ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ (Neha Murder Case) ಬರ್ಬರ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಫಯಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸಿನಿಮಾ ತಾರೆಯರು ಕೂಡ ಧ್ವನಿ ಎತ್ತಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (dhruva sarja) ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಸಹೋದರಿ ನೇಹಾ ಹಿರೇಮಠ ಅವರ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್ನಲ್ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಇದನ್ನು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ’ ಎಂದು ಪೋಸ್ಟ್ ಮಾಡಿದ್ದಾರೆ.
ನಟಿ ಪ್ರಿಯಾ ಸವದಿ (priya savadi) ಕೂಡ ಮಾಧ್ಯಮದ ಮುಂದೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಆಕೆ ನನಗೆ ಸಂಬಂಧಿಯೇ ಆಗಬೇಕಂದಿಲ್ಲ. ಇಲ್ಲಿ ಎಲ್ಲಾರೂ ನಮಗೆ ಅಕ್ಕಾ ತಂಗಿಯರೇ. ನನ್ನ ಅಕ್ಕ-ತಂಗಿನೇ ಬೇಕಾಗಿತ್ತಾ ಇವನಿಗೆ. ಇಲ್ಲಿ ಬಂದಿರುವ ಪ್ರತಿಯೊಬ್ಬರಿಗೂ ಆಕೆ ತಂಗಿ, ಅಕ್ಕ, ಮಗಳೇ.. ಆ ಆರೋಪಿಯನ್ನು ನಮಗೆ ಕೈಗೆ ಕೊಡಿ. ಅವನಿಗೆ ಶಿಕ್ಷೆ ಯಾರು ಕೊಡುತ್ತಾರೆ? ಅವನಿಗೆ ಮನೆಯಲ್ಲಿ ಯಾರೂ ಇಲ್ಲವಾ? ಮುಸ್ಲಿಂ ಅವ್ರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೀದಿಗೆ ಬಿಡ್ತಾರಾ? ಆದರೆ ಅವರಿಗೆ ಚೆನ್ನಾಗಿರೋ ಹುಡುಗೀರು ಬೇಕು. ಸರ್ಕಾರದವರು ಐದು, ಹತ್ತು ವರ್ಷ ಇರುತ್ತಾರೆ ಹೋಗುತ್ತಾರೆ. ಅವರಿಗೆ ಇದರ ನೆನಪು ಸಹ ಇರುವುದಿಲ್ಲ. ಎಲ್ಲಾ ಮುಚ್ಚಿ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Neha Murder Case: ನನ್ನ ಮಗನಿಗೆ ಶಿಕ್ಷೆ ಆಗಬೇಕು; ಯಾರೂ ಇಂಥ ಕೃತ್ಯ ಎಸಗಬೇಡಿ ಎಂದು ಫಯಾಜ್ ತಂದೆ ಕಣ್ಣೀರು
“ಹಂತಕ ಫಯಾಜ್‌ನನ್ನು ಎನ್ ಕೌಂಟರ್ ಮಾಡಬೇಕು. ಅವನಿಗೆ ಯಾವುದೇ ಕರುಣೆ ಬೇಕಾಗಿಲ್ಲ. ನೇಹಾ ಹಿರೇಮಠ್ ಕೊಲೆ ಖಂಡನೀಯ. ಕೊಲೆಗಾರನಿಗೆ ಸಿಗುವ ಶಿಕ್ಷೆ ಎಲ್ಲರಿಗೂ ಪಾಠವಾಗಬೇಕು” ಎಂದು ನಟಿ ಕಾವ್ಯಾ ಶಾಸ್ತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ?
ಪ್ರೀತಿಸಲು ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್ ಪ್ರೇಮಿ ಫಯಾಜ್, ಕಾರ್ಪೋರೇಟರ್ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದ. ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿತ್ತು. ನೇಹಾ ಹಿರೇಮಠ ಕೊಲೆಯಾದ ಯುವತಿ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ.
ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು 🙏
— Dhruva Sarja (@DhruvaSarja) April 19, 2024
ಜೈ ಆಂಜನೇಯ 🙏 pic.twitter.com/z1gkJkEETU
ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ!
ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದಳು. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ, ನೇಹಾ ಪ್ರೀತಿಸಲು ನಿರಾಕರಿಸಿದ್ದಳು. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು.