ಬೆಂಗಳೂರು: ʻಆಮ್ಲೆಟ್ʼ, ʻಕೆಂಪಿರ್ವೆʼ ಖ್ಯಾತಿಯ ನಿರ್ದೇಶಕ ವೆಂಕಟ್ ಭಾರದ್ವಾಜ್ ಸಾರಥ್ಯದಲ್ಲಿ ‘ನಗುವಿನ ಹೂಗಳ ಮೇಲೆ’ ಚಿತ್ರ ಮೂಡಿಬರುತ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ. ಈಗ ಚಿತ್ರತಂಡ ಮ್ಯೂಸಿಕ್ ಎಫೆಕ್ಟ್ನಲ್ಲಿ ಹೊಸತನವನ್ನು ಪರಿಚಯಿಸಲು ಮುಂದಾಗಿದೆ. ಅದಕ್ಕಾಗಿ ವಿದೇಶದಲ್ಲಿ ಮ್ಯೂಸಿಕ್ ಮಿಕ್ಸಿಂಗ್ ಮಾಡಿಸಿಕೊಂಡು ಬಂದಿದೆ!
ಕಥೆ, ಚಿತ್ರಕಥೆ ಜತೆ ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಿ ಸಿನಿಮಾವನ್ನು ತೆರೆ ಮೇಲೆ ತರಲು ಸಜ್ಜಾಗಿರುವ ವೆಂಕಟ್ ಭಾರದ್ವಾಜ್, ಹಿನ್ನೆಲೆ ಸಂಗೀತವನ್ನು ಯಶಸ್ವಿಯಾಗಿ ಮುಗಿಸಿದ ಸಂಭ್ರಮದಲ್ಲಿದೆ. ಚಿತ್ರದ ಸಂಗೀತ ನಿರ್ದೇಶಕ ಲವ್ ಪ್ರಾನ್ ಮೆಹತಾ ಅವರನ್ನೊಳಗೊಂಡ ತಂಡ ಲಂಡನ್ನ Mellifluous ಸ್ಟುಡಿಯೋನಲ್ಲಿ ಚಿತ್ರದ ಹಿನ್ನೆಲೆ ಸಂಗೀತ, ಎಫೆಕ್ಟ್ಸ್, ಫೈನಲ್ ಮಿಕ್ಸಿಂಗ್ ಮುಗಿಸಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಚಿತ್ರದ ಪ್ರಚಾರ ಕಾರ್ಯವನ್ನು ಭರ್ಜರಿಯಾಗಿ ನಡೆಸುತ್ತಿದೆ.
ಇದನ್ನೂ ಓದಿ | Ramya |18ನೇ ವಯಸ್ಸಿನಲ್ಲಿ ಹೇಗಿದ್ರು ಸ್ಯಾಂಡಲ್ವುಡ್ ಪದ್ಮಾವತಿ ? ಇಲ್ಲಿದೆ ಪೋಟೊ
ನಾಯಕ ಅಭಿಷೇಕ್ ರಾಮದಾಸ್, ನಾಯಕಿ ಶರಣ್ಯಾ ಶೆಟ್ಟಿ ಚಿತ್ರದ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ನಡೆಸುತ್ತಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಲ ರಾಜವಾಡಿ, ಗಿರೀಶ್, ಆಶಾ ಸುಜಯ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತಾ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ರೊಮ್ಯಾಂಟಿಕ್ ಜತೆಗೆ ಆ್ಯಕ್ಷನ್ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ.ಕೆ ರಾಧಾ ಮೋಹನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮೊದಲ ಕನ್ನಡ ಸಿನಿಮಾವಾಗಿದೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ ಈ ಚಿತ್ರಕ್ಕಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ಮೊದಲ ವಾರ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಇದನ್ನೂ ಓದಿ | Gaalipata 2 | ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್: ಭಾಗಿಯಾದ ಸ್ಯಾಂಡಲ್ವುಡ್ ತಾರಾ ಬಳಗ