ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ`ʻತೀವ್ರ ಮಾದಕ ವ್ಯಸನʼಕ್ಕೆ ನಟಿ ರಿಯಾ ಚಕ್ರವರ್ತಿ ಅವರು ಕುಮ್ಮಕ್ಕು ನೀಡುತ್ತಿದ್ದರು ಎಂದು ಎನ್‌ಸಿಬಿ ಗಂಭೀರ ಆರೋಪ ಮಾಡಿದೆ. ಆಕೆ ಸುಶಾಂತ್‌ಗೆ ಬೇರೆ ಬೇರೆ ಮೂಲಗಳಿಂದ ಡ್ರಗ್ಸ್ ತರಿಸಿಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ವಿಶೇಷ ನ್ಯಾಯಾಲಯಕ್ಕೆ ಎನ್‌ಸಿಬಿ ಹಸ್ತಾಂತರಿಸಿದ ಕರಡು ಆರೋಪ ಪಟ್ಟಿಯಲ್ಲಿ ಈ ಆರೋಪಗಳನ್ನು ಮಾಡಲಾಗಿದೆ. ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್ ಮಲ್ಲಿಕ್ ಮತ್ತು ಗೆಳೆಯ ಸಾಮ್ಯುವೆಲ್ ಮಿರಾಂಡಾ ಅವರನ್ನು ಬಳಸಿಕೊಂಡು ಸುಶಾಂತ್ ಸಿಂಗ್‌ಗಷ್ಟೇ ಅಲ್ಲ, ಬಾಲಿವುಡ್‌ನ ಹಲವು ಮಂದಿಗೆ ಗಾಂಜಾ ಸರಬರಾಜು ಮಾಡಿದ್ದಾರೆ ಎನ್ನುವ ಗಂಭೀರ ಆರೋಪವೂ ಇದರಲ್ಲಿದೆ.
ಸುಶಾಂತ್ ಸಿಂಗ್ ರಜಪೂತ್ ೨೦೨೦ರ ಜೂನ್ 14ರಂದು ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎಂದು ಬಿಂಬಿತವಾಗಿತ್ತು. ಬಳಿಕ ಡ್ರಗ್ಸ್ ಕೇಸ್ ಇದರ ಸುತ್ತ ಸುತ್ತಿಕೊಂಡಿತು. ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದ ರಿಯಾ ಚಕ್ರವರ್ತಿಯೇ ಸಾವಿಗೆ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು. ಎನ್‌ಸಿಬಿ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ರಿಯಾ ಅವರ ಶಾಮೀಲಾತಿ, ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ್ದವು. ಜಾರಿ ನಿರ್ದೇಶನಾಲಯ ರಿಯಾಗೆ ಕ್ಲೀನ್ ಚಿಟ್ ಕೊಟ್ಟಿದೆ. ಸಿಬಿಐ ವರದಿಯಲ್ಲಿ ರಿಯಾ ಅವರ ಮೇಲೆ ಹಲವು ಆರೋಪಗಳಿವೆ. ಇದೀಗ ಎನ್‌ಸಿಬಿ ಕೂಡಾ ಅವರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿರುವುದರಿಂದ ಪ್ರಕರಣ ಗಂಭೀರ ತಿರುವು ಪಡೆಯುವ ಸಾಧ್ಯತೆ ಇದೆ. ಎನ್‌ಸಿಬಿ ಸಲ್ಲಿಸಿರುವ ಕರಡು ಆರೋಪ ಪಟ್ಟಿಯಲ್ಲಿ 35 ಆರೋಪಿಗಳ ವಿರುದ್ಧ ಒಟ್ಟು 38 ಆರೋಪಗಳನ್ನು ಮಾಡಲಾಗಿದೆ.
ಪ್ರಕರಣದಲ್ಲಿ ೧೦ನೇ ಆರೋಪಿಯಾಗಿರುವ ರಿಯಾ ಚಕ್ರವರ್ತಿ ಅವರು ಶೋವಿಕ್ ಮಲ್ಲಿಕ್ ಚಕ್ರವರ್ತಿ, ಸಾಮ್ಯುವೆಲ್ ಮಿರಾಂಡಾ, ದೀಪೇಶ್ ಸಾವಂತ್ ಮತ್ತು ಇತರರ ಮೂಲಕ ಗಾಂಜಾವನ್ನು ತರಿಸಿಕೊಂಡು ಸುಶಾಂತ್ ಸಿಂಗ್ ರಜಪೂತ್‌ಗೆ ನೀಡುತ್ತಿದ್ದರು. ಶೋವಿಕ್ ಮತ್ತು ಸುಶಾಂತ್ ಸೂಚನೆಯ ಮೇರೆಗೆ ಅದಕ್ಕೆ ಹಣ ಪಾವತಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
NDPS ಕಾಯಿದೆ 1985 ರ ಅಡಿಯಲ್ಲಿ ರಿಯಾ ಚಕ್ರವರ್ತಿ ಮೇಲೆ ಸೆಕ್ಷನ್ 8[c] ಅಡಿಯಲ್ಲಿ 20[b][ii]A, 27A, 28, 29 ಅಪರಾಧ ಮಾಡಿದ್ದಾರೆ ಎನ್‌ಸಿಬಿ ಹೇಳಿದೆ. ಇದರ ಜತೆಗೆ ಸಮಾಜದ ಉನ್ನತ ವರ್ಗಕ್ಕೆ, ಬಾಲಿವುಡ್‌ನ ಕೆಲವು ವ್ಯಕ್ತಿಗಳಿಗೆ ಗಾಂಜಾ ಮಾರಾಟ ಮಾಡಿದ, ಪೂರೈಸಿದ ಆರೋಪವೂ ಅವರ ಮೇಲಿದೆ.
ಇದನ್ನೂ ಓದಿ : ಸುಶಾಂತ್ ಸಿಂಗ್ ರಜಪೂತ್ ಇಲ್ಲದೆ 2 ವರ್ಷ, ಅನ್ಯಾಯ ಅಂತ ಟ್ರೆಂಡ್ ಆಗುತ್ತಿರುವುದೇಕೆ?