ಲಾಸ್ ಏಂಜಲೀಸ್ : ಬಾಲಿವುಡ್‌ನ ಹೆಸರಾಂತ ನಟಿ ಪ್ರೀತಿ ಜಿಂಟಾ (Preity Zinta) ಅವರು ಸದ್ಯ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ವಾಸವಿದ್ದಾರೆ. ಅಲ್ಲಿರುವ ನಟಿ ತಮ್ಮ ಅವಳಿ ಮಕ್ಕಳಾದ ಜೈ ಮತ್ತು ಗಿಯಾಗೆ ಹಿಂದೂ ಸಂಪ್ರದಾಯದ ಪ್ರಕಾರ ಕೇಶ ಮುಂಡನ ಮಾಡಿಸಿದ್ದಾರೆ. ಅದರ ಫೋಟೋಗಳನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.
ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ನಂತರ ಅವರು ಮನೆಯಲ್ಲಿ ಆಟವಾಡುವಾಗ ಹಿಂದಿನಿಂದ ಫೋಟೋ ಕ್ಲಿಕ್ಕಿಸಿಕೊಂಡಿರುವ ನಟಿ ಆ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ “ನನ್ನ ಮಕ್ಕಳಾದ ಜೈ ಮತ್ತು ಗಿಯಾರ ಕೇಶ ಮುಂಡನ ಕಾರ್ಯಕ್ರಮ ಕಳೆದ ವಾರಾಂತ್ಯದಲ್ಲಿ ನಡೆಯಿತು. ಹಿಂದುಗಳಿಗೆ ಮಕ್ಕಳ ಕೂದಲನ್ನು ಮೊದಲ ಬಾರಿಗೆ ಕ್ಷೌರ ಮಾಡುವುದು ಅವರ ಹಿಂದಿನ ಜನ್ಮಗಳ ಸ್ಮರಣೆಯಿಂದ ಶುದ್ಧೀಕರಣ ಮತ್ತು ಹಿಂದಿನ ಜನ್ಮದಿಂದ ಪಡೆದ ಸ್ವಾತಂತ್ರ್ಯದ ಸಂಕೇತವೆಂದು ಪರಿಗಣಿಸಲಾಗಿದೆ” ಎಂದು ಪ್ರೀತಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video: ಮೆಟ್ರೋದಲ್ಲಿ ವಿಚಿತ್ರವಾಗಿ ಡಾನ್ಸ್ ಮಾಡಿದ ಯುವತಿ; ನೋಡದಿರೋದೇ ವಾಸಿ ಎಂದ ಜನ
ನಟಿಯ ಈ ಪೋಸ್ಟ್ ಅನ್ನು ನೋಡಿರುವ ಸಾಕಷ್ಟು ಮಂದಿ ಅದಕ್ಕೆ ಲೈಕ್ ಮತ್ತು ಕಮೆಂಟ್‌ಗಳನ್ನು ಮಾಡಿದ್ದಾರೆ. ನಟಿಯೊಂದಿಗೆ ಸೋಲ್ಡ್ಜರ್ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದ ಬಾಬಿ ಡಿಯೋಲ್ ಅವರು ಇಮೋಜಿಗಳೊಂದಿಗೆ ಕಮೆಂಟ್ ಮಾಡಿದ್ದಾರೆ. ಅವರಲ್ಲದೆ ಸಾಕಷ್ಟು ಅಭಿಮಾನಿಗಳು ನಟಿಯ ಪೋಸ್ಟ್‌ಗೆ ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. “ಮಕ್ಕಳು ಎಷ್ಟು ಬೇಗ ದೊಡ್ಡವರಾಗಿಬಿಡುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ”, “ಹಿಂದೂ ಧರ್ಮದ ಸಂಸ್ಕೃತಿಯನ್ನು ಮರೆಯದಿರುವ ನೀವು ಎಷ್ಟೊಂದು ಒಳ್ಳೆಯವರು” ಎನ್ನುವಂತಹ ಕಮೆಂಟ್‌ಗಳು ಬಂದಿವೆ.
ಪ್ರೀತಿ ಜಿಂಟಾ ಅವರು ಪತಿ ಜೀನ್ ಗುಡ್ನಫ್ ಅವರೊಂದಿಗೆ 2021ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾದರು. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. “ಎಲ್ಲರಿಗೂ ನಮಸ್ಕಾರ. ಇಂದು ನಾನು ನಿಮ್ಮೆಲ್ಲರೊಂದಿಗೆ ಅದ್ಭುತ ಸುದ್ದಿಯೊಂದನ್ನು ಹಂಚಿಕೊಳ್ಳುತ್ತೇನೆ. ನಾನು ಮತ್ತು ಜೀನ್ ಇಂದು ನಮ್ಮ ಕುಟುಂಬಕ್ಕೆ ಜೈ ಜಿಂಟಾ ಗುಡ್ನಫ್ ಮತ್ತು ಗಿಯಾ ಜಿಂಟಾ ಗುಡ್ನಫ್‌ರನ್ನು ಸ್ವಾಗತಿಸಿದ್ದೇವೆ” ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: Viral News: ಸಾಯುವ ಮುನ್ನ 33 ವರ್ಷದ ಗರ್ಲ್‌ಫ್ರೆಂಡ್‌ಗೆ 900 ಕೋಟಿ ರೂ. ಆಸ್ತಿ ಬರೆದಿಟ್ಟ ಮಾಜಿ ಪ್ರಧಾನಿ!
ಪ್ರೀತಿ ಜಿಂಟಾ ಅವರು ಅಮೆರಿಕ ಮತ್ತು ಭಾರತದಲ್ಲಿ ನಿವಾಸ ಹೊಂದಿದ್ದು, ಎರಡೂ ಮನೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ವರ್ಷ ಬೇಸಿಗೆಯಲ್ಲಿ ಅವರು ಭಾರತದಲ್ಲಿದ್ದರು. ಐಪಿಎಲ್ ಪಂದ್ಯಾವಳಿಯಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ನಿಂತಿದ್ದರು.