ಬೆಂಗಳೂರು : ಪೆಂಟಗನ್ ಸಿನಿಮಾ (Pentagon Movie) ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಚಿತ್ರವಾಗಿದ್ದು, ಚಿತ್ರದ 5ನೇ ಟೀಸರ್ ಜನವರಿ 18 ರಂದು ಬಿಡುಗಡೆಯಾಗಿದೆ. ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಪೆಂಟಗನ್’ ಸಿನಿಮಾದ ಐದನೇ ಕಥೆಯ ಟೀಸರ್ ಕನ್ನಡಪರ ಹೋರಾಟಗಾರರ ಕಥೆಯನ್ನು ಇದು ಒಳಗೊಂಡಿದೆ ಎನ್ನಲಾಗುತ್ತಿದೆ. ಟೀಸರ್‌ನಲ್ಲಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ʻಪೆಂಟಗನ್’ ಒಂದೊಂದು ಕಥೆಯನ್ನು ಒಬ್ಬೊಬ್ಬರು ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಕಥೆಯಲ್ಲಿ ಮುಖ್ಯಪಾತ್ರವನ್ನು ಕಿಶೋರ್ ಮಾಡಿದ್ದಾರೆ. ಜತೆಗೆ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಕೂಡ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಟೀಸರ್ ನಲ್ಲಿ ನಟ ಪೃಥ್ವಿ ಅಂಬಾರ್ ಆಡುವ ಡೈಲಾಗ್ ಒಂದೊಂದು ಕನ್ನಡ ಸಂಘಟನೆಯ ಮುಖಂಡನನ್ನು ನೆನಪಿಸುವಂತಿದೆ. ಅದರಲ್ಲೂ ರೋಲ್ ಕಾಲ್, ರೌಡಿ, ‘ಅ’ಕಾರ-‘ಹಕಾರ’, ಮಾಜಿ ರೌಡಿ, ಮಾಜಿ ಭೂಗತ ದೊರೆ ಹೀಗೆ ಸೂಚ್ಯವಾಗಿ ಅನೇಕ ಮಾತುಗಳನ್ನು ಆಡಿಸುವ ಮೂಲಕ ಗುರು ದೇಶಪಾಂಡೆ ಅಚ್ಚರಿ ಮೂಡಿಸಿದ್ದಾರೆ. ಕನ್ನಡ ಪರ ಸಂಘಟನೆಗಳ ಮುಖಂಡರ ಬಗ್ಗೆ ಅನುಮಾನ ಮೂಡುವ ರೀತಿಯಲ್ಲಿ ಟೀಸರ್ ತಯಾರಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Vasishta Simha | ನಟ ಪ್ರಭುದೇವ 60ನೇ ಸಿನಿಮಾದಲ್ಲಿ ನಟ ವಸಿಷ್ಠ ಸಿಂಹ!
ಅಷ್ಟೇ ಅಲ್ಲ, ಪ್ರತಿಭಟನೆಯ ನೆಪದಲ್ಲಿ ಹೋರಾಟ, ಬ್ಯಾನ್ ಎಂದು ಆಮೇಲೆ ಮೌನ ತಾಳುವ ಹೋರಾಟಗಾರರನ್ನು ನಿರ್ದೇಶಕರು ಪ್ರಶ್ನಿಸಿದ್ದಾರೆ. ನೇರವಾಗಿ ರಜನಿಕಾಂತ್ ಸಿನಿಮಾ ಬಿಡುಗಡೆಯ ಹೋರಾಟದ ವಿಷಯವನ್ನು ತಂದಿದ್ದಾರೆ. ಹೀಗಾಗಿ ಒಂದಷ್ಟು ಹೋರಾಟಗಳನ್ನು ಈ ಟೀಸರ್ ನೆನಪಿಸುತ್ತದೆ.
ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಈ ಕಥೆಗೆ ಅಭಿಲಾಷ್ ಕಳತ್ತಿ ಛಾಯಾಗ್ರಹಣ ಇದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬಾರ್, ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ, ಅಶ್ವಿನಿ ಗೌಡ ಸೇರಿದಂತೆ ಹಲವು ಅನುಭವಿ ಕಲಾವಿದರು ಇದ್ದಾರೆ. ʻಪೆಂಟಗನ್’ ಸಿನಿಮಾದಲ್ಲಿ ಒಟ್ಟು 5 ಕಥೆಗಳಿದ್ದು, ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ, ‘ಬ್ರಹ್ಮಚಾರಿ’ ಖ್ಯಾತಿಯ ಚಂದ್ರ ಮೋಹನ್, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ಹೊಸ ಪ್ರತಿಭೆ ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಜಿ ಸಿನಿಮಾಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ.
ಇದನ್ನೂ ಓದಿ | Singham Again | ಸಿಂಗಂ ಅಗೇಯ್ನ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟರ ಸಮಾಗಮ; ಲೇಡಿ ಸಿಂಗಂ ಆಗಿ ಮಿಂಚಲಿದ್ದಾರೆ ದೀಪಿಕಾ ಪಡುಕೋಣೆ!