ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ (Bigg Boss Kannada) ಈಗ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದ್ದು, ಒಟ್ಟು 16 ಅಭ್ಯರ್ಥಿಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಯಾರೆಲ್ಲ ಇದರಲ್ಲಿ ಭಾಗಿಯಾಗಲಿದ್ದಾರೆ ಎಂಬ ಪೂರ್ಣ ವಿವರ ಇಲ್ಲಿದೆ. ಆಗಸ್ಟ್ 7ರಿಂದ ಆರಂಭಗೊಂಡು 42 ದಿನಗಳ ಕಾಲ ಈ ಶೋ ನಡೆಯಲಿದೆ. ವೂಟ್ ಆ್ಯಪ್ ಸಬ್ ಸ್ಕ್ರೈಬ್ ಆಗುವ ಮೂಲಕ ಇದನ್ನು 24/7 ಅಂದರೆ ದಿನವಿಡೀ ನೋಡಬಹುದಾಗಿದೆ.
ದೊಡ್ಮನೆಯ ಸದಸ್ಯರು ಇವರೆಲ್ಲ!
೧. ಆರ್ಯವರ್ಧನ್ ಗುರೂಜಿ: ಖ್ಯಾತ ಜ್ಯೋತಿಷಿ ಆದ ಇವರು ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದ ಮೊದಲ ಅಭ್ಯರ್ಥಿ. ಇವರು ತಮ್ಮ ವಿಶೇಷ ಹಾವಭಾವಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವರು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ಮೊದಲೇ ಭವಿಷ್ಯ ನುಡಿದಿದ್ದರು.
೨. ಸೋನು ಶ್ರೀನಿವಾಸ್ ಗೌಡ: ಇವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಖ್ಯಾತಿ ಹೊಂದಿರುವವರು. ಟಿಕ್ ಟಾಕ್, ರೀಲ್ಸ್ ಮೂಲಕ ತಮ್ಮ ಫಾಲೊವರ್ಸ್‌ಗೆ ಮನರಂಜನೆ ನೀಡುವ ಇನ್‌ಸ್ಟಾಗ್ರಾಂ ತಾರೆ. ಇವರಿಗೆ ಇನ್‌ಸ್ಟಾಗ್ರಾಂನಲ್ಲಿ 75000ಕ್ಕೂ ಅಧಿಕ ಫಾಲೊವರ್ಸ್‌ಗಳಿದ್ದಾರೆ.
೩. ರೂಪೇಶ್ ಶೆಟ್ಟಿ: ಇವರು ಪ್ರಸಿದ್ಧ ರೇಡಿಯೊ ಜಾಕಿ ಹಾಗೂ ನಟರು. 31 ವರ್ಷದ ರೂಪೇಶ್ ವೃತ್ತಿಯಲ್ಲಿ ಯೂಟ್ಯೂಬರ್. ತುಳು ಹಾಗೂ ಕನ್ನಡ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯರು. ಗಿರ್ಗಿಟ್, ಗೋವಿಂದಾ ಗೋವಿಂದಾ ಹಾಗೂ ಇತರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
೪. ಸ್ಫೂರ್ತಿ ಗೌಡ: ಮೂಲತಃ ತೀರ್ಥಹಳ್ಳಿಯವರಾದ ಇವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ನಟನೆ ಇವರ ಅಭಿರುಚಿ. ಬಿಗ್ ಬಾಸ್ ಮನೆಯ ನಾಲ್ಕನೇ ಸದಸ್ಯೆಯಾಗಿ ಪ್ರವೇಶಿಸಿದ್ದಾರೆ
೫. ಸಾನ್ಯ ಅಯ್ಯರ್: ಪುಟ್ಟಗೌರಿ ಮದುವೆಯ ಮೂಲಕ ಮನೆಮಾತಾದ ಇವರು ಪಟಾಕಿ ಪೊರಿಯೋ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಹಿರಿತೆರೆಯಲ್ಲೂ ತಮ್ಮ ಗುರುತನ್ನು ಮೂಡಿಸಿದ್ದಾರೆ. ಬಹುಮುಖ ಪ್ರತಿಭೆಯಾದ ಸಾನ್ಯ ಕವಯತ್ರಿಯೂ ಹೌದು. ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ.
೬. ಲೋಕೇಶ್ ಕುಮಾರ್: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತಮ್ಮ ಹಾಸ್ಯದಿಂದ ಎಲ್ಲರನ್ನೂ ಮನರಂಜಿಸಿದವರು ಲೊಕೇಶ್ ಕುಮಾರ್. ತಮ್ಮ 9ನೇ ವಯಸ್ಸಿಗೆ ಮನೆ ಬಿಟ್ಟು ಬೆಂಗಳೂರಿಗೆ ಬಂದು ಜೀವನವನ್ನು ಆರಂಭಿಸಿದವರು. ಅತ್ಯಂತ ಕಷ್ಟದಿಂದ ಮೇಲೆದ್ದು ಬಂದ ಪ್ರತಿಭೆ ಇವರು.
೭. ಅಕ್ಷತಾ ಕುಕಿ: ದಾಂಡೇಲಿಯ ಈ ಯುವತಿ ಬಿಗ್ ಬಾಸ್ ಮನೆಯ 7ನೇ ಸದಸ್ಯೆ. ಇವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿರುವ ಬೆಡಗಿ.
೮. ರಾಕೇಶ್ ಅಡಿಗ: ಇವರು ನಟ ಹಾಗೂ ರ‍್ಯಾಪರ್. ಈಗಾಗಲೇ ಕನ್ನಡದಲ್ಲಿ ಸುಮಾರು 13 ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ಇವರಿಗಿದೆ. ಸಿನಿಮಾ ಹಾಗೂ ಸಂಗೀತವನ್ನು ಇಷ್ಟಪಡುವವರು ರಾಕೇಶ್.
೯. ಕಿರಣ್ ಯೋಗೇಶ್ವರ್: ರಾಜಸ್ಥಾನದಲ್ಲಿ ಜನಿಸಿದ ಇವರು ಮಾಡೆಲ್ ಹಾಗೂ ಡ್ಯಾನ್ಸರ್. ಇವರು ಬಿಗ್ ಬಾಸ್ ಮನೆಗೆ 9ನೇ ಅಭ್ಯರ್ಥಿಯಾಗಿ ಪ್ರವೇಶಿಸಿದ್ದಾರೆ.
೧೦. ಚೈತ್ರಾ ಹಳ್ಳಿಕೇರಿ: ಶಿಷ್ಯ ಹಾಗೂ ಖುಷಿ ಸಿನಿಮಾದಲ್ಲಿ ಅಭಿನಯಿಸಿದ ಇವರು ಬಹಳ ಸಮಯದ ನಂತರ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಇವರು 10ನೇ ಅಭ್ಯರ್ಥಿ.
೧೧. ಉದಯ್ ಸೂರ್ಯ: ಬೆಂಗಳೂರು ಮೂಲದ ಇವರು ಉದಯೋನ್ಮುಖ ನಟ. ಧಾರವಾಹಿಗಳಲ್ಲಿ ಅಭಿನಯಿಸಿದ ಖ್ಯಾತಿ ಹೊಂದಿರುವ ಇವರು 11ನೇ ಅಭ್ಯರ್ಥಿ.
೧೨. ಜಯಶ್ರೀ ಆರಾಧ್ಯ: ಗ್ಲಾಮ್ ರೂಮ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಇವರು ಉದಯೋನ್ಮುಖ ನಟಿ. ಇವರು ಬಿಗ್ ಬಾಸ್ ಮನೆಯ 12ನೇ ಅಭ್ಯರ್ಥಿ.
೧೩. ಅರ್ಜುನ್ ರಮೇಶ್: ಮಹಾಕಾಳಿ ಧಾರಾವಾಹಿಯ ಮೂಲಕ ಪ್ರಸಿದ್ಧಿಯನ್ನು ಪಡೆದ ಇವರು ರಾಜಕಾರಣಿ ಕೂಡ ಹೌದು. ಟಿ ನರಸೀಪುರದ 14ನೇ ವಾರ್ಡ್‌ನ ಕೌನ್ಸಿಲರ್ ಆಗಿದ್ದಾರೆ. ಈಗ ಇವರು ಬಿಗ್ ಬಾಸ್ ಮನೆಗೆ 13ನೇ ಅಭ್ಯರ್ಥಿಯಾಗಿ ಪ್ರವೇಶಿಸಿದ್ದಾರೆ.
೧೪. ಜಸ್ವಂತ್ ಬೋಪಣ್ಣ: ಫಿಟ್‌ನೆಸ್ ಮಾಡೆಲ್ ಹಾಗೂ ಸಾಮಾಜಿಕ ಜಾಲತಾಣದ ತಾರೆಯಾದ ಇವರು ಬಿಗ್ ಬಾಸ್‌ನ 14ನೇ ಅಭ್ಯರ್ಥಿಯಾಗಿದ್ದಾರೆ. ಹಿಂದಿಯ ಖ್ಯಾತ ರಿಯಾಲಿಟಿ ಶೋ ಆದ ರೋಡಿಸ್‌ನಲ್ಲಿ ಫೈನಲ್ ತಲುಪಿದ್ದರು.
೧೫. ನಂದಿನಿ: ಈಗಾಗಲೇ ರೋಡಿಸ್ ಗೆದ್ದಿರುವ ಖ್ಯಾತಿ ಇವರಿಗದೆ. ರೋಡಿಸ್ ಶೋನಲ್ಲಿ ಇವರು ಹಾಗೂ ಜಸ್ವಂತ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ಇವರು ಬಿಗ್ ಬಾಸ್ ಮನೆಗೆ 15ನೇ ಅಭ್ಯರ್ಥಿಯಾಗಿದ್ದಾರೆ.
೧೬. ಸೋಮಣ್ಣ ಮಾಚಿಮಾಡ: ಮಾಧ್ಯಮ ಕ್ಷೇತ್ರದಲ್ಲಿ ಹೆಸರು ಗಳಿಸಿದ ಸೋಮಣ್ಣ ಸುದ್ದಿ ನಿರೂಪಕರು. ಅನೇಕ ಸೆಲೆಬ್ರಿಟಿಗಳನ್ನು ಸಂದರ್ಶಿಸಿ ಪ್ರಸಿದ್ಧರಾದವರು. ಇವರು ಈಗ ಬಿಗ್ ಬಾಸ್ ಮನೆಯ 16ನೇ ಹಾಗೂ ಕೊನೆಯ ಅಭ್ಯರ್ಥಿಯಾಗಿದ್ದಾರೆ.
ಇದನ್ನೂ ಓದಿ | Bigg Boss Kannada | ಪುಟ್ಟ ಗೌರಿ ಮದುವೆಯ ಸಾನ್ಯ ನೆನಪಿನ ಬುತ್ತಿ; ಕಿಚ್ಚನ ಪ್ರಶ್ನೆಗೆ ಸೀತಾವಲ್ಲಭದ ಸ್ಫೂರ್ತಿ ಸುಸ್ತು