| ಶಿವರಾಜ್ ಡಿ.ಎನ್.ಎಸ್
ಇಲ್ಲಿ ಅಪರಾಧ ಎಷ್ಟು ಸೂಕ್ಷ್ಮವೋ ಆಪಾದಿತನೂ ಅಷ್ಟೇ ಸೂಕ್ಷ್ಮ, ಇವೆರಡರ ನಡುವೆ ಕತೆ ಕಟ್ಟುವುದು ಅತಿ ಸೂಕ್ಷ್ಮದ ಸವಾಲಾದರೂ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ ಎನ್ನಬಹುದು. ಸವಾಲು ಸ್ವೀಕರಿಸಿ ಸವಾಲಿಗೆ ಪ್ರತಿ ಸವಾಲು ಹಾಕುವ ವಕೀಲರ ವಾದ ವಿವಾದದ, ತೀಕ್ಷ್ಣ ಸಂಭಾಷಣೆಯೊಂದಿಗೆ ಕಾನೂನು ಅರ್ಥೈಸುವ ನಿಟ್ಟಿನಲ್ಲಿ ಕಟ್ಟಿರುವ ಸಿನಿಮಾ. ಈ ಕಾನೂನು ಹೋರಾಟದ ಕಥೆಯಲ್ಲಿ ಯಾವುದೇ ರೀತಿಯಲ್ಲಿಯೂ ಧರ್ಮವನ್ನು ಅವಮಾನಿಸದೆ ಅಧರ್ಮ, ಅನ್ಯಾಯಕಷ್ಟೆ ಪೆಟ್ಟು ಕೊಡುವಲ್ಲಿ ಯಶಸ್ವಿಯಾಗಿರುವ ನಿರ್ದೇಶಕನ ಜಾಣ್ಮೆ ಮೆಚ್ಚುವಂಥದ್ದು, ಯಾಕೆಂದರೆ.. ಇತ್ತೀಚಿನ ದಿನಗಳ ಸಿನಿಮಾಗಳಲ್ಲಿ ಒಂದನ್ನ ಹೊಗಳುವ ಭರದಲ್ಲಿ ಇನ್ನೊಂದನ್ನ ಅವಮಾನಿಸಿರುತ್ತಾರೆ. ಅಂತಹ ತಪ್ಪು ಈ ಸಿನಿಮಾದಲ್ಲಿ ಆಗಿಲ್ಲ .
ಲೈಂಗಿಕ ದೌರ್ಜನ ಪ್ರಕರಣವೊಂದು ಸುದೀರ್ಘ ಐದು ವರ್ಷಗಳ ಕಾಲ ವಾದ – ವಿವಾದ ನಡೆಯುವ ಕ್ಲೀನ್ ಕೋರ್ಟ್ ಡ್ರಾಮಾ ಇಲ್ಲಿದೆ. ಅನ್ಯಾಯದ ವಿರುದ್ಧ, ಸತ್ಯದ ಪರ ಹೋರಾಡುವ ನ್ಯಾಯವಾದಿ ಸೋಲಂಕಿಯ ಸ್ಥಿತಿಗತಿಗಳೊಂದಿಗೆ ತೆರೆದಿಡುತ್ತ ಸಾಗುವ ಸಿನಿಮಾ, ಕಾನೂನಿನ ಮುಂದೆ ಎಲ್ಲರೂ ಒಂದೇ, ಅಪರಾಧಿ ಯಾರೇ ಆದರೂ ತಪ್ಪಿಗೆ ತಕ್ಕ ಶಿಕ್ಷೆ ಆಗಬೇಕು ಎನ್ನುವ ನಿಟ್ಟಿನಲಿ ಸಾಮಾನ್ಯ ವಕೀಲನೊಬ್ಬ ಕಾರ್ಯಪ್ರವೃತ್ತನಾದಾಗ ಏನೆಲ್ಲ ಸಮಸ್ಯೆ ಎದುರಾಗುತ್ತವೆ? ಅವನ್ನೆಲ್ಲ ಮೆಟ್ಟಿ ನಿಲ್ಲುವುದು ಅಸಾಧ್ಯವೇ? ಲೈಂಗಿಕ ದೌರ್ಜನ್ಯ ಪ್ರಕರಣ ಸೂಕ್ಷ್ಮವಾದದ್ದು, ಅದು ಹೇಗೆ ವಿಚಾರಣೆಗೆ ಒಳಪಡಬೇಕು, ಯಾರು ಸರಿ- ಯಾರು ತಪ್ಪು ಅನ್ನುವುದು ತೀರ್ಮಾನ ಆಗುವುದಕ್ಕಿಂತಲೂ ಮೊದಲು ದೌರ್ಜನ್ಯಕ್ಕೆ ಒಳಗಾದವರನ್ನ ಹೇಗೆ ಉಪಚರಿಸಬೇಕು ಅನ್ನುವುದನ್ನ ಅರ್ಥೈಸುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ, ಏಕಾಂಗಿಯಾಗಿ ಹೋರಾಡುವ ಸೋಲಂಕಿಯ ಶ್ರದ್ಧಾ ಭಕ್ತಿ ಪ್ರಾಮಾಣಿಕತೆಗೆ ಪ್ರೇಕ್ಷಕರು ಮನಸೋಲೋದು ಖಂಡಿತ. ಮಾತಿನ ಮಧ್ಯೆ ಸೋಲಂಕಿ ಹೇಳುವ ಉಪಕತೆ ಹಾಗು ರಾಮಾಯಣ ಮಹಾ ಭಾರತದ ಸಂದರ್ಭಗಳು ವಾವ್ ಎನ್ನುವಂತಿವೆ.
ಕೆಲ ಕಮರ್ಷಿಯಲ್ ಚಿತ್ರಗಳಲ್ಲಿ ಕಟಕಟೆಯಲ್ಲಿಯೊ, ವಕೀಲನಾಗಿಯೋ ನಿಂತು ಉದ್ದುದ್ದ ಡ್ರಾಮೆಟಿಕ್ ಮಾಸ್ ಡೈಲಾಗ್‌ಗಳ ಆಡಂಬರ ಎಲ್ಲೂ ನುಸುಳಿಲ್ಲ. ಕೋರ್ಟ್ ದೃಶ್ಯದಲ್ಲಿ ಅಷ್ಟೆ ಅಲ್ಲದೇ ಸಣ್ಣ ಗಲ್ಲಿಯಲಿ ಬೆನ್ನಟ್ಟುವ ದೃಶ್ಯ, ಜನ ಜಂಗುಳಿಯಿಂದ ಕೂಡಿದ ಸಾರ್ವಜನಿಕ ಸ್ಥಳ ಎಲ್ಲವೂ ನೈಜತೆಯಿಂದ ಕೂಡಿವೆ. ಚಿತ್ರದಲ್ಲಿ ಕತೆಯನ್ನು ಯಾವುದನ್ನೂ ಅತಿಯಾಗಿಸದೆ ಎಷ್ಟು ಬೇಕೋ ಅಷ್ಟೆ ಎನ್ನುವಂತೆ ಸಮರ್ಪಕವಾಗಿ ಹೆಣೆದಿದ್ದಾರೆ. ಪೋಕ್ಸೊ ಆಕ್ಟ್ ಹಾಗೂ ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತಾಗಿರುವ ಈ ಸಿನಿಮಾ ಕತೆ, ಚಿತ್ರಕತೆ, ಸಂಭಾಷಣೆಯ ಬರವಣಿಗೆಯಿಂದ ಅಭಿನಯದವರೆಗೂ ಕೂಡಿರುವ ಸೂಕ್ಷ್ಮತೆ ಜೊತೆಗೆ ಮನೋಜ್ ಬಾಜಪೇಯಿ ಅವರ ಮನೋಜ್ಞ ಅಭಿನಯದಿಂದ ಮನಸ್ಸಿನಲ್ಲಿ ಉಳಿಯುತ್ತದೆ.
ನಮ್ಮ ವೈರಿ ನಿಜಕ್ಕೂ ಎದುರಾಳಿಯಲ್ಲ. ನಮ್ಮೊಳಗಿನ ಭಯ, ಆತಂಕ, ನೋವು, ನಾವು ಮೊದಲಿಗೆ ಅವುಗಳೊಂದಿಗೆ ಹೋರಾಡಬೇಕು ಎನ್ನುವ ಧೈರ್ಯ ತುಂಬುವ ಮಾತನಾಡುವ ಪರಮೇಶ್ವರನ ಭಕ್ತ ಸೋಲಂಕಿ… ಸಾರ್ʼ ಫೀಸ್.. ಫೀಸ್ ಕಿತನಾ ದೇನಿಹೋಗಿ ಎಂದಾಗ.. ಕೆಲ ಕ್ಷಣ ಯೋಚಿಸಿ, ಹುಡುಗಿಯ ಕಡೆ ನೋಡಿ ಮುಗುಳು ನಗೆಯೊಂದಿಗೆ ಗುಡಿಯಾ ಕಿ ಸ್ಮೈಲ್’ ಎಂದಾಗ ಪ್ರೇಕ್ಷಕ ಲಾಯರ್ ಸೋಲಂಕಿ ಪಾತ್ರಕ್ಕೆ ಮನಸೋಲುತ್ತಾನೆ. ಸಾಮಾನ್ಯನಾದರೂ ದೇವ ಮಾನವ ಎನಿಸಿಕೊಂಡ ಬಾಬಾನನ್ನು, ಅವನ ಅನುಯಾಯಿಗಳನ್ನು ಪ್ರಭಾವಿಗಳು ಎಲ್ಲರ ವಿರುದ್ಧ ನಿಂತು ಹೋರಾಡುವುದು, ತನ್ನ ಜೀವಕ್ಕಿರುವ ಬೆದರಿಕೆಯ ಅರಿವಿದ್ದರೂ, ಕಾನೂನು ಪ್ರಕ್ರಿಯೆಗಳಿಗೆ ಹಗಲು ರಾತ್ರಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಶ್ರಮಿಸುವುದು ಗ್ರೇಟ್ ಅನಿಸುತ್ತದೆ. ದೌರ್ಜನ್ಯಕ್ಕೆ ಒಳಗಾದ ಆಕೆಯನ್ನು ಸಮಾಜ ಅವಳೇ ಅಪರಾಧಿ ಎನ್ನುವಂತೆ ಬೀರುವ ನೋಟ ಹಾಗೂ ಆಕೆಯ ಮನಸ್ಥಿತಿ ಪರಿಸ್ಥಿತಿ ನೋಡಿ ಆಲೋಚನೆಗೆ ದೂಡುತ್ತದೆ. ಒಟ್ಟಾರೆಯಾಗಿ ಚಿತ್ರಕ್ಕೆ ಕನೆಕ್ಟ್ ಆದ ಪ್ರೇಕ್ಷಕನಿಗೆ ಕ್ಲೈಮ್ಯಾಕ್ಸ್ ಹಂತ ಕುತೂಹಲ ಕೆರಳಿಸಿ ಕೊನೆಗೆ ನಿರಾಳ ಅನುಭವ ನೀಡುತ್ತದೆ.
ಜೂತೆ ಜೆ ಗಲೆಮೆ, ದಾಲೆ ಸಾಚ್ ಕ ಫಂದಾ, ದಾಲಿಯೇ ಜಸ್ಟೀಸ್ ಹೆ ಹೈ ರಬ್ ಕಾ ಬಂದಾ… ಎನ್ನುವ ಟೈಟಲ್ ಟ್ರಾಕ್ ನೊಂದಿಗೆ ಸೋಲಂಕಿ ಪಾತ್ರ ಪರಿಚಯಿಸುತ್ತ ಶುರುವಾಗುವ ಸಿನಿಮಾ, ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಗಳ ಕುಟುಂಬ ಸ್ಟೇಷನ್‌ಗೆ ಹೋಗಿ ಕಂಪ್ಲೈಟ್ ಕೊಡುತ್ತಿರುವ ದೃಶ್ಯದೊಂದಿಗೆ ಸಾಗುತ್ತದೆ. ಆಕೆಗೆ ಆ ಸ್ಥಿತಿ ಎದುರಾಗಿದ್ದು ಹೇಗೆ? ಅಪರಾಧಿ ಕಾನೂನಿಂದ ತಪ್ಪಿಸಿಕೊಳ್ಳಲೂ ಅವನ ಬಳಗ ಕಾನೂನಾತ್ಮಕವಾಗಿ ಕೋರ್ಟಿನ ಒಳಗೂ ಹೊರಗೂ ಏನೆಲ್ಲ ತಂತ್ರ ಹೆಣೆಯುತ್ತಾರೆ? ಅಪರಾಧಿ ಬಾಬಾ ವಿರುದ್ಧ ವಾದಿಸುವ ಸಾಮಾನ್ಯ ಸೆಷನ್ಸ್ ಕೋರ್ಟ್ ವಕೀಲ ಸೋಲಂಕಿಗೆ ಐದು ವರ್ಷಗಳ ಸುದೀರ್ಘ ಹೋರಾಟದಲ್ಲಿ ಬಾಬಾನ ಅನುಯಾಯಿಗಳು ಅಭಿಮಾನಿಗಳು ಹಾಗೂ ಪ್ರಭಾವಿಗಳು ಏನೆಲ್ಲ ತೊಂದರೆ ನೀಡಲು ಪ್ರಯತ್ನಿಸುತ್ತಾರೆ ಎನ್ನುವ ರೋಚಕತೆಯೇ ಇಡೀ ಸಿನಿಮಾ.
ದೇವ ಮಾನವನಿಂದ ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸಿಕೊಡುವ ಹೋರಾಟದ ಕತೆ ಎಂದು ಒಂದೇ ಮಾತಿನಲ್ಲಿ ಹೇಳುವಷ್ಟು ಸುಲಭವಾಗಿಲ್ಲ ಸಿನಿಮಾ. ಪ್ರತಿ ಹಂತದಲ್ಲೂ ಪ್ರಕರಣ ಮುಂದೇನೋ ತಿರುವು ಪಡೆದುಕೊಳ್ಳಬಹುದು ಎನ್ನುವ ಕುತೂಹಲ ಉಳಿಸಿಕೊಂಡೆ ಸಾಗುತ್ತದೆ. ಅಂತಿಮವಾಗಿ ಸಂತ್ರಸ್ತೆಗೆ ನ್ಯಾಯ ಸಿಗುತ್ತಾ ಅದು ಹೇಗೆ ಆಪಾದಿತ ಬಾಬಾ ಅಪರಾಧಿ ಎಂದು ಸಾಬೀತಾಗುತ್ತದೆಯೆ?.. ಆದರೂ ಅವನಿಗೆ ಏನು ಶಿಕ್ಷೆ ಇತ್ಯಾದಿ ಕುತೂಹಲಕ್ಕೆ ಸಿನಿಮಾ ನೋಡಲೇಬೇಕಷ್ಟೆ.
ಈ ಸಿನಿಮಾ ಅಸಾರಾಂ ಬಾಪು ಅತ್ಯಾಚಾರ ಪ್ರಕರಣ ಕುರಿತಾದ ಸತ್ಯಘಟನೆ ಆಧಾರಿತ ಚಿತ್ರ ಹಾಗೂ ಆ ಪ್ರಕರಣ ಪ್ರಮುಖ ವಕೀಲರಾದ ಸೋಲಂಕಿಯವರಿಂದ ಅನುಮತಿ ಪಡೆದು ಈ ಚಿತ್ರ ಮಾಡಲಾಗಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಆಗುತ್ತಿದೆ.
ಈ ಚಿತ್ರಕ್ಕೆ ದೀಪಕ್ ಕಿನ್ಗೃಣಿ ಕತೆ ರಚಿಸಿದ್ದು, ಅಪೂರ್ವ್ ಸಿಂಗ್ ಕಾರ್ಕಿ ನಿರ್ದೇಶನ ಮಾಡಿದ್ದಾರೆ. ಮನೋಜ್ ಬಾಜಪೇಯಿ ಅವರು ಸೋಲಂಕಿ ಪಾತ್ರ ನಿರ್ವಹಿಸಿದ್ದು, ಸಂತ್ರಸ್ತೆ ಪಾತ್ರದಲ್ಲಿ ಅದ್ರಿಜ ಸಿನ್ಹ ನಟಿಸಿದ್ದಾರೆ. ಸೂರ್ಯ ಮೋಹನ್ ಕುಲಶ್ರೇಷ್ಠ ಬಾಬಾ ಪಾತ್ರ ನಿರ್ವಹಿಸಿದ್ದಾರೆ. ಸಹಪಾತ್ರಗಳಲ್ಲಿ ಸೂರ್ಯ ಮೋಹನ್, ನಿಖಿಲ್ ಪಾಂಡೆ, ಜೈಹಿಂದ್ ಕುಮಾರ್, ದುರ್ಗಾ ಶರ್ಮಾ ಮುಂತಾದವರು ನಟಿಸಿದ್ದು ಚಿತ್ರಕ್ಕೆ ಬಾನುಶಾಲಿ ಸ್ಟೂಡಿಯೋಸ್ ಹಾಗೂ ಜೀ ಸ್ಟುಡಿಯೋ ಬಂಡವಾಳ ಹೂಡಿದ್ದು ಸದ್ಯ ZEE5 ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಹಲವು ರೀತಿಯ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಆಸಕ್ತರು ವೀಕ್ಷಿಸಬಹುದು.