ಉಡುಪಿ: ಬಹುಭಾಷಾ ನಟಿ, ಕರಾವಳಿ ಮೂಲದ ಪೂಜಾ ಹೆಗ್ಡೆ (Pooja Hegde) ಇತ್ತೀಚೆಗೆ ಕಾರ್ಕಳಕ್ಕೆ ಭೇಟಿ ನೀಡಿದರು. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದ ಪೂಜಾ ಹೆಗ್ಡೆ ಅವರನ್ನು ದೇವಸ್ಥಾನದ ಸಮಿತಿಯ ಸದಸ್ಯರು ಗೌರವಿಸಿದರು. ಸನ್ಮಾನದ ವೇಳೆ ಅಭಿಮಾನಿಯೊರ್ವ ರಚಿಸಿದ ತಮ್ಮ ಭಾವಚಿತ್ರವನ್ನು ನಟಿ ಸ್ವೀಕರಿಸಿದರು. ಪ್ರತಿವರ್ಷ ದೈವಕೋಲ, ದೇವಸ್ಥಾನದ ಜಾತ್ರೆ, ಉತ್ಸವದಲ್ಲಿ ಪೂಜಾ ಹೆಗ್ಡೆ ಭಾಗಿಯಾಗುತ್ತಾರೆ.
ಈ ವೇಳೆ ಅವರು ಕಣಜೂರಿನ ತನ್ನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಭೂತಾರಾಧನೆ, ದೈವರಾಧನೆ ಕುರಿತೂ ಮಾತನಾಡಿದ್ದಾರೆ. ಮುಂಬೈಯಲ್ಲಿ ಹುಟ್ಟಿ ಬೆಳೆದ ಪೂಜಾ ಹೆಗ್ಡೆ ಪ್ರತಿವರ್ಷದ ರಜೆಯಲ್ಲಿ ತಮ್ಮ ಅಜ್ಜನ ಮನೆಯಾದ ಕಣಜೂರಿಗೆ ಭೇಟಿ ನೀಡುತ್ತಿದ್ದರಂತೆ. ʼʼಬೇಸಿಗೆ ರಜೆಯನ್ನು ಇಲ್ಲಿ ಬಹಳ ಖುಷಿಯಿಂದ ಕಳೆಯುತ್ತಿದ್ದೆವು. ನಮಗೆ ಊರು ಬಿಟ್ಟು ಹೋಗಲು ಮನಸ್ಸಾಗುತ್ತಲೇ ಇರಲಿಲ್ಲ” ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದೇವರ ಅನುಗ್ರಹ ಇಲ್ಲದೆ ಏನೂ ಸಾಧನೆ ಮಾಡಲಾಗದು. ಸಿನಿಮಾ ಕುಟುಂಬವಲ್ಲದ ಕಡೆಯಿಂದ ನಾನು ಈ ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಸಾಧನೆ ಮಾಡಲು ದೇವರ ಅನುಗ್ರಹವೇ ಕಾರಣʼʼ ಎಂದು ಹೇಳಿದ್ದಾರೆ.
2012ರಲ್ಲಿ ತಮಿಳಿನ ʼಮುಗಮೂಡಿʼ ಸಿನಿಮಾದ ಮೂಲ ಪೂಜಾ ಹೆಗ್ಡೆ ಸಿನಿ ರಂಗಕ್ಕೆ ಕಾಲಿಟ್ಟರು. ಜೀವ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗದಿದ್ದರೂ ಪೂಜಾ ಗಮನ ಸೆಳೆದಿದ್ದರು. 2014ರಲ್ಲಿ ʼಒಕ ಲೈಲ ಕೋಸಮ್ʼ ಮತ್ತು ʼಮುಕುಂದʼ ಚಿತ್ರಗಳ ಮೂಲಕ ಟಾಲಿವುಡ್ ಪ್ರವೇಶಿಸಿದರು. ಬಳಿಕ ನೇರ ಬಾಲಿವುಡ್ ತೆರಳಿದರು. 2016ರಲ್ಲಿ ರಿಲೀಸ್ ಆದ ʼಮೊಹೆಂಜದಾರೊ’ ಸಿನಿಮಾದಲ್ಲಿ ಹೃತಿಕ್ ರೋಷನ್ಗೆ ನಾಯಕಿಯಾಗಿ ಗಮನ ಸೆಳೆದರು.
ಹೀಗೆ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ಪೂಜಾ ಹೆಗ್ಡೆ ಟಾಪ್ ನಾಯಕಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಟಾಲಿವುಡ್, ಬಾಲಿವುಡ್ನ ಟಾಪ್ ನಾಯಕರ ಜತೆಗೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಶಾಹಿದ್ ಕಪೂರ್ ಜತೆಗೆ ‘ದೇವ’ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಶನ್ ಆಂಡ್ರ್ಯೂಸ್ ನಿರ್ದೇಶನದ ಈ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ ಎನ್ನಲಾಗಿದೆ. ಜತೆಗೆ ಅಹನ್ ಶೆಟ್ಟಿ ಅಭಿನಯದ ಮುಂದಿನ ಸಿನಿಮಾದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Pooja Hegde: 45 ಕೋಟಿ ರೂ. ಬೆಲೆಯ ಹೊಸ ಮನೆ ಖರೀದಿಸಿದ ಪೂಜಾ ಹೆಗ್ಡೆ
ಕೆಲವು ದಿನಗಳ ಹಿಂದೆಯಷ್ಟೇ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿತ್ತು. ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂತಲೂ ಸುದ್ದಿಯಾಗಿತ್ತು. ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿರಲಿಲ್ಲ. ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ತೆಲುಗು ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿದ್ದವು. ಸದ್ಯ ಈ ವಿಚಾರ ತಣ್ಣಗಾಗಿದೆ.