ತಿರುವನಂತಪುರಂ: ೧೯೯೦ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತು ಚಿತ್ರಿಸಿರುವ, ೨೦೨೨ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ವಿರುದ್ಧ ನಟ ಪ್ರಕಾಶ್ ರಾಜ್ (Prakash Raj) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಅಸಂಬದ್ಧ, ಅವಿವೇಕದ (Nonsense) ಸಿನಿಮಾ ಎಂದು ಹೇಳಿಕೆ ನೀಡಿದ್ದಾರೆ. ಇನ್ನು, ಪ್ರಕಾಶ್ ರಾಜ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕೇರಳದಲ್ಲಿ ಇತ್ತೀಚೆಗೆ ನಡೆದ ಮಾತೃಭೂಮಿ ಇಂಟರ್‌ನ್ಯಾಷನಲ್ ಫೆಸ್ಟಿವಲ್ ಆಫ್ ಲೆಟರ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಶ್ಮೀರ್ ಫೈಲ್ಸ್ ಸಿನಿಮಾ ವಿರುದ್ಧ ಹರಿಹಾಯ್ದರು. “ದಿ ಕಾಶ್ಮೀರ್ ಫೈಲ್ಸ್ ಪ್ರಚಾರಕ್ಕಾಗಿ ನಿರ್ಮಿಸಿದ ಚಿತ್ರವಾಗಿದೆ. ಒಂದು ಸೀಮಿತ ಉದ್ದೇಶ ಇಟ್ಟುಕೊಂಡು ಇದನ್ನು ಚಿತ್ರಸಲಾಗಿದ್ದು, ಸಿನಿಮಾವೇ ಒಂದು ಅಸಂಬದ್ಧ. ಅದರ ನಿರ್ಮಾಪಕರಿಗೂ ನಾಚಿಕೆಯಾಗಬೇಕು” ಎಂದಿದ್ದಾರೆ.
”’ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಪ್ರೊಪಗಂಡ ಸಿನಿಮಾ ತೆಗೆದಿದ್ದಾರೆ. ಇಂತಹ ಸಿನಿಮಾಗಳಿಗಾಗಿ ೨ ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಆದರೆ, ಯಾವಾಗಲೂ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಅಸಂಬದ್ಧ ಸಿನಿಮಾ ತೆಗೆದರೂ, ನಿರ್ದೇಶಕರು ನನಗೇಕೆ ಆಸ್ಕರ್ ಪ್ರಶಸ್ತಿ ಲಭಿಸಿಲ್ಲ ಎಂಬುದಾಗಿ ಪ್ರಶ್ನಿಸುತ್ತಾರೆ. ಅವರಿಗೆ ಆಸ್ಕರ್ ಅಲ್ಲ, ಭಾಸ್ಕರ್ ಪ್ರಶಸ್ತಿಯೂ ಸಿಗುವುದಿಲ್ಲ” ಎಂದು ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾಗಿ, ಅದು ಜನರ ಮೆಚ್ಚುಗೆ ಗಳಿಸಿದಾಗಲೂ ಪ್ರಕಾಶ್ ರಾಜ್ ಅವರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಮತ್ತೆ ಸಿನಿಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಜ್ಯೂರಿ ಕೂಡ ಇದರ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದನ್ನು ನಟ ಉಲ್ಲೇಖಿಸಿದ್ದಾರೆ. ಆದರೆ, ಪ್ರಕಾಶ್ ರಾಜ್ ವಿರುದ್ಧ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೌರಿಯನ್ನು ಕೊಲ್ಲಿಸಿದವರು ದೇಶ ಆಳುತ್ತಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಆಕ್ರೋಶ