Site icon Vistara News

Actor Ambareesh: ರೇಸ್‌ಕೋರ್ಸ್‌ ರಸ್ತೆ ಇನ್ಮುಂದೆ ರೆಬೆಲ್‌ಸ್ಟಾರ್‌ ಅಂಬರೀಶ್‌ ರೋಡ್‌; ನಾಮಕರಣ ಮಾಡಿದ ಸಿಎಂ

Race Course Road Naming Actor Ambareesh

ಬೆಂಗಳೂರು: ರೇಸ್‌ಕೋರ್ಸ್‌ ರಸ್ತೆಗೆ ರೆಬೆಲ್‌ ಸ್ಟಾರ್‌ ಅಂಬರೀಶ್‌ (Actor Ambareesh) ಅವರ ಹೆಸರನ್ನು ಅಧಿಕೃತವಾಗಿ ನಾಮಕರಣ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ರೇಸ್‌ಕೋರ್ಸ್ ರಸ್ತೆಯನ್ನು ಉದ್ಘಾಟನೆ ಮಾಡಿದರು. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರೇಸ್‌ಕೋರ್ಸ್ ರಸ್ತೆಗೆ ನೂತನ ಹೆಸರನ್ನು ಇಡಲಾಗಿದ್ದು, ರೇಸ್‌ಕೋರ್ಸ್ ಇನ್ನು ಮುಂದೆ ಡಾ. ಎಂ.ಎಚ್. ಅಂಬರೀಶ್‌ ರಸ್ತೆ ಎಂದು ಕರೆಯಲ್ಪಡುತ್ತದೆ.

ಬೆಂಗಳೂರಿನ ಜಂಕ್ಷನ್‌ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ‘ಸುರಕ್ಷ 75 ಮಿಷನ್ 2023’ ಅನ್ನು ಲೋಕಾರ್ಪಣೆಗೊಳಿಸಿದ ಸಿಎಂ ಇದೇ ವೇಳೆ ರೇಸ್‌ಕೋರ್ಸ್‌ ರಸ್ತೆಗೆ ಅಂಬರೀಶ್‌ ಹೆಸರನ್ನು ನಾಮಕರಣ ಮಾಡಿದರು.

ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ ʻʻಅಂಬರೀಶ್‌ ಅವರು ರೇಸ್‌ಕೋರ್ಸ್‌ನಲ್ಲಿ ಬಹಳ ಸಾರಿ ಓಡಾಡಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಅವರ ಹೆಸರನ್ನು ಇಟ್ಟಿದ್ದೇವೆ. ಅಂಬರೀಶ್‌ ಅವರದ್ದು ಅದ್ಭುತವಾದ ಅಭಿನಯ. ಅಂಬರೀಶ್‌ ಅವರಿಗೆ ರಿಯಲ್ ಲೈಫ್ ಹಾಗೂ ರೀಲ್ ಲೈಫ್ ವ್ಯತ್ಯಾಸ ಇಲ್ಲ. ನೇರವಾಗಿ ಮಾತನಾಡುವ ಸ್ವಭಾವ ಅಂಬಿ ಅವರದ್ದು. ಟೆನ್ನಿಸ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು, ಅಲ್ಲದೆ, ಕಾವೇರಿ ವಿಚಾರಕ್ಕೆ ಬಂದಾಗ ಅವರು ಗುಡುಗಿದ್ದರು. ಅಧಿಕಾರದ ಹಿಂದೆ ಅವರು ಹೋದವರಲ್ಲ. ಅವರ ಹಿಂದೆ ಅಧಿಕಾರ ಬಂದಿದೆ” ಎಂದು ಹೇಳಿದರು.

ʻʻಕಾವೇರಿ ವಿಚಾರ ಬಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಅಂಬರೀಶ್. ಅಧಿಕಾರ ಅವನ್ನು ಹುಡುಕಿಕೊಂಡು ಬರುತ್ತಿತ್ತು. ನನಗೆ ಇವತ್ತು ಬಹಳ ಸಂತೋಷವಾಗಿದೆ. ಅವರು ನನ್ನ ಮಿತ್ರರು. ಹಲವಾರು ಬಾರಿ ಭೇಟಿಯಾಗಬೇಕು ಅಂದಾಗ ಅಲ್ಲೇ ರೇಸ್‌ಕೋರ್ಸ್‌ನಲ್ಲಿ ಇರುತ್ತೇನೆ ಬಾರಯ್ಯ ಎನ್ನುತ್ತಿದ್ದರು. ಅವರ ಹೆಸರನ್ನು ಬಿಟ್ಟು ಬೇರೆ ಯಾರ ಹೆಸರು ಕೂಡ ಈ ರಸ್ತೆಗೆ ಸೂಕ್ತವಲ್ಲ. ಅವರ ಕುಟುಂಸ್ಥರು ಒಪ್ಪಿ ಬಂದಿದ್ದಾರೆ ಧನ್ಯವಾದಗಳು. ಅವರ ಸ್ಮಾರಕ ಕೂಡ ಉದ್ಘಾಟನೆ ಮಾಡುತ್ತೇವೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿʼʼ ಎಂದರು.

ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‌ಕುಮಾರ್‌, ಸುಮಲತಾ ಅಂಬರೀಶ್‌, ಅಭಿಷೇಕ್ ಅಂಬರೀಶ್‌, ಕಂದಾಯ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್‌, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ: Actor Ambareesh: ಇಂದು ರೆಬೆಲ್ ಸ್ಟಾರ್‌ ಅಂಬರೀಶ್‌ ಸ್ಮಾರಕ ಲೋಕಾರ್ಪಣೆ; ವಿಶೇಷತೆಗಳೇನು?

ಏನಿದು ಸುರಕ್ಷ 75 ಮಿಷನ್ 2023?

ಬೆಂಗಳೂರಿನ 75 ನಿರ್ಣಾಯಕ ಜಂಕ್ಷನ್‌ಗಳನ್ನು ಮರು ವಿನ್ಯಾಸಗೊಳಿಸುವ ಮತ್ತು ಎಲ್ಲ ರಸ್ತೆ ಬಳಕೆದಾರರಿಗೆ, ವಿಶೇಷವಾಗಿ ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳಿಗೆ ಸೇರಿದಂತೆ ಯಾರು ರಸ್ತೆ ಅಪಘಾತಗಳಿಂದ ಗಾಯಗಳು ಮತ್ತು ಸಾವಿಗೆ ಹೆಚ್ಚು ಗುರಿಯಾಗುತ್ತಾರೋ ಅಂತಹ ಜಂಕ್ಷನ್‌ಗಳನ್ನು ಸುರಕ್ಷಿತವಾಗಿರಿಸುವ ಗುರಿಯನ್ನು ಇಟ್ಟುಕೊಂಡು ‘ಸುರಕ್ಷ 75 ಮಿಷನ್ 2023’ ಅನ್ನು ಲೋಕಾರ್ಪಣೆಗೊಳಿಸಲಾಗಿದೆ. ಇದಕ್ಕೆ ಸೋಮವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಟ್ರಾಫಿಕ್ ಪೋಲೀಸ್ (BTP), ವಿಶ್ವ ಸಂಪನ್ಮೂಲ ಸಂಸ್ಥೆ ಭಾರತ (WRI) ಸಹಯೋಗದೊಂದಿಗೆ, Bloomberg Philanthropies ಜಾಗತಿಕ ರಸ್ತೆ ಸುರಕ್ಷತೆಗಾಗಿ ಲೋಕೋಪಕಾರಿ ಉಪಕ್ರಮ (BIGRS) ಅಡಿಯಲ್ಲಿ ಚಾಲನೆ ನೀಡಲಾಗಿದೆ.

Exit mobile version