ಸಾಂಗತ್ಯ. ಬೆಂಗಳೂರು
ಅಪ್ಪು ನೀನು ನಮ್ಮ ಕಣ್ಣೆದುರಿಗೆ ಇಲ್ಲ ಅನ್ನೋದನ್ನ ಬಿಟ್ಟರೆ ಮಿಕ್ಕಿದ್ದೆಲ್ಲವೂ ಹಾಗೇ ಇದೆ. ನಿನ್ನ ಮಾನವ ಪ್ರೇಮದ ನಗುವಿನೊಂದಿಗೆ. ಅಕ್ಟೋಬರ್ 29 2021 ಅವತ್ತು ವಿಧಿ ದೊಡ್ಮನೆ ಹುಡುಗನನ್ನ ಮೆಚ್ಚಿ ಪ್ರೀತಿಸುವ ಗೌರವಿಸುವ ಅಸಂಖ್ಯಾತ ಅಭಿಮಾನಿಗಳಿಗೆ ನೋವಿನ ಪೆಟ್ಟು ನೀಡಿತು. ಅವತ್ತು ಒಂದು ದಿನ ಸಾವು ತಡ ಮಾಡಿ ಸುಮ್ಮನೆ ವಾಪಸ್ ಹೋಗಿದ್ರೆ ಅದೆಷ್ಟು ವಾತ್ಸಲ್ಯ ಹೃದಯದ ಕನ್ನಡಿಗರು ದೇವರಿಗೆ ತುಪ್ಪದ ದೀಪ ಬೆಳಗುತ್ತಿದ್ದರು ಇನ್ನೊಂದಿಷ್ಟು ನೊಂದ ಅಸಹಾಯಕ ಜೀವಗಳಿಗೆ ನಿನ್ನ ಸಹಾಯ ಪ್ರೀತಿ ವಾತ್ಸಲ್ಯ ಚಂದದ ಬದುಕು ಕಟ್ಟಿಕೊಳ್ಳಲಿಕ್ಕೆ ಇನ್ನೊಂದಿಷ್ಟು ನಿನ್ನಿಂದ
ನೆರವು ಸಿಗುತ್ತಿತ್ತು. ಈವಾಗ ನಿನ್ನನ್ನು ನೆನಪಿಸಿಕೊಳ್ಳುತ್ತ ಮನದೊಳಗೆ ದುಃಖಿಸುವವರು ಇದ್ದಾರೆ.
ನೀನಿಲ್ಲದ ಜಗತ್ತಲ್ಲಿ ನಿನ್ನ ಸ್ಮರಿಸುತ್ತಾ ಈಗಲೂ ಎಷ್ಟು ಊರು ಬೀದಿ ಮನೆಯ ದೇವರ ಕೋಣೆಯಲ್ಲಿ ನಿನಗೆ ದೀಪ ಬೆಳಗಿಸುತ್ತಾರೆ. ಭೇದ ಭಾವವಿಲ್ಲದೆ ಸಾರ್ಥಕವಾಗಿ ಬದುಕಿದ ನಿನ್ನ ವ್ಯಕ್ತಿತ್ವ ನಿಜಕ್ಕೂ ಭವ್ಯವಾದದ್ದು. ಅಷ್ಟೇ ಅಲ್ಲ ನಮಗೂ ಸಹ ಬದುಕಿದರೆ ಹೀಗೆ ಬದುಕಿ ಎನ್ನುವುದನ್ನು ತೋರಿಸಿಕೊಟ್ಟ ಪುಣ್ಯಾತ್ಮ ನೀನು.
ನಿನ್ನ ನಟನೆ ಪ್ರೀತಿ ನಗು ಪರೋಪಕಾರದ ಗುಣ ಇವುಗಳನ್ನೆಲ್ಲ ಕಂಡು ಅನುಸರಿಸುವ ನಾವುಗಳು ಧನ್ಯರು. ದೊಡ್ಮನೆ ಹುಡುಗ ನೀನು. ನಿಜಕ್ಕೂ ನಮ್ಮೆಲ್ಲರಿಗೂ ಅನುಕರಣೀಯ. ನಮ್ಮೆಲ್ಲರ ಎದೆಯಲ್ಲಿನ ಸಮೃದ್ಧವಾದ ಫಸಲಿಗೆ ವಿಧಿಯು ಇದ್ದಕ್ಕಿದ್ದಂತೆ ಬೆಂಕಿ ಇಟ್ಟಿತು. ನಲವತ್ತಾರು ವರ್ಷ ಬದುಕಿದ ಯುವರತ್ನ ಅದೆಷ್ಟೋ ತಾಯಂದಿರಿಗೆ, ಯುವಕರಿಗೆ ಪ್ರೇರಣೆ. ಹುಡುಗಿಯರಿಗಂತೂ ತುಂಬಾ ಆತ್ಮೀಯ. ಪ್ರೇಮಿಗಳಿಗೆ ಆತ್ಮ ಬಂಧು.
ದೇವರಾಣೆ ಅಪ್ಪು ನಿನ್ನ ಅಗಲಿಕೆಯು ನಮಗೆಲ್ಲ ಅತ್ಯಂತ ಯಾತನೆ. ಹಾಗೆಯೇ ನೋಡಿದಾಗ ಎಲ್ಲವೂ ಸರಿಯಾಗಿತ್ತು, ಚಂದವಾಗಿತ್ತು. ಥೇಟ್ ನಿನ್ನ ನಗು ಸರಳತೆಯಂತೆ. ಆದರೆ ವಿಧಿಯ ಲೆಕ್ಕಾಚಾರ ಬೇರೆ ಏನು ಇತ್ತು. ತೆರೆಮರೆಯಲ್ಲಿ ಹೊಂಚು ಹಾಕುತ್ತಿದ್ದ ಸಾವು ಮುಲಾಜಿಲ್ಲದೆ ನಿನ್ನನ್ನ ಎತ್ತಿಕೊಂಡು ಹೋಯಿತು. ಆಕಾಶಕ್ಕೆ. ಇದ್ದಕ್ಕಿದ್ದಂತೆ ನದಿಯೊಂದು ಬತ್ತಿ ಹೋದ ಅನುಭವವಾಗುತ್ತಿದೆ. ನಮಗೆಲ್ಲ. ಕತ್ತು ಮೇಲೆತ್ತಿ ಆಕಾಶ ನೋಡಿದರೆ ಚಂದಿರನ ಪಕ್ಕದಲ್ಲಿನ ದೊಡ್ಡ ನಕ್ಷತ್ರವಾಗಿ ಕಾಣುವ ದೇವತಾ ಮನುಷ್ಯನ ಮಗನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿವೆ.
ಅವತ್ತು ಅಕ್ಟೋಬರ್ 29 2021 ಸಂಜೆ ನಾಲ್ಕು ಗಂಟೆ. ಐದು ವರ್ಷಗಳ ನಂತರ ಸೈನ್ಯದಿಂದ ಹಿಂದಿರುಗಿ ಬಂದು ನನ್ನ ಪ್ರೀತಿ ಹುಡುಗಿ ಜೊತೆ ಖುಷಿಯಿಂದ ಮಾತಾಡುವಾಗ ಅವಳ ವಾಟ್ಸಪ್ ಮೆಸೇಜ್ ಬಂತು ತಕ್ಷಣವೇ ಅವಳ ಮುಖ ಸಪ್ಪೆ ಆಯ್ತು ಕಂಗಳ ನೀರು ಕೆನ್ನೆ ಮೇಲೆ ಜಾರಿದವು. ಮೆಸೇಜ್ ನೋಡಿ ನಾನು ಅವಳು ಆಕಾಶದಿಟ್ಟಿಸಿದವು ರೋಧಿಸುತ್ತಾ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ನಮ್ಮಿಬ್ಬರಲ್ಲಿ ದುಃಖ ಹೆಪ್ಪುಗಟ್ಟಿ ಪ್ರೇಮವೇ ಸಂಕಟ ಪಡುತ್ತಿತ್ತು.