ಬೆಂಗಳೂರು: ಮಣಿರತ್ನಂ ಕನಸಿನ ಪ್ರಾಜೆಕ್ಟ್ ‘ಪೊನ್ನಿಯನ್ ಸೆಲ್ವನ್ 2′ (Ponniyin Selvan 2) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 28ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸುತ್ತಿದೆ. ಉತ್ತರ ಭಾರತದಲ್ಲಿ ಪ್ರಚಾರ ಮುಗಿಸಿರುವ ಚಿತ್ರತಂಡ ದಕ್ಷಿಣದಲ್ಲಿ ಭರದ ಪ್ರಚಾರ ಕಾರ್ಯ ನಡೆಸುತ್ತಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಮೋಷನ್ ಮಾಡಿರುವ ಪಿಎಸ್-2 ಬಳಗ ಬೆಂಗಳೂರಿನಲ್ಲಿ ಏಪ್ರಿಲ್ 22ರಂದು ಪ್ರಮೋಷನ್ ಕಹಳೆ ಮೊಳಗಿಸಿದೆ. ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ, ತ್ರಿಷಾ, ಕಾರ್ತಿ ಹಾಗೂ ಜಯಂರವಿ ಭಾಗಿಯಾಗಿದ್ದರು.
ಮೊದಲಿಗೆ ಕನ್ನಡಿಗರಿಗೆ ವಂದಿಸಿ ಮಾತಾನಾಡಿದ ಜಯಂರವಿ, “ಕೆಜಿಎಫ್ ಭಾರತದ ಭಾಷೆ ಗಡಿ ಮುರಿದಿದ್ದರೆ, ಕಾಂತಾರ ಧಾರ್ಮಿಕ ಗಡಿ ಮುರಿದಿದೆ. ಅದರಿಂದ ನಮಗೆ ಧಾರ್ಮಿಕ ನಂಬಿಕೆ ಹೆಚ್ಚಾಗಿದೆ. ಪ್ರಪಂಚದ ಸಿನಿಮಾ ಲೋಕದಲ್ಲಿ ಕನ್ನಡ ಇಂಡಸ್ಟ್ರಿ ಗುರುತರ ಪಾತ್ರ ವಹಿಸಿದೆ” ಎಂದರು.
ವಿಕ್ರಂ ಮಾತಾನಾಡಿ, “ನನಗೆ ಎಲ್ಲ ತರಹ ಪಾತ್ರಗಳನ್ನು ಮಾಡಲು ಇಷ್ಟ. ಆದಿತ್ಯ ಕರಿಕಾಳನ್ ಪಾತ್ರ ನನಗೆ ತೃಪ್ತಿ ಕೊಟ್ಟಿದೆ. ಪಿಎಸ್ 2 ಒಂದೊಳ್ಳೆ ಐತಿಹಾಸಿಕ ಸಿನಿಮಾ. ಪ್ರತಿಯೊಬ್ಬರು ನೋಡಲೇಬೇಕುʼʼ ಎಂದರು.
ಕಾರ್ತಿ, ಪಿಎಸ್ 1 ಮತ್ತು ಪಿಎಸ್ 2 ಎರಡು ಸಿನಿಮಾಗಳು ಒಟ್ಟಿಗೆ ಚಿತ್ರೀಕರಣವಾಗಿತ್ತು. ಮೊದಲ ಭಾಗಕ್ಕೆ ನೀವು ತೋರಿಸಿದ ಪ್ರೀತಿ ಪಿಎಸ್2 ಸೀಕ್ವೆಲ್ಮೇಲೆಯೂ ಇರಲಿ. ಹತ್ತನೇ ಶತಮಾನದ ರಾಜರು ಹಿಂದೆ ಹೇಗೆ ಬದುಕುತ್ತಿದ್ದರು ಎಂಬುವುದು ಗೊತ್ತಿಲ್ಲ. ಈ ಚಿತ್ರದಲ್ಲಿ ಅದನ್ನು ದೃಶ್ಯದ ಮೂಲಕ ಕಟ್ಟಿಕೊಡಲಾಗಿದೆ. ಪಿಎಸ್, ಪಿಎಸ್ 2 ಗೆ ತಳಹದಿಯಾಗಿದೆ ಎಂದರು.
ಕಲ್ಕಿ ಕೃಷ್ಣಮೂರ್ತಿ ಬರೆದಿರುವ ಕಾದಂಬರಿ ‘ಪೊನ್ನಿಯನ್ ಸೆಲ್ವನ್’ ಆಧಾರಿಸಿದ ಸಿನಿಮಾವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಚಾಪ್ಟರ್ ಮೆಗಾ ಹಿಟ್ ಆಗಿತ್ತು. ಬಾಕ್ಸಾಫೀಸ್ನಲ್ಲಿ 500 ಕೋಟಿ ರೂ. ಲೂಟಿ ಮಾಡಿತ್ತು. ಅದೇ ಸಕ್ಸಸ್ನಲ್ಲೇ ‘ಪೊನ್ನಿಯನ್ ಸೆಲ್ವನ್ 2’ ಸೀಕ್ವೆಲ್ ತೆರೆಗೆ ಬರುತ್ತಿದೆ. ಚೋಳ ಸಾಮ್ರಾಜ್ಯದ ದೃಶ್ಯ ವೈಭೋಗದ ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ಕ್ಕೆ ತೆರೆಕಾಣಲಿದೆ.
ಇದನ್ನೂ ಓದಿ: Ponniyin Selvan: ‘ಪೊನ್ನಿಯನ್ ಸೆಲ್ವನ್-2’ ಟ್ರೈಲರ್ ಔಟ್
ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ನಡಿ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. ‘ಪೊನ್ನಿಯನ್ ಸೆಲ್ವನ್ -2’ ಸಿನಿಮಾದಲ್ಲಿ ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಆಗಿದೆ. ಮಣಿರತ್ನಂ ನಿರ್ದೇಶನ ಹೈಲೈಟ್ ಆದರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್ ಇದೆ. ಇದೇ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರುತ್ತಿರುವ ಪೊನ್ನಿಯನ್ ಸೆಲ್ವನ್ 2 ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ಎಲ್ಲಾ ಭಾಷೆಯಲ್ಲಿಯೂ ಪ್ರೇಕ್ಷಕರ ಎದುರು ಅನಾವರಣ ಮಾಡುತ್ತಿದೆ.