ಬೆಂಗಳೂರು : ನಿರ್ದೇಶಕ ಮಣಿರತ್ನಂ ಅವರ ಬಹು ನಿರೀಕ್ಷೆಯ ಐತಿಹಾಸಿಕ ಚಿತ್ರ ಪೊನ್ನಿಯನ್ ಸೆಲ್ವನ್ ಭಾಗ-1 (Ponniyin Selvan: I) ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವ್ಯೂಸ್ ಪಡೆದುಕೊಂಡಿದ್ದು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಘಟಾನುಘಟಿ ಕಲಾವಿದರನ್ನು ಹೊಂದಿರುವ ಈ ಸಿನಿಮಾ ಚೋಳ ಸಾಮ್ರಾಜ್ಯದ ಕಥೆಯನ್ನು ಹೇಳಲಿದೆ. ನಿರ್ದೇಶಕ ಮಣಿರತ್ನಂ ಅದ್ದೂರಿಯಾಗಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಎಂಬುದಕ್ಕೆ ಟ್ರೈಲರ್ ಸಾಕ್ಷಿ ಒದಗಿಸುತ್ತಿದೆ. ಎಲ್ಲ ಕಲಾವಿದರ ಪಾತ್ರಗಳೂ ಟ್ರೈಲರ್‌ನಲ್ಲಿ ಹೈಲೈಟ್ ಆಗಿದೆ.
ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗಿನಿಂದಲೇ ಪ್ರಚಾರವನ್ನು ಆರಂಭಿಸಿದೆ. ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆದಿತ್ತು ಎಂದು ಚಿತ್ರತಂಡ ಹೇಳಿಕೊಂಡಿತ್ತು. ಸಿನಿಮಾ ಪ್ರೇಕ್ಷಕರ ಎದುರು ಬರಲು ಇನ್ನು ಕೆಲವೇ ದಿನಗಳು ಇವೆ. ಹೀಗಾಗಿ ಚಿತ್ರತಂಡ ಕೂಡ ಪ್ರತಿದಿನ ಒಬ್ಬೊಬ್ಬರ ಪಾತ್ರದ ಪರಿಚಯ ಮಾಡಿಸಿತ್ತು. ಹಾಗೂ ಟೀಸರ್ ಕೂಡ ಈ ಹಿಂದೆ ರಿಲೀಸ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಸಿನಿಮಾ ಟ್ರೈಲರ್ ರಿಲೀಸ್ ಮಾಡಿದ್ದು, ಪ್ರತಿಯೊಂದು ಪಾತ್ರವನ್ನೂ ಬಹಳ ಅದ್ಭುತವಾಗಿ ಪರದೆ ಮೇಲೆ ತೋರಿಸಿದ್ದಾರೆ.
ಇದನ್ನೂ ಓದಿ | ಪೊನ್ನಿಯಿನ್ ಸೆಲ್ವನ್ ಟೀಸರ್ ಬಿಡುಗಡೆ ಬೆನ್ನಿಗೇ ಮಣಿರತ್ನಂಗೆ ಕೋವಿಡ್, ಆಸ್ಪತ್ರೆಗೆ ದಾಖಲು
ಪೊನ್ನಿಯನ್ ಸೆಲ್ವನ್ ಭಾಗ 1ರಲ್ಲಿ ಸೌತ್ ಸ್ಟಾರ್‌ಗಳು ಹಾಗೂ ಬಾಲಿವುಡ್ನ ದೊಡ್ಡ ತಾರಾಬಳಗವೇ ಇದೆ. ಅದರಲ್ಲೂ ಐಶ್ವರ್ಯಾ ಮತ್ತು ತ್ರಿಷಾ ರಾಣಿಯರ ಲುಕ್ನಲ್ಲಿ ಮಿಂಚಿದ್ದಾರೆ.
ಐತಿಹಾಸಿಕ ಕಥಾ ಹಂದರವುಳ್ಳ ಈ ಸಿನಿಮಾ ಪ್ರಾಚೀನ ತಮಿಳು ರಾಜಮನೆತನ ಚೋಳರಾಜರ ಕುರಿತಾಗಿನ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ನಟಿ ಐಶ್ವರ್ಯ ರೈ ಪಳುವೂರಿನ ರಾಣಿ ನಂದಿನಿಯಾಗಿ ಕಣ್ಮನ ಸೆಳೆದಿದ್ದಾರೆ. ಇನ್ನು ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು. ಮಣಿರತ್ನಂ ಈಗ ಇದನ್ನು ನನಸಾಗಿಸಿದ್ದಾರೆ.
ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 30ರಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೈಕಾ ಪ್ರೊಡೆಕ್ಷನ್ಸ್ ಅಡಿಯಲ್ಲಿ ಈ ಐತಿಹಾಸಿಕ ಸಿನಿಮಾ ಎರಡು ಭಾಗದಲ್ಲಿ ಬರಲಿದ್ದು, ಪೊನ್ನಿಯನ್ ಸೆಲ್ವನ್ ಭಾಗ 1 ಎಂಬ ಮಹಾಕಾವ್ಯದ ರೂಪಾಂತರದ ಮೊದಲ ಭಾಗದ ಚಿತ್ರೀಕರಣವನ್ನು ಮುಗಿಸಲಾಗಿದೆ. ಐಶ್ವರ್ಯಾ ರೈ ಬಚ್ಚನ್, ವಿಕ್ರಮ್, ತ್ರಿಷಾ, ಜಯಂ ರವಿ, ಕಾರ್ತಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ | ಪಳುವೂರಿನ ರಾಣಿ ನಂದಿನಿಯಾದ ನಟಿ ಐಶ್ವರ್ಯಾ ರೈ ಬಚ್ಚನ್, ಮಹಾರಾಣಿ ಲುಕ್ಗೆ ಅಭಿಮಾನಿಗಳು ಫಿದಾ