ಬೆಂಗಳೂರು: ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ (Actor Upendra) ಅವರು ವಿಡಿಯೊ ಲೈವ್‌ನಲ್ಲಿ ಮಾತನಾಡುವಾಗ ಗಾದೆ ಮಾತೊಂದನ್ನು ಉಲ್ಲೇಖಿಸಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ನಟನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿತ್ತು. ಇದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ. ತಪ್ಪಿನ ಅರಿವಾದ ಬಳಿಕ ಉಪೇಂದ್ರ ಕ್ಷಮೆ ಕೇಳಿದ್ದರು. ಆದರೆ, ಈ ತಪ್ಪನ್ನು ಕೆಲವರು ಮನ್ನಿಸಿಲ್ಲ. ಆದರೀಗ ನಟ ವಿಚಾರಣೆಗೆ ಹಾಜರಾಗಬೇಕಾದ ಬೆನ್ನಲ್ಲೆ ನಟ ಉಪೇಂದ್ರ ನಾಪತ್ತೆಯಾಗಿದ್ದಾರೆ. ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ನಟನ ವಿರುದ್ಧ ಎರಡು ಎಫ್ಐಆರ್ ದಾಖಲಾಗಿವೆ. ಸದ್ಯ ಉಪೇಂದ್ರ ನಿವಾಸಕ್ಕೆ
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರಿಂದ ನೋಟಿಸ್ ನೀಡಿದ್ದಾರೆ. ಉಪೇಂದ್ರ ಅವರ ಫೋನ್ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ಗೂ ನೋಟಿಸ್ ರವಾನಿಸಿದ್ದಾರೆ ಪೊಲೀಸರು. ಇಂದು 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಂದ ನೋಟಿಸ್ ನೀಡಲಾಗಿತ್ತು. ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ನೋಟಿಸ್ ನೀಡಲು ಹೋದ ವೇಳೆ ನಟ ಉಪೇಂದ್ರ ನಾಪತ್ತೆಯಾಗಿದ್ದಾರೆ. ಸದ್ಯ ಉಪೇಂದ್ರ ಅವರ ಕತ್ರಿಗುಪ್ಪೆ ಹಾಗೂ ಸದಾಶಿವನಗರದಲ್ಲಿರುವ ಈ ಎರಡೂ ಮನೆಗೂ ನೋಟಿಸ್ ಕೊಟ್ಟಿದ್ದರು. ಇದೀಗ ಉಪ್ಪಿ ಅವರ ಸ್ನೇಹಿತರು ಹಾಗೂ ಸಂಬಂಧಿಕರ ಸಂಪರ್ಕದಲ್ಲಿರುವ ಬಗ್ಗೆ ಪೊಲೀಸರಿಂದ ತೀವ್ರ ಶೋಧ ನಡೆಯುತ್ತಿದೆ.
ಇದನ್ನೂ ಓದಿ: Actor Upendra: ಜಾತಿನಿಂದನೆ; ಉಪೇಂದ್ರ ವಿರುದ್ಧ ಮತ್ತೊಂದು ಎಫ್‌ಐಆರ್, ಬಂಧನ ಭೀತಿಯಲ್ಲಿ ಬುದ್ಧಿವಂತ
ಬಂಧನ ಸಾಧ್ಯತೆ ಇಲ್ಲ?
ಮೂಲಗಳ ಪ್ರಕಾರ ಇಷ್ಟಾದರೂ ನಟ ಉಪೇಂದ್ರ ಅವರ ಬಂಧನ ಸಾಧ್ಯತೆ ಇಲ್ಲ ಎನ್ನಲಾಗಿದೆ. ಮೊದಲಿಗೆ ನಟ ಉಪೇಂದ್ರ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಹೇಳಿಕೆ ಯಾವ ಉದ್ದೇಶದಿಂದ ನೀಡಲಾಗಿದೆ?ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ? ಉದ್ದೇಶಪೂರ್ವಕವಾಗಿ ಹೇಳಿಕೆ ಕೊಡಲಾಗಿದ್ಯಾ? ಹೀಗೆ ಎಲ್ಲವನ್ನೂ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Actor Upendra: ಯಾಕೆ ನನ್ನ ಮೇಲೆ ಇಷ್ಟೊಂದು ದ್ವೇಷ? ಟೀಕಿಸಿದವರಿಗೆ ಉಪೇಂದ್ರರಿಂದ ಹಲವು ಪ್ರಶ್ನೆಗಳು!
ಆಗಿದ್ದೇನು?
ಆಗಸ್ಟ್ 12ರಂದು ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜತೆ ಪ್ರಜಾಕೀಯ ಮುನ್ನೆಲೆಗೆ ಬಂದು 6 ವರ್ಷವಾದ ಪ್ರಯುಕ್ತ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ʼಊರು ಅಂದ್ಮೇಲೆ ಹೊಲೆಗೇರಿ ಇರುತ್ತಲ್ಲಾ ಹಾಗೆ..ʼ ಎಂದು ಹೇಳಿದ್ದರು. ಇದೀಗ ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಜಾತಿ ಜಗಳ ಬಿಟ್ಟು ಒಂದಾಗಬೇಕು ಎನ್ನುವ ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು.