Site icon Vistara News

National Film Awards 2023: ಅಲ್ಲು ಅರ್ಜುನ್‌ ಶ್ರೇಷ್ಠ ನಟನಾ?; ವಿಕ್ಕಿ ಕೌಶಲ್, ಸೂರ್ಯಂಗೆ ಸಿಗ್ಬೇಕಿತ್ತು ಅಂದ್ರು ನೆಟ್ಟಿಗರು!

Vicky Kaushal Allu Arjun

ಬೆಂಗಳೂರು: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ (69th National Film Awards 2023) ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಲ್ಲು ಅರ್ಜುನ್‌ ಗೆದ್ದಿದ್ದಾರೆ. ಆದರೆ ಗೆದ್ದಾಗಿನಿಂದ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ʻಸರ್ದಾರ್ ಉಧಮ್‌ʼ(Sardar Udham) ಸಿನಿಮಾ ನಟನೆಗಾಗಿ ವಿಕ್ಕಿ ಕೌಶಲ್ (vicky kaushal) ಹೆಚ್ಚು ಅರ್ಹರು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ಅನೇಕರು ʻಜೈ ಭೀಮ್ʼ ಚಿತ್ರದ ಅಭಿನಯಕ್ಕಾಗಿ (jai bhim movie) ಸೂರ್ಯ (Actor Suriya) ಅವರಿಗೆ ಪ್ರಶಸ್ತಿ ಕೊಡಬೇಕಿತ್ತು ಎಂದು ಅಭಿಪ್ರಾಯ ಸೂಚಿಸಿದ್ದಾರೆ. ʻʻಪುಷ್ಪದಂತಹ (Pushpa: The Rise – Part 1) ಚಲನಚಿತ್ರಗಳು ಮನರಂಜನೆಗಾಗಿ. ಜೈ ಭೀಮ್ ನಂತಹ ಚಲನಚಿತ್ರಗಳು ಪ್ರಶಸ್ತಿಗಾಗಿ. ಆದರೆ ಪುಷ್ಪ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತುʼʼಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಈಗಾಗಲೇ ಅನುಪಮ್‌ ಖೇರ್‌ ಅವರು ಮಾಡಿರುವ ಟ್ವೀಟ್‌ ಬಹಳ ಚರ್ಚೆಯಾಗುತ್ತಿದೆ, ಇದರ ಬೆನ್ನಲ್ಲೇ ʻಸರ್ದಾರ್ ಉದ್ಧಮ್ ಸಿಂಗ್ʼ ಸಿನಿಮಾಗಾಗಿ ವಿಕ್ಕಿ ಕೌಶಲ್ ಅವರ ನಟನೆಗೆ ಅತ್ತುತ್ತಮ ನಟ ಎಂದು ಘೋಷಿಸಬೇಕಿತ್ತು ಎಂಬ ಚರ್ಚೆಗಳು ಆಗುತ್ತಿವೆ. ನೆಟ್ಟಗರೊಬ್ಬರು ʻʻಅಲ್ಲು ಅರ್ಜುನ್‌ ಅವರ ಗೆಲುವಿನ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ತೀರ್ಪುಗಾರರು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಇಬ್ಬರಿಗೂ ಪ್ರಶಸ್ತಿ ಕೊಡಬಹುದಿತ್ತುʼʼಎಂದು ಕಮೆಂಟ್‌ ಮಾಡಿದ್ದಾರೆ.

ಮತ್ತೊಬ್ಬರು ʻʻಸರ್ದಾರ್ ಉಧಮ್‌ನಲ್ಲಿನ ಜಲಿಯನ್‌ವಾಲಾ ದೃಶ್ಯ ಎಂತವರನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ. ಸ್ವಾತಂತ್ರ್ಯ ಹೋರಾಟಗಾರನ ಸೇಡಿನ ಸಾಹಸಗಾಥೆಯ ಮೇಲೆ ಈ ಸಿನಿಮಾವಿದೆ. ತೀರ್ಪು ಸರಿಯಾಗಿಲ್ಲʼʼ ಎಂದು ಬರೆದುಕೊಂಡಿದ್ದಾರೆ. ವಿಕ್ಕಿ ಅವರು ಸರ್ದಾರ್ ಉಧಮ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಬನಿತಾ ಸಂಧು ಮತ್ತು ಅಮೋಲ್ ಪರಾಶರ್ ಕೂಡ ನಟಿಸಿದ್ದಾರೆ. ಚಿತ್ರ ನೇರವಾಗಿ 2021 ರಲ್ಲಿ ಪ್ರೈಮ್ ವಿಡಿಯೊದಲ್ಲಿ ಪ್ರದರ್ಶನಗೊಂಡಿತು.

ಇದನ್ನೂ ಓದಿ: National Film Awards 2023: ಕನ್ನಡಕ್ಕೆ ಒಟ್ಟು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ!

ಜೈ ಭೀಮ್‌ ಸಿನಿಮಾಕ್ಕೂ ಬೆಂಬಲ

ಇಷ್ಟೇ ಅಲ್ಲದೇ ಇನ್ನೂ ಕೆಲವರು ತಮಿಳು ನಟ ಸೂರ್ಯ ಅವರ ಜೈ ಭೀಮ್‌ ಸಿನಿಮಾವನ್ನು ಬೆಂಬಲಿಸಿದ್ದಾರೆ. “ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಜೈಭೀಮ್ ಗಮನಕ್ಕೆ ಬರದೇ ಇರುವುದು ನಾಚಿಕೆಗೇಡಿನ ಸಂಗತಿ. ಖಂಡಿತವಾಗಿಯೂ ಕನಿಷ್ಠ ಒಂದು ಪ್ರಶಸ್ತಿಗೆ ಅರ್ಹವಿರುವ ಸಿನಿಮಾವಾಗಿತ್ತುʼʼಎಂದು ಕಮೆಂಟ್‌ ಮಾಡಿದ್ದಾರೆ.

ಮತ್ತೊಬ್ಬರು “ಜೈ ಭೀಮ್ ಈ ಚಿತ್ರಗಳನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಸೇರಿಸಲಾಗಿಲ್ಲ. ನಮ್ಮ ಜಾತಿವಾದಿ ಸಮಾಜದ ಸತ್ಯವನ್ನು ತೋರಿಸಲು ಯಾರೂ ಧೈರ್ಯ ಮಾಡುವುದಿಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ. “ಪುಷ್ಪದಂತಹ ಚಲನಚಿತ್ರಗಳು ಮನರಂಜನೆಗಾಗಿ. ಜೈ ಭೀಮ್ ನಂತಹ ಚಲನಚಿತ್ರಗಳು ಪ್ರಶಸ್ತಿಗಾಗಿ. ಆದರೆ ಪುಷ್ಪ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು, ಆದರೆ ಜೈ ಭೀಮ್ ನಾಮನಿರ್ದೇಶನ ಮಾಡಲು ಸಾಧ್ಯವಾಗಲಿಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ.

ಅಲ್ಲು ಅರ್ಜುನ್‌ ಬಗ್ಗೆ ಅನುಪಮ್‌ ಖೇರ್‌ ಅಸಮಾಧಾನ?

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ (69th National Film Awards 2023) ವಿವೇಕ್ ಅಗ್ನಿಹೋತ್ರಿಯವರ ʻದಿ ಕಾಶ್ಮೀರ್ ಫೈಲ್ಸ್ʼ ರಾಷ್ಟ್ರೀಯ ಏಕತೆ ಸಾರುವ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿನ ನಟನೆಗಾಗಿ ಪಲ್ಲವಿ ಜೋಶಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಶಸ್ತಿ ಪ್ರಕಟಣೆ ಬಳಿಕ ನಟ ಅನುಪಮ್ ಖೇರ್ (Anupam Kher) ತಮ್ಮ ಟ್ವಿಟರ್‌ನಲ್ಲಿ ಪ್ರಶಸ್ತಿ ಬಗ್ಗೆ ಸಂತಸ ಹಂಚಿಕೊಂಡರು. ಅಷ್ಟೇ ಅಲ್ಲದೇ ಈ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದೂ ಉಲ್ಲೇಖಿಸಿದ್ದಾರೆ. ಪುಷ್ಪ ದಿ ರೈಸ್ (Allu Arjun for the movie Pushpa: The Rise) ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ. ಅನುಪಮ್‌ ಖೇರ್‌ ಟ್ವೀಟ್‌ ಕಂಡು ನಟ ಪ್ರಶಸ್ತಿಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಜನ ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ.

ಇದನ್ನೂ ಓದಿ: National Film Awards 2023: ಯಾರಿಗೆಲ್ಲ ಸಿಕ್ಕಿದೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

ಅನುಪಮ್‌ ಖೇರ್‌ ತಮ್ಮ ಟ್ವೀಟ್‌ನಲ್ಲಿ ʻʻದಿ ಕಾಶ್ಮೀರ್ ಫೈಲ್ಸ್‌ ರಾಷ್ಟ್ರೀಯ ಏಕತೆ ಸಾರುವ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಿದೆ. ನಟನಾಗಿ ಮಾತ್ರವಲ್ಲದೆ ಚಿತ್ರದ ಕಾರ್ಯಕಾರಿ ನಿರ್ಮಾಪಕನಾಗಿಯೂ ನಮ್ಮ ಚಿತ್ರಕ್ಕೆ ಈ ಮನ್ನಣೆ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ನಟನೆಗಾಗಿಯೂ ಪ್ರಶಸ್ತಿ ಗೆಲ್ಲಲು ಇಷ್ಟಪಡುತ್ತಿದ್ದೆ. ಆದರೆ ಈಗಲೇ ಎಲ್ಲ ಆಸೆಗಳು ಪೂರ್ಣಗೊಂಡರೆ ಮುಂದೆ ಮಾಡುವ ಕೆಲಸಕ್ಕೆ ಉತ್ಸಾಹ ಆದರೂ ಹೇಗೆ ಬರುತ್ತದೆ? ಮುಂದಿನ ಬಾರಿ ನೋಡೋಣ! ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಜೈ ಹೋ!” ಎಂದು ಖೇರ್‌ ಬರೆದಿದ್ದಾರೆ. 

Exit mobile version