಗಿ ಬೆರೆಸಿ ಒಂದು ಸೊಗಸಾದ ಕಥೆಯನ್ನು ನಿರ್ದೇಶಕ ಯೋಗರಾಜ್‌ ಭಟ್‌ ತೆರೆಯ ಮೇಲೆ ತಂದಿದ್ದಾರೆ.

ಯೋಗರಾಜ್‌ ಭಟ್‌ ಬುದ್ಧಿವಂತ ನಿರ್ದೇಶಕ. ಗಾಳಿಪಟ 2 ಸಿನಿಮಾ ನೋಡಲು ಬರುವವರು ಈ ಹಿಂದೆ ಬಿಡುಗಡೆಗೊಂಡ ಗಾಳಿಪಟ ಸಿನಿಮಾದ ನಿರೀಕ್ಷೆಯಲ್ಲಿ ಬರುತ್ತಾರೆ ಎಂದು ಅರಿತುಕೊಂಡವರು. ಗಣಿ ಪಾತ್ರದ ಪೋಲಿ ಮಾತು ಹಾಗೂ ಮುಗ್ಧತೆ, ಮೂವರು ಮಾಡಿಕೊಳ್ಳುವ ಅವಾಂತರಗಳನ್ನು ಜನರು ಎಂಜಾಯ್‌ ಮಾಡುತ್ತಾರೆ ಎಂದು ನಿರ್ದೇಶಕ ಮೊದಲೇ ತಿಳಿದುಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾ ಹದವಾಗಿ ಮೂಡಿಬಂದಿದೆ.

ಸಿನಿಮಾದುದ್ದಕ್ಕೂ ತಮಾಷೆಯ ಮಾತುಗಳು, ಸನ್ನಿವೇಶಗಳು ಭರಪೂರಾಗಿವೆ. ಸಿನಿಮಾದ ಪೂರ್ವಾರ್ಧ ಒಂದು ಮ್ಯೂಸಿಕಲ್‌ ಜರ್ನಿ ಎಂದು ಹೇಳಬಹುದು. ಬಹುತೇಕ ಹಾಡುಗಳು ಮೊದಲ ಅರ್ಧ ಭಾಗದಲ್ಲಿಯೇ ಮುಗಿದು ಹೋಗುತ್ತದೆ. ಉತ್ತರಾರ್ಧದಲ್ಲಿ ಸಿನಿಮಾದ ಗತಿ ಬೇರೆ ರೀತಿಯಲ್ಲಿ ಸಾಗುತ್ತದೆ.

ಪ್ರತಿಯೊಬ್ಬರ ನಟನೆಯೂ ಆಕರ್ಷಕ!

ನಟ ಪವನ್‌ ಕುಮಾರ್ ಈ ಸಿನಿಮಾದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಆಕರ್ಷಕ ಅಂಶ. ಕಾಮಿಡಿ ಟೈಮಿಂಗ್‌ನಲ್ಲಿ ಗಣೇಶ್‌ ಎತ್ತಿದ ಕೈ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ದಿಗಂತ್‌ ಮ್ಯಾನರಿಸಮ್‌ ಹಾಗೂ ಅಭಿನಯ ಮನದಲ್ಲಿ ಉಳಿಯುತ್ತದೆ. ಅನಂತನಾಗ್‌ ಹಾಗೂ ರಂಗಾಯಣ ರಘು ಅವರ ಪ್ರಬುದ್ಧ ಅಭಿನಯ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಶರ್ಮಿಳಾ ಮಾಂಡ್ರೆ ಅವರ ಗಾಂಭೀರ್ಯ, ಸಂಯುಕ್ತಾ ಮೆನನ್‌ ಹಾಗೂ ವೈಭವೀ ಶಾಂಡಿಲ್ಯ ಅವರ ಲವಲವಿಕೆ ಮನಸೆಳೆಯುವಂಥದ್ದು. ಹಿನ್ನೆಲೆ ಸಂಗೀತ ಹಾಗೂ ಹಾಡುಗಳೇ ಈ ಸಿನಿಮಾದ ಶ್ರೀಮಂತಿಕೆ. ಅದ್ಭುತವಾದ ಸಾಹಿತ್ಯ ಹಾಗೂ ಸಂಗೀತ ಹಾಡುಗಳನ್ನು ನೆನಪಿನಲ್ಲಿ ಉಳಿಸುತ್ತದೆ. ಅದ್ಭುತ ಸಾಹಿತ್ಯ ಬರೆದ ಜಯಂತ್‌ ಕಾಯ್ಕಿಣಿ ಹಾಗೂ ಯೋಗರಾಜ್‌ ಭಟ್‌ ಅಭಿನಂದನಾರ್ಹ. ಸೂಕ್ತವಾದ ಸಂಗೀತ ನೀಡುವ ಮೂಲಕ ಅರ್ಜುನ್‌ ಜನ್ಯ ನಿಜಕ್ಕೂ ಮ್ಯಾಜಿಕ್‌ ಮಾಡಿದ್ದಾರೆ.

ಈ ಸಿನಿಮಾಗೆ ಬಳಸಿದ ಸೆಟ್‌ಗಳು ಹಾಗೂ ಶೂಟ್‌ ಮಾಡಲು ಆಯ್ದುಕೊಂಡ ಜಾಗಗಳು ಸ್ವಲ್ಪ ರೆಟ್ರೊ ಹಾಗೂ ಸ್ವಲ್ಪ ಆಧುನಿಕ ಫೀಲ್‌ ಕೊಡುತ್ತದೆ. ಕ್ಯಾಮೆರಾ ಹಿಂದೆ ಸಂತೋಷ್‌ ರೈ ಪಾತಾಜೆ ತಮ್ಮ ಕೈಚಳಕವನ್ನು ಅದ್ಭುತವಾಗಿ ತೋರಿದ್ದಾರೆ.

ಈ ಸಿನಿಮಾ ಪ್ರೇಕ್ಷಕನಿಗೆ ಎಲ್ಲಿಯೂ ಬೋರ್‌ ಹೊಡೆಸದಂತೆ ಸಾಗುತ್ತದೆ. ಸಂಭಾಷಣೆಯಲ್ಲಿನ ತಮಾಷೆ ಹಾಗೂ ಹೊಳಹುಗಳು ತಲ್ಲಣಗೊಳಿಸುತ್ತವೆ. ಆದರೆ, ಮೊದಲಾರ್ಧದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯ ನೀಡಿದ್ದು, ಕಥೆ ವೇಗವಾಗಿ ಸಾಗಿದಂತೆ ಭಾಸವಾಗುತ್ತದೆ.

ಈ ಸಿನಿಮಾ ಯಾಕೆ ನೋಡಬೇಕು?

  1. ಇದು ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ಯುವ ಮನಸ್ಸಿನ ತಲ್ಲಣಗಳು, ಜೀವನದ ಬಗ್ಗೆಯ ಉಡಾಫೆಗಳು, ಪ್ರೀತಿ-ಪ್ರೇಮದ ಅವಾಂತರಗಳು ಎಲ್ಲವೂ ಕನೆಕ್ಟ್‌ ಆಗುವ ರೀತಿ ಚಿತ್ರಿಸಲಾಗಿದೆ.
  2. ತಂದೆ-ತಾಯಿ ಹಾಗೂ ಮಕ್ಕಳ ಸಂಬಂಧದ ನಡುವಿನ ಪ್ರೀತಿಯ ಅವ್ಯಕ್ತ ಭಾವ ಹೇಗಿರುತ್ತದೆ ಎಂಬುದು ಇಲ್ಲಿದೆ.
  3. ಗೆಳೆತನದ ಮಹತ್ವ ಹಾಗೂ ಗೆಳೆಯರಾಗಿ ಕರ್ತವ್ಯ ನಿಭಾಯಿಸುವ ಒಂದು ಸುಂದರ ರೂಪಕ.
  4. ಪ್ರೀತಿ ಹಾಗೂ ಪ್ರೇಮದಲ್ಲಿ ನಿರೀಕ್ಷೆ ಎಂಬುದು ಯಾವ ರೀತಿಯ ಪಾತ್ರವಹಿಸುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ.
  5. ಶಿಷ್ಯ ಹಾಗೂ ಗುರುವಿನ ಜವಾಬ್ದಾರಿ ಏನು ಎಂಬುದನ್ನು ತೋರುವಂಥ ಸುಂದರ ಪಯಣ.
  6. ಒಂದು ಕನಸನ್ನು ನಿತ್ಯವೂ ಕಾಣುತ್ತ ಭ್ರಾಂತಿಯಲ್ಲಿ ಜೀವಿಸುತ್ತಿದ್ದರೆ, ಮುಂದೊಂದು ದಿನ ಅದು ನಿಜವಾದರೂ ಅದನ್ನು ನಂಬುವುದು ಕಷ್ಟವಾಗಿಬಿಡುತ್ತದೆ. ಈ ರೀತಿಯ ಅನೇಕ ಫಿಲಾಸಫಿಕಲ್‌ ಯೋಚನೆಗಳು ಈ ಸಿನಿಮಾದ ಹೃದಯ.
  7. ಈ ಸಿನಿಮಾ ಪೂರ್ಣಪ್ರಮಾಣದಲ್ಲಿ ಮನೋರಂಜನೆ ಮಾಡಿ ಮನಸ್ಸನ್ನು ಹಗುರಗೊಳಿಸುತ್ತದೆ.

ಇದನ್ನೂ ಓದಿ : Gaalipata 2 | ಬೆಳ್ಳಿ ಪರದೆ ಮೇಲೆ‌ ಗಾಳಿಪಟ ಹಾರಾಟ ಶುರು: 200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ

Exit mobile version