ಬೆಂಗಳೂರು: ಒಟಿಟಿ ವೀಕ್ಷಕರಿಗೆ ಈ ವಾರ ಹಬ್ಬದ ವಾತಾವರಣ. ಯಾಕೆಂದರೆ ವಿವಿಧ ಅಭಿರುಚಿಗೆ ತಕ್ಕಂತೆ ಆ್ಯಕ್ಷನ್, ಡ್ರಾಮಾ, ರೊಮ್ಯಾನ್ಸ್, ಮಿಸ್ಟ್ರಿ ಹೀಗೆ ವೈವಿಧ್ಯಮಯ ಸಿನಿಮಾ, ಸೀರಿಸ್‌ಗಳು ಪ್ರಸಾರವಾಗುತ್ತಿವೆ (OTT releases). ಹೇಗೂ ದೀಪಾವಳಿ ಪ್ರಯುಕ್ತ ರಜೆ ಇರುವುದರಿಂದ ನೆಚ್ಚಿನ ಸಿನಿಮಾ ನೋಡುತ್ತ ಕಾಲ ಕಳೆಯಬಹುದು ಎನ್ನುವುದೇ ಹಲವರ ಪಾಲಿಗೆ ʼಡಬಲ್ ಧಮಾಕʼ. ಹಾಗಾದರೆ ಒಟಿಟಿಯಲ್ಲಿ ಈ ವಾರದ ರಿಲೀಸ್ ಯಾವುವು ಎನ್ನುವುದನ್ನು ನೋಡೋಣ:
ದಿ ಕಿಲ್ಲರ್ (The Killer), ನೆಟ್‌ಫ್ಲಿಕ್ಸ್
‘ದಿ ಕಿಲ್ಲರ್’ ಅಮೆರಿಕಾದ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಡೇವಿಡ್ ಫಿಂಚರ್ ನಿರ್ದೇಶಿಸಿದ್ದಾರೆ. ಇದು ಅಲೆಕ್ಸಿಸ್ ʼಮ್ಯಾಟ್ಜ್ʼ ನೊಲೆಂಟ್ ಮತ್ತು ಲ್ಯೂಕ್ ಜಕಾಮನ್ ಅವರ ಫ್ರೆಂಚ್ ಗ್ರಾಫಿಕ್ ಕಾದಂಬರಿ ಸರಣಿಯನ್ನು ಆಧರಿಸಿದೆ. ಈ ಕಥೆಯು ಕೊಲೆಗಾರನ ಸುತ್ತ ಸುತ್ತುತ್ತದೆ. ಮೈಕೆಲ್ ಫಾಸ್ಬೆಂಡರ್, ಅರ್ಲಿಸ್ ಹೊವಾರ್ಡ್, ಚಾರ್ಲ್ಸ್ ಪಾರ್ನೆಲ್, ಕೆರ್ರಿ ಒ’ಮ್ಯಾಲೆ, ಸಲಾ ಬೇಕರ್, ಸೋಫಿ ಮತ್ತಿತರರು ನಟಿಸಿರುವ ಈ ಚಿತ್ರ ನವೆಂಬರ್ 10ರಿಂದ ಪ್ರಸಾರವಾಗಲಿದೆ.
ದೀನಾ ಹಾಶೆಮ್: ಡಾರ್ಕ್ ಲಿಟ್ಲ್ ಮಿಸ್ಪರ್ಸ್ (Dina Hashem: Dark Little Whispers), ಅಮೆಜಾನ್ ಪ್ರೈಮ್ ವಿಡಿಯೊ
ಈ ಶೋದಲ್ಲಿ ಸ್ಟ್ಯಾಂಡ್-ಅಪ್ ಕಾಮೆಡಿಯನ್ ದೀನಾ ಹಾಶೆಮ್ ಸಾವಿನ ಬೆದರಿಕೆಗಳು, ಅಸ್ತಿತ್ವದ ಸಂದಿಗ್ಧತೆಗಳಿಂದ ಹಿಡಿದು ಸಂಬಂಧದ ಸಮಸ್ಯೆಗಳವರೆಗೆ ವಿವಿಧ ವಿಷಯಗಳ ಬಗ್ಗೆ ತನ್ನ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ. ಅರಬ್-ಅಮೆರಿಕನ್ ಆಗಿರುವ ತನ್ನ ಬಗ್ಗೆ ವಿವರಗಳನ್ನು ನೀಡುತ್ತಾರೆ. ಇದು ಕೂಡ ನವೆಂಬರ್ 10ರಂದು ಸ್ಟ್ರೀಮಿಂಗ್ ಆಗಲಿದೆ.
007: ರೋಡ್ ಎ ಮಿಲಿಯನ್ (007: Road to a Million), ಅಮೆಜಾನ್ ಪ್ರೈಮ್ ವಿಡಿಯೊ
‘007: ರೋಡ್ ಟು ಎ ಮಿಲಿಯನ್’ ಶೋ ಒಂಬತ್ತು ಜೋಡಿ ಜೀವನವನ್ನು ಬದಲಾಯಿಸುವ ಮಿಲಿಯನ್ ಮೊತ್ತದ ಬಹುಮಾನದ ಅನ್ವೇಷಣೆಯಲ್ಲಿ ತೊಡಗುವ ರೀತಿಯನ್ನು ತಿಳಿಸುತ್ತದೆ. ಬಾಂಡ್ ಸವಾಲುಗಳಿಂದ ಪ್ರೇರಿತರಾಗಿ ಅವರು ಸಾಹಸವನ್ನು ಪ್ರದರ್ಶಿಸುವುದನ್ನು ಚಿತ್ರೀಕರಿಸಲಾಗಿದೆ. ನವೆಂಬರ್ 10ರಿಂದ ಈ ಶೋವನ್ನು ವೀಕ್ಷಿಸಬಹುದು.
ಎಟ್ ದಿ ಮೂವ್‌ಮೆಂಟ್ (At the Moment), ನೆಟ್‌ಫ್ಲಿಕ್ಸ್
ನವೆಂಬರ್ 10ರಂದು ಪ್ರಸಾರವಾಗುವ ಇದೊಂದು ಡ್ರಾಮಾಗಳ ಸರಣಿ. ಕೊರೊನಾ ಸಾಂಕ್ರಾಮಿಕ ರೋಗ ಹರಡಿದ್ದ ಕಾಲಘಟ್ಟದ ಕಥೆಯನ್ನು ಇದು ಹೇಳುತ್ತದೆ. 10 ವಿಶಿಷ್ಟ ಪ್ರೇಮಕಥೆ ಇಲ್ಲಿದ್ದು, ಜೋಡಿಯ ಉತ್ಸಾಹ ಮತ್ತು ನೋವಿನ ಕ್ಷಣಗಳನ್ನು ಪ್ರತಿಬಿಂಬಿಸುತ್ತದೆ.
ಫೇಮ್ ಆಫ್ಟರ್ ಫೇಮ್ (Fame After Fame), ನೆಟ್‌ಫ್ಲಿಕ್ಸ್
ಇದು ರಿಯಾಲಿಟಿ ಶೋ ಸರಣಿಯಾಗಿದ್ದು, ಸ್ಪ್ಯಾನಿಷ್ ಟಿವಿಯಲ್ಲಿ 14 ಯಶಸ್ವಿ ವರ್ಷಗಳನ್ನು ಪೂರೈಸಿದ ಬಳಿಕ ಅಮೆರಿಕದಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಹುಡುಕುವವರ ಪಾಡನ್ನು ವಿವರಿಸುತ್ತದೆ. ಇದು ಕೂಡ ನವೆಂಬರ್ 10ರಿಂದ ವೀಕ್ಷಣೆಗೆ ಲಭ್ಯ.
ಅಪೂರ್ವ (Apurva), ಡಿಸ್ನಿ + ಹಾಟ್‌ಸ್ಟಾರ್
ಟ್ರೇಲರ್‌ನಿಂದಲೇ ಕುತೂಹಲ ಕೆರಳಿಸಿರುವ ಹಿಂದಿ ಚಿತ್ರ ʼಅಪೂರ್ವʼ ನವೆಂಬರ್ 15ರಂದು ರಿಲೀಸ್ ಆಗಲಿದೆ. ಥ್ರಿಲ್ಲರ್ ಚಿತ್ರವಾಗಿರುವ ಇದನ್ನು ನಿಖಿಲ್ ನಾಗೇಶ್ ಭಟ್ ನಿರ್ದೇಶಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ, ತಾರಾ ಸುತಾರಿಯಾ, ಧೈರ್ಯ ಕರ್ವಾ ಮತ್ತು ರಾಜ್‌ಪಾಲ್ ಯಾದವ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿದ್ದಾರೆ. ಚಂಬಲ್ ಕಣಿವೆಯ ಕಥೆಯನ್ನು ಈ ಚಿತ್ರ ಹೇಳುತ್ತದೆ. ಈ ಚಿತ್ರ ಬದುಕುಳಿಯಲು ಮತ್ತು ಬದುಕಲು ಏನು ಬೇಕಾದರೂ ಮಾಡುವ ಸಾಮಾನ್ಯ ಮಹಿಳೆಯ ಜೀವನದ ಸುತ್ತ ಸುತ್ತುತ್ತದೆ.
ದಿ ಗ್ರ್ಯಾಂಡ್ ಟೂರ್ ಸೀಸನ್ 5 (The Grand Tour Season 5), ಅಮೆಜಾನ್ ಪ್ರೈಮ್ ವಿಡಿಯೊ
ಫಿಲ್ ಚರ್ಚ್ವರ್ಡ್ ನಿರ್ದೇಶಿಸಿದ ಕ್ರೀಡಾ ಸಾಕ್ಷ್ಯ ಚಿತ್ರ ಇದು. ಆತಿಥೇಯರಾದ ಜೆರೆಮಿ ಕ್ಲಾರ್ಕ್ಸನ್, ರಿಚರ್ಡ್ ಹ್ಯಾಮಂಡ್ ಮತ್ತು ಜೇಮ್ಸ್ ಮೇ ಮಧ್ಯ ಯುರೋಪಿಗೆ ರಸ್ತೆ ಪ್ರವಾಸವನ್ನು ಪ್ರಾರಂಭಿಸುತ್ತಾರೆ. ಈ ಪ್ರಯಾಣವನ್ನು, ಅಪಾಯಕಾರಿ ಸಾಹಸವನ್ನು ಈ ಸೀಸನ್ ಪ್ರದರ್ಶಿಸುತ್ತದೆ. ನವೆಂಬರ್ 16ರಿಂದ ‘ದಿ ಗ್ರ್ಯಾಂಡ್ ಟೂರ್ ಸೀಸನ್ 5’ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಬಹುದು.
ಇದನ್ನೂ ಓದಿ: Aamir Khan: ʻಸಿತಾರೆ ಜಮೀನ್ ಪರ್ʼನಲ್ಲಿ ಆಮೀರ್ -ದರ್ಶೀಲ್ ಸಫಾರಿ ಮತ್ತೆ ಒಂದಾಗ್ತಾರಾ?
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ