ಬೆಂಗಳೂರು: ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬಂದಿರುವ ʻಪೊನ್ನಿಯನ್ ಸೆಲ್ವನ್-2ʼ ಸಿನಿಮಾ (Ponniyin Selvan 2) ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಏಪ್ರಿಲ್ 28ರಂದು ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆಯ ಮಹಾಪೂರ ವ್ಯಕ್ತಪಡಿಸುತ್ತಿದ್ದಾರೆ. ರಿಲೀಸ್ ಆದ ಮೂರು ದಿನದಲ್ಲಿಯೇ ಈ ಚಿತ್ರ ನೂರು ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ದಳಪತಿ ವಿಜಯ್ ನಟನೆಯ ʻವಾರಿಸುʼ ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿರುವ ಪಿಎಸ್-2 ಹೊಸ ದಾಖಲೆ ತನ್ನದಾಗಿಸಿಕೊಳ್ಳುತ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಪೊನ್ನಿಯನ್ ಸೆಲ್ವನ್ 2ನಲ್ಲಿ ದೊಡ್ಡ ತಾರಾಬಳಗವೇ ಇದೆ. ಜಯಂರವಿ, ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದಿರುವ ಕಾದಂಬರಿ ಪೊನ್ನಿಯನ್ ಸೆಲ್ವನ್ ಆಧರಿಸಿ ಮಣಿರತ್ನಂ ಚಿತ್ರಕತೆ ರಚಿಸಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚೋಳ ಸಾಮ್ರಾಜ್ಯದ ಗತವೈಭವ ಸಾರುವ ಈ ಸಿನಿಮಾ ಮೇಕಿಂಗ್, ತಾರಾ ಬಳಗ, ಸಂಗೀತ, ನಟನೆ ಎಲ್ಲದರಲ್ಲಿಯೂ ನೋಡುಗರ ಗಮನ ಸೆಳೆಯುತ್ತಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ನಡಿ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: Ponniyin Selvan 2: ಮೊದಲ ದಿನವೇ ಭಾರಿ ಕಲೆಕ್ಷನ್: ಸಲ್ಮಾನ್ ಚಿತ್ರವನ್ನೂ ಹಿಂದಿಕ್ಕಿದ ಪೊನ್ನಿಯನ್ ಸೆಲ್ವನ್-2
ಕಳೆ ವರ್ಷ ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಪೊನ್ನಿಯನ್ ಸೆಲ್ವನ್ ಮೊದಲ ಭಾಗ ಬರೋಬ್ಬರಿ 400 ಕೋಟಿ ರೂ. ಗಳಿಸಿತ್ತು. ಈಗ ತೆರೆಗೆ ಬಂದಿರುವ ಸಿಕ್ವೇಲ್ ಕೂಡ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದು, ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ.