ಬೆಂಗಳೂರು: ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಬಹು ನಿರೀಕ್ಷಿತ, ವಿವಾದಿತ ಚಿತ್ರ ʼಪಠಾಣ್ʼ ಟ್ರೈಲರ್ ಬಿಡುಗಡೆಯಾಗಿದೆ.
ಟ್ರೈಲರ್ ಅನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಶಾರುಖ್ ಖಾನ್, ʼʼನೈಜವಾದ ಉದ್ವೇಗ ಉಂಟುಮಾಡಲು ʼಪಠಾಣ್ʼ ಆಗಮಿಸುತ್ತಿದ್ದಾನೆ. ಪಟಾಕಿ ಕೂಡ ಜತೆಗೆ ತರುತ್ತಿದ್ದಾನೆʼʼ ಎಂದು ಟ್ವೀಟ್ ಮಾಡಿದ್ದಾರೆ. ಇಂದು ಟ್ರೈಲರ್ ಬಿಡುಗಡೆ ಎಂದು ಅವರು ನಿನ್ನೆಯೇ ಹಂಚಿಕೊಂಡಿದ್ದರು.
ಯಶ್‌ರಾಜ್ ಪಿಲಂಸ್ ನಿರ್ಮಿಸಿರುವ ಪಠಾಣ್ ಫಿಲಂನ ಹಲವು ಝಲಕ್‌ಗಳು ಈ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿವೆ. ಭಾರತದ ಮೇಲೆ ಹಿಂದೆ ಎಂದೂ ನಡೆಯದಂಥ ಭಾರಿ ಪ್ರಮಾಣದ ದಾಳಿ ನಡೆಸಲು ವೈರಿಗಳು ತಯಾರಿ ನಡೆಸಿದ್ದಾರೆ. ಇದರ ನೇತೃತ್ವವನ್ನು ವಹಿಸಿದ ಕೇಡಿಗನ ಪಾತ್ರದಲ್ಲಿ ಜಾನ್ ಅಬ್ರಾಹಂ ಕಾಣಿಸಿಕೊಂಡಿದ್ದಾರೆ. ಇದನ್ನು ತಡೆಗಟ್ಟಲು ಪಠಾಣ್ ತನ್ನ ʼವನವಾಸʼ ಮುಗಿಸಿ ಹೊರಗೆ ಬರಬೇಕಾಗುತ್ತದೆ.
ಶಾರುಖ್‌ಗೂ ಇದು ಹಲವು ವರ್ಷಗಳ ವನವಾಸದ ಬಳಿಕ ಬರುತ್ತಿರುವ ಸಿನಿಮಾ ಆಗಿದೆ. ಪಠಾಣ್‌ನ ಕಾರ್ಯಾಚರಣೆಯಲ್ಲಿ ಶಾರುಖ್‌ಗೆ ದೀಪಿಕಾ ಪಡುಕೋಣೆ ಜತೆಯಾಗಿದ್ದಾರೆ. ಶಾರುಖ್- ದೀಪಿಕಾ- ಜಾನ್ ಅಬ್ರಾಹಂ ಹೈ ವೋಲ್ಟೇಜ್ ಮುಖಾಮುಖಿಯ ದೃಶ್ಯಗಳು ಟ್ರೈಲರ್‌ನಲ್ಲಿವೆ.
ಇದನ್ನೂ ಓದಿ | Shahrukh Khan | ಹಲವು ದೇಶಗಳಲ್ಲಿ ಶಾರುಖ್ ಅಭಿನಯದ ʻಪಠಾಣ್ʼ ಚಿತ್ರೀಕರಣ: ಶೀಘ್ರವೇ ತೆರೆಗೆ!
ಇತ್ತೀಚೆಗೆ ಪಠಾಣ್‌ನ ಒಂದು ಹಾಡು ವಿವಾದದ ಕಿಡಿ ಹೊತ್ತಿಸಿತ್ತು. ಇದರ ʼಬೇಶರಮ್ ರಂಗ್ʼ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದರು. ಇದನ್ನು ಬಿಜೆಪಿಯ ಹಲವು ನಾಯಕರು ಹಾಗೂ ಹಿಂದುತ್ವವಾದಿಗಳು ತೀವ್ರವಾಗಿ ವಿರೋಧಿಸಿದ್ದರು. ಈ ವಿವಾದದಿಂದ ಯಶ್‌ರಾಜ್ ಫಿಲಂಸ್ ವಿಚಲಿತವಾಗಿಲ್ಲ ಎಂದು ತೋರಿಸುವಂತೆ, ಟ್ರೈಲರ್‌ನಲ್ಲೂ ಒಂದು ದೃಶ್ಯದಲ್ಲಿ ದೀಪಿಕಾ ಕೇಸರಿ ಬಿಕಿನಿಯಲ್ಲಿ ಹಾದುಹೋಗುತ್ತಾರೆ.
ಇತ್ತೀಚೆಗೆ ಪಠಾಣ್ ಚಿತ್ರವನ್ನು ಕೇಂದ್ರ ಸಿನಿಮಾ ಪ್ರಮಾಣೀಕರಣ ಮಂಡಳಿ (CBFC) ವೀಕ್ಷಿಸಿ, ಚಿತ್ರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲು ಸೂಚಿಸಿತ್ತು. ಇದನ್ನು ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ ಸೂಚಿಸಿದ್ದರು. ಆದರೆ ಯಾವ ಬದಲಾವಣೆ ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ | Pathan Movie | ಶಾರುಖ್ ಖಾನ್ ಎದುರು ಸಿಕ್ಕರೆ ಜೀವಂತ ಸುಟ್ಟುಬಿಡುವೆ; ಕೋಪದಿಂದ ನುಡಿದ ಅಯೋಧ್ಯೆಯ ಸಾಧು