ಬೆಂಗಳೂರು: ಆಸ್ಕರ್ ಪ್ರಶಸ್ತಿ (Oscars 2023) ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತದವರಿಗೆ ಬಹುನಿರೀಕ್ಷಿತ ಕಾರ್ಯಕ್ರಮ ಎನ್ನಬಹುದು. ದಕ್ಷಿಣ ಭಾರತದ ಹೆಮ್ಮೆಯಾದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ರೇಸ್‌ನ (RRR in Oscar 2023) ಕೊನೆಯ ಹಂತದಲ್ಲಿದೆ. ಈ ಬಾರಿ ಅತಿ ಹೆಚ್ಚು ಭಾರತೀಯ ಚಿತ್ರಗಳು ಸ್ಪರ್ಧೆಗೆ ನಾಮನಿರ್ದೇಶಗೊಂಡಿರುವ ಕಾರಣ, ಪ್ರಶಸ್ತಿ ಬಗ್ಗೆ ಭಾರತೀಯರ ಕುತೂಹಲ ಹೆಚ್ಚಿದೆ. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರದ ‘ನಾಟು ನಾಟು’ ಗೀತೆ, ಸಾಕ್ಷ್ಯಚಿತ್ರಗಳಾದ ‘ಆಲ್ ದಟ್ ಬ್ರೀದ್ಸ್’ (All That Breathes Documentary Feature) ಮತ್ತು ‘ಎಲಿಫೆಂಟ್ ವಿಸ್ಪರ್ಸ್’ (The Elephant Whisperers for Documentary Short) ಈ ಬಾರಿ ಆಸ್ಕರ್ ರೇಸ್‌ನಲ್ಲಿವೆ.
95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಭಾರತೀಯ ಕಾಲಮಾನ ಮಾರ್ಚ್ 13ರಂದು ಮುಂಜಾನೆ 5.30ರಿಂದ ಆರಂಭವಾಗಲಿದೆ. ಈ ಕಾರ್ಯಕ್ರಮ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ನಾಟು ನಾಟು ಸಂಯೋಜಕ ಎಂಎಂ ಕೀರವಾಣಿ ಮತ್ತು ಗಾಯಕರಾದ ರಾಹುಲ್ ಸಿಪ್ಲಿಗುಂಜ್-ಕಾಲಾ ಭೈರವ ಅವರು ಅಕಾಡೆಮಿ ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ಶೌನಕ್ ಸೇನ್ ಅವರ ‘ಆಲ್ ದಟ್ ಬ್ರೀದ್ಸ್ʼ ,ಕಾರ್ತಿಕಿ ಗೋನ್ಸಾಲ್ವೇಸ್ ಅವರ ‘ದ ಎಲಿಫೆಂಟ್ ವಿಸ್ಪರ್ಸ್’ ಸಹ ಕಿರು ಅವಧಿಯ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ.
ಇದನ್ನೂ ಓದಿ: Oscars 2023: ಆಸ್ಕರ್‌ಗೆ ನಾಮನಿರ್ದೇಶನ, ಭಾರತಕ್ಕೆ ಒಲಿಂಪಿಕ್ ಪಡೆದಷ್ಟೇ ಹೆಮ್ಮೆ: ರಾಮ್ ಚರಣ್
ಸಂಪ್ರದಾಯದಲ್ಲಿ ಹಾಡನ್ನು ಲೈವ್ ಆಗಿ ಪ್ರದರ್ಶಿಸುತ್ತಾರೆ. ನಾಟು ನಾಟು ಹಾಡು, ʻಟೆಲ್ ಇಟ್ ಲೈಕ್ ಎ ವುಮನ್ʼ (Tell It Like a Woman), ʻಹೋಲ್ಡ್ ಮೈ ಹ್ಯಾಂಡ್ ಪ್ರಾಮ್ ಟಾಪ್ ಗನ್: ಮಾವೆರಿಕ್ʼ (Hold My Hand from Top Gun: Maverick), ʻಬ್ಲ್ಯಾಕ್ ಪ್ಯಾಂಥರ್: ವಕಾಂಡ ಫಾರೆವರ್ʼ (Black Panther: Wakanda Forever) ಮತ್ತು ʻದಿಸ್ ಈಸ್ ಎ ಲೈಫ್ ಫ್ರಮ್ ಎವೆರಿವೇರ್ ಆಲ್ ಅಟ್ ಒನ್ಸ್ʼ (his Is a Life from Everything Everywhere All at Once.) ಜತೆ ಸ್ಪರ್ಧಿಸಲಿದೆ.
ಪ್ರಶಸ್ತಿ ಪ್ರದಾನ ಮಾಡಲಿರುವ ದೀಪಿಕಾ ಪಡುಕೋಣೆ
ಸಮಾರಂಭದಲ್ಲಿ ನೇರ ಪ್ರದರ್ಶನಗಳ ಜತೆಗೆ, ನಟಿ ದೀಪಿಕಾ ಪಡುಕೋಣೆ ಪ್ರಶಸ್ತಿಯನ್ನು ನೀಡಲಿದ್ದಾರೆ. ಮಾರ್ಚ್ 12ರಂದು ಲಾಸ್ ಏಂಜಲೀಸ್ ನಲ್ಲಿ ಅಕಾಡೆಮಿ ಅವಾರ್ಡ್ ಸಮಾರಂಭ ನಡೆಯಲಿದೆ. ಇಡೀ ವಿಶ್ವವೇ ಎದುರು ನೋಡುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಭಾರತೀಯರಿಗೂ ವಿಶೇಷವಾಗಿದೆ. ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವ ಲಿಸ್ಟ್ ಹಂಚಿಕೊಂಡಿದ್ದಾರೆ. ಎಮಿಲಿ ಬ್ಲಂಟ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ಜಾನೆಲ್ಲೆ ಮೋನೆ, ಜೊ ಸಲ್ಡಾನಾ, ಜೆನ್ನಿಫರ್ ಕೊನ್ನೆಲ್ಲಿ, ರಿಜ್ ಅಹ್ಮದ್ ಮತ್ತು ಮೆಲಿಸ್ಸಾ ಮೆಕಾರ್ಥಿ ಅವರಂತಹವರ ಜತೆಗೆ ಇವರ ಹೆಸರು ಸೇರಿದೆ.
ಇದನ್ನೂ ಓದಿ; Oscars 2023: ಆಸ್ಕರ್ ಮುಂಚಿತವಾಗಿ ದೀಪಿಕಾ ಹಳೆಯ ಫೋಟೊ ಶೇರ್ ಮಾಡಿ ಹೊಗಳಿದ ಅನುಪಮ್ ಖೇರ್
ಆಸ್ಕರ್ ಪ್ರಶಸ್ತಿಗಾಗಿ ಎದುರು ನೋಡುತ್ತಿರುವ ಭಾರತೀಯರು
ಭಾರತವು ಈ ಹಿಂದೆ ತಿಳಿದಿರುವಂತೆ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಅಥವಾ ಅತ್ಯುತ್ತಮ ವಿದೇಶಿ ಚಲನಚಿತ್ರದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಈವೆರೆಗೆ ಗೆದ್ದಿಲ್ಲ. ಆಸ್ಕರ್‌ನಲ್ಲಿ ಅಂತಿಮ ಐದು ನಾಮನಿರ್ದೇಶನಗಳಲ್ಲಿ ಸ್ಥಾನ ಪಡೆದ ಕೊನೆಯ ಭಾರತೀಯ ಚಲನಚಿತ್ರವೆಂದರೆ ಅಶುತೋಷ್ ಗೋವಾರಿಕರ್ ಅವರ ʻಲಗಾನ್ʼ. ಇದು 2001ರಲ್ಲಿ ನೋ ಮ್ಯಾನ್ಸ್ ಲ್ಯಾಂಡ್ ಸಿನಿಮಾ ವಿರುದ್ಧ ಸೋತಿತು. ಭಾರತೀಯ ಸಾಕ್ಷ್ಯಚಿತ್ರಗಳಲ್ಲಿ ಹಿಂದೆ ಆಸ್ಕರ್‌ನಲ್ಲಿ ಸ್ಮೈಲ್ ಪಿಂಕಿ (Smile Pinki) ಮತ್ತು ಪಿರಿಯಡ್ (Period) ಪ್ರಶಸ್ತಿ ಪಡೆದುಕೊಂಡಿದೆ.ಈ ಬಾರಿ 9,000 ಕ್ಕೂ ಹೆಚ್ಚು ಸದಸ್ಯರು ಆಸ್ಕರ್‌ಗಾಗಿ ತಮ್ಮ ಮತವನ್ನು ಚಲಾಯಿಸಿದ್ದಾರೆ.