Site icon Vistara News

Ponniyin Selvan: I | ಅಮೆಜಾನ್‌ ಪ್ರೈಮ್‌ಗೆ 125 ಕೋಟಿ ರೂ.ಗೆ ಮಾರಾಟವಾದ ಪೊನ್ನಿಯನ್ ಸೆಲ್ವನ್ ಸಿನಿಮಾ: ಸೆ.30ಕ್ಕೆ ತೆರೆಗೆ

Ponniyin Selvan I

ಬೆಂಗಳೂರು : ನಿರ್ದೇಶಕ ಮಣಿರತ್ನಂ ಅವರ ಬಹು ನಿರೀಕ್ಷೆಯ ಐತಿಹಾಸಿಕ ಚಿತ್ರ ಪೊನ್ನಿಯನ್ ಸೆಲ್ವನ್ ಭಾಗ-1 (Ponniyin Selvan: I) ಸಿನಿಮಾದ ಟ್ರೈಲರ್‌ ಬಿಡುಗಡೆ ಬೆನ್ನಲ್ಲೆ ಇದೀಗ ಹೊಸ ಸುದ್ದಿಯೊಂದನ್ನು ನೀಡಿದೆ. ವರದಿಗಳ ಪ್ರಕಾರ, ಪೊನ್ನಿಯನ್ ಸೆಲ್ವನ್ ಭಾಗ-1 ಹಾಗೂ ಭಾಗ-2 ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು ಅಮೆಜಾನ್ ಪ್ರೈಮ್ ವಿಡಿಯೊಗೆ ಬರೋಬ್ಬರಿ 125 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಎರಡನೇ ಭಾಗ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಡಿಜಿಟಲ್ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟ!
ವರದಿಗಳ ಪ್ರಕಾರ, ಪೊನ್ನಿಯನ್ ಸೆಲ್ವನ್ ಭಾಗ-1 ಹಾಗೂ ಭಾಗ-2 ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು 125 ಕೋಟಿ ರೂ.ಗೆ ಅಮೆಜಾನ್ ಪ್ರೈಮ್ ವಿಡಿಯೋಗೆ ಮಾರಾಟವಾಗಿದೆ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿರುವ ಚಿತ್ರಕ್ಕೆ ಇದು ನಿಜಕ್ಕೂ ದೊಡ್ಡ ಒಪ್ಪಂದವಾಗಿದೆ. ಅದೇ ರೀತಿ ಸ್ಯಾಟಲೈಟ್ ಹಕ್ಕುಗಳನ್ನು ಸನ್ ಟಿವಿಗೆ ಭಾರೀ ಬೆಲೆಗೆ ಮಾರಾಟ ಮಾಡಲಾಗಿದೆ. ಗ್ರ್ಯಾಂಡ್ ರಿಲೀಸ್‌ಗೂ ಒಂದು ವಾರ ಮೊದಲು ವಾಹಿನಿಯಲ್ಲಿ ಆಡಿಯೊ ಮತ್ತು ಟ್ರೈಲರ್ ಲಾಂಚ್ ಆಗಲಿದೆ.

ಮೆಚ್ಚುಗೆಗೆ ಪಾತ್ರವಾಗಿತ್ತು ಟ್ರೈಲರ್‌
ಇತ್ತೀಚೆಗಷ್ಟೇ ಸಿನಿಮಾದ ಟ್ರೈಲರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ ವ್ಯೂಸ್ ಪಡೆದುಕೊಂಡಿದ್ದು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಘಟಾನುಘಟಿ ಕಲಾವಿದರನ್ನು ಹೊಂದಿರುವ ಈ ಸಿನಿಮಾ ಚೋಳ ಸಾಮ್ರಾಜ್ಯದ ಕಥೆಯನ್ನು ಹೇಳಲಿದೆ. ನಿರ್ದೇಶಕ ಮಣಿರತ್ನಂ ಅದ್ಧೂರಿಯಾಗಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಎಂಬುದಕ್ಕೆ ಟ್ರೈಲರ್‌​ ಸಾಕ್ಷಿ ಒದಗಿಸುತ್ತಿದೆ. ಎಲ್ಲ ಕಲಾವಿದರ ಪಾತ್ರಗಳೂ ಟ್ರೈಲರ್‌ನಲ್ಲಿ ಹೈಲೈಟ್​ ಆಗಿದೆ.

ಇದನ್ನೂ ಓದಿ | Ponniyin Selvan: I | ಮಣಿರತ್ನಂ ಬಹು ನಿರೀಕ್ಷೆಯ ಚಿತ್ರ ಪೊನ್ನಿಯನ್ ಸೆಲ್ವನ್ ಭಾಗ 1 ಟ್ರೈಲರ್‌ ಔಟ್‌!

ದೊಡ್ಡ ತಾರಾ ಬಳಗವೇ ಇದೆ ಚಿತ್ರಕ್ಕೆ
ಪೊನ್ನಿಯನ್ ಸೆಲ್ವನ್ ಭಾಗ-1 ಸಿನಿಮಾ ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ತ್ರಿಶಾ, ಜಯಂ ರವಿ ಮತ್ತು ಕಾರ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ಸೋಭಿತಾ ಧೂಳಿಪಾಲ, ಐಶ್ವರ್ಯ ಲಕ್ಷ್ಮಿ, ಪ್ರಭು, ಜಯರಾಮ್ ಮತ್ತು ಲಾಲ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆದಿತ್ತು ಎಂದು ಚಿತ್ರತಂಡ ಹೇಳಿಕೊಂಡಿತ್ತು. ಸಿನಿಮಾ ಪ್ರೇಕ್ಷಕರ ಎದುರು ಬರಲು ಇನ್ನು ಕೆಲವೇ ದಿನಗಳು ಇವೆ. ಹೀಗಾಗಿ ಚಿತ್ರತಂಡ ಕೂಡ ಪ್ರತಿದಿನ ಒಬ್ಬೊಬ್ಬರ ಪಾತ್ರದ ಪರಿಚಯ ಮಾಡಿಸಿತ್ತು. ಹಾಗೂ ಟೀಸರ್‌ ಕೂಡ ಈ ಹಿಂದೆ ರಿಲೀಸ್‌ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿತ್ತು.

ಐತಿಹಾಸಿಕ ಕಥಾ ಹಂದರವುಳ್ಳ ಸಿನಿಮಾ
ಪೊನ್ನಿಯನ್ ಸೆಲ್ವನ್ ಕಲ್ಕಿ ಕೃಷ್ಣಮೂರ್ತಿ ಬರೆದ ಅದೇ ಹೆಸರಿನ ಸಾಹಿತ್ಯ ಕಾದಂಬರಿಯನ್ನು ಆಧರಿಸಿದೆ. ಐತಿಹಾಸಿಕ ಕಥಾ ಹಂದರವುಳ್ಳ ಈ ಸಿನಿಮಾ ಪ್ರಾಚೀನ ತಮಿಳು ರಾಜಮನೆತನ ಚೋಳರಾಜರ ಕುರಿತಾಗಿನ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ನಟಿ ಐಶ್ವರ್ಯ ರೈ ಪಳುವೂರಿನ ರಾಣಿ ನಂದಿನಿಯಾಗಿ ಕಣ್ಮನ ಸೆಳೆದಿದ್ದಾರೆ. ಇನ್ನು ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು. ಮಣಿರತ್ನಂ ಈಗ ಇದನ್ನು ನನಸಾಗಿಸಿದ್ದಾರೆ.

ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 30ರಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೈಕಾ ಪ್ರೊಡೆಕ್ಷನ್ಸ್​ ಅಡಿಯಲ್ಲಿ ಈ ಐತಿಹಾಸಿಕ ಸಿನಿಮಾ ಎರಡು ಭಾಗದಲ್ಲಿ ಬರಲಿದೆ.

ಇದನ್ನೂ ಓದಿ | Ponniyin Selvan: I | ಪೊನ್ನಿಯನ್ ಸೆಲ್ವನ್ ಭಾಗ 1ರ ಟ್ರೈಲರ್-ಆಡಿಯೋ ಲಾಂಚ್ : ಪೋಟೋಗಳು ಇಲ್ಲಿವೆ!

Exit mobile version