ಬೆಂಗಳೂರು: ದೇಶ ತೊರೆದಿರುವ ಮತ್ತು ಅತ್ಯಾಚಾರ ಸೇರಿದಂತೆ ಹಲವು ಪ್ರಕರಣ ವಿಚಾರಣೆಯನ್ನು ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ (Swami Nithyananda) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ವಿವಾದಿತ ಸ್ವಾಮಿ ನಿತ್ಯಾನಂದ ಭಾರತದಿಂದ ಪಲಾಯನ ಮಾಡಿ, ಈಕ್ವೆಡಾರ್ ಕರಾವಳಿಯ ಸಣ್ಣ ದ್ವೀಪವನ್ನೇ ತನ್ನ ದೇಶವನ್ನಾಗಿ ಮಾಡಿಕೊಂಡಿದ್ದಾನೆ. ನಿತ್ಯಾನಂದನ ಕೈಲಾಸ ದೇಶಕ್ಕೆ ಆತನ ಪ್ರಿಯಶಿಷ್ಯೆ ರಂಜಿತಾ ಪ್ರಧಾನಿ ಎಂದು ಇತ್ತೀಚೆಗೆ ಗುಸುಗುಸು ಶುರುವಾಗಿತ್ತು. ಇದರ ಬೆನ್ನಲ್ಲೇ ʻಜೋಗಯ್ಯ’ ಚಿತ್ರದ ಟೈಟಲ್ ಸಾಂಗ್ ನಿತ್ಯಾನಂದನ ಕೈಲಾಸ ದೇಶದ ಆಶ್ರಮದಲ್ಲಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೇ ಈ ವಿಡಿಯೊ ವೈರಲ್ ಆಗುತ್ತಿದೆ.
2005ರ ಶಿವರಾಜ್‌ಕುಮಾರ್ ಅವರ ಹಿಟ್ ʻಜೋಗಿʼ ಸಿನಿಮಾದ ʻಜೋಗಯ್ಯ’ ಹಾಡಿನ ಜತೆ ಸ್ವತಃ ನಿತ್ಯಾನಂದ ಡ್ರಮ್ ಬಾರಿಸುತ್ತಾ ಭಕ್ತರ ಜತೆ ಭಜನೆ ಮಾಡುತ್ತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದು. ಕೈಲಾಸ ದೇಶದ ಅಧಿಕೃತ ಟ್ವಿಟರ್ ಖಾತೆ ಎನ್ನಲಾದ ಖಾತೆಯಲ್ಲಿ ವಿಡಿಯೊ ಶೇರ್ ಮಾಡಲಾಗಿದೆ. ಸದ್ಯ ಈ ವಿಡಿಯೊಗೆ ಶಿವರಾಜ್‌ಕುಮಾರ್ ಅಭಿಮಾನಿಗಳು ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಜೋಗಯ್ಯ’ ವಿ. ಹರಿಕೃಷ್ಣ ಸಂಗೀತದಲ್ಲಿ ಚಿತ್ರದ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಇದೇ ಹಾಡು ಈಗ ನಿತ್ಯಾನಂದನ ಕೈಲಾಸ ದೇಶದಲ್ಲಿ ಸದ್ದು ಮಾಡುತ್ತಿದೆ. ಸ್ವತ: ಜೋಗಿ ಪ್ರೇಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದರು.
ಇದನ್ನೂ ಓದಿ: Swami Nithyananda: ಸ್ವಾಮಿ ನಿತ್ಯಾನಂದನ ‘ಕೈಲಾಸ ದೇಶ’ಕ್ಕೆ ನಟಿ ರಂಜಿತಾಳೇ ಪ್ರಧಾನಿ!
ವೈರಲ್ ವಿಡಿಯೊ
ಕೈಲಾಸ ದೇಶಕ್ಕೆ ನಟಿ ರಂಜಿತಾಳೇ ಪ್ರಧಾನಿ
ಈ ಸುದ್ದಿಗೂ ಮುಂಚೆ ಸ್ವಾಮಿ ನಿತ್ಯಾನಂದನಿಗೆ ಸೇರಿದ ವೆಬ್‌ಸೈಟ್‌ನಲ್ಲಿ ರಂಜಿತಾಳನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿರುವುದನ್ನು ಘೋಷಣೆ ಮಾಡಲಾಗಿತ್ತು. ಈ ವೆಬ್‌ಸೈಟ್‌ನಲ್ಲಿ ನಿತ್ಯಾನಂದಮಯಿ ಸ್ವಾಮಿ ಹೆಸರಿನ ತನ್ನ ಇಮೇಜ್ ಜತೆಗೆ ರಂಜಿತಾ ಅವರ ಚಿತ್ರವೂ ಇದ್ದು, ಅದಕ್ಕೆ ಕೈಲಾಸದ ಪ್ರಧಾನಿ ಎಂದು ಶೀರ್ಷಿಕೆ ನೀಡಲಾಗಿತ್ತು. ಕೈಲಾಸ ಎನ್ನುವುದು ನಿತ್ಯಾನಂದನ ಸ್ವಘೋಷಿತ ದೇಶವಾಗಿದ್ದು, ಅದಕ್ಕೆ ಯಾವುದೇ ಅಂತಾರಾಷ್ಟ್ರೀಯ ಮಾನ್ಯತೆ ಇಲ್ಲ.
ಇದನ್ನೂ ಓದಿ: Swami Nithyananda: ʼಕೈಲಾಸʼದಿಂದ ವಿಶ್ವಸಂಸ್ಥೆಗೆ ಬಂದ ನಿತ್ಯಾನಂದನ ಪ್ರತಿನಿಧಿ ಯಾರೀಕೆ?
ಈ ಹಿಂದೆ ನಟಿ ರಂಜಿತಾ ಮತ್ತು ನಿತ್ಯಾನಂದನ ಲೈಂಗಿಕ ದೃಶ್ಯಗಳ ವಿಡಿಯೋ ಸೋರಿಕೆಯಾಗಿ ಭಾರೀ ಸುದ್ದಿಯಾಗಿತ್ತು. ಅಲ್ಲದೇ ನಿತ್ಯಾನಂದ ತನ್ನ ಭಕ್ತರ ಮೇಲೆ ಅತ್ಯಾಚಾರ ನಡೆಸಿದ ಆರೋಪಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಈ ಹಂತದಲ್ಲಿ ಸ್ವಾಮಿ ನಿತ್ಯಾನಂದ ದೇಶದಿಂದ ಪಲಾಯನ ಮಾಡಿ, ಈಕ್ವೆಡಾರ್‌ನಲ್ಲಿ ಸಣ್ಣ ದ್ವೀಪ ಖರೀದಿಸಿ, ಅದನ್ನೇ ತನ್ನ ದೇಶ ಎಂದು ಕರೆದುಕೊಂಡಿದ್ದಾನೆ. ಈಗ ಆ ದೇಶಕ್ಕೆ ರಂಜಿತಾಳನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾನೆ.