ಬೆಂಗಳೂರು: ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (raj b shetty) ಸದ್ಯ ಟೋಬಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಆಗಸ್ಟ್ 25ರಂದು ಈ ಚಿತ್ರ ರಿಲೀಸ್ ಆಗಲಿದೆ.ಈ ಸಿನಿಮಾದ ಪ್ರಚಾರಕ್ಕಾಗಿ ಅವರು ಜೀ ಕನ್ನಡ ವಾಹಿನಿಯ ‘ಭರ್ಜರಿ ಬ್ಯಾಚುಲರ್ಸ್’ (Bharjari Bachelors) ರಿಯಾಲಿಟಿ ಶೋ ವೇದಿಕೆ ಏರಿದ್ದರು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಬ್ರೇಕ್‌ಅಪ್ ಹಾಗೂ ಪ್ರೀತಿ ವಿಚಾರವಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಜೀ ವಾಹಿನಿ ಸಣ್ಣ ವಿಡಿಯೊ ಕ್ಲಿಪ್ ಹಂಚಿಕೊಂಡಿದೆ.
ಲವ್ ಮ್ಯಾರೇಜ್ ಇಷ್ಟ
ಶೋ ವೇಳೆ ಅನೇಕರು ರಾಜ್‌ಬಿ ಶೆಟ್ಟಿ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಿಮಗೆ ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಇಷ್ಟನಾ ಎಂಬ ಪ್ರಶ್ನೆಗೆ ರಾಜ್ ಅವರು ʻʻನನಗೆ ಲವ್ ಮ್ಯಾರೇಜ್ ಇಷ್ಟ. ಇದರಲ್ಲಿ ತಪ್ಪು ಮಾಡುವುದಕ್ಕೆ ಸಾಕಷ್ಟು ಅವಕಾಶ ಇದೆ. ಮದುವೆ ಬಳಿಕ ಅವರಿಗೋಸ್ಕರ ನಾವೊಂದು ಹೆಜ್ಜೆ ಇಡುತ್ತೇವೆ. ನಮಗೋಸ್ಕರ ಅವರೊಂದು ಹೆಜ್ಜೆ ಇಡುತ್ತಾರೆ. ಆಗ ಇಬ್ಬರು ಒಟ್ಟಿಗೆ ಸಾಗಬಹುದು ಎನ್ನುವುದು ಗೊತ್ತಾಗುತ್ತದೆ. ಅವರೊಂದು ಹೆಜ್ಜೆ ಇಡುತ್ತಾರೆ, ನಾನು ಬೇರೆ ಕಡೆ ಹೆಜ್ಜೆ ಇಡುತ್ತೇವೆ. ಆಗ ಇಬ್ಬರೂ ಬೇರೆ ಕಡೆ ಹೋಗಬೇಕು ಎನ್ನುವುದು ಗೊತ್ತಾಗುತ್ತದೆ’ ಎಂದಿದ್ದಾರೆ.
ತಾಯಿ ಪ್ರೀತಿಗೂ ಹೆಂಡತಿ ಪ್ರೀತಿಗೂ ಏನು ವ್ಯತ್ಯಾಸ?
ತಾಯಿ ಪ್ರೀತಿಗೂ ಹೆಂಡತಿ ಪ್ರೀತಿಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ರಾಜ್ ಉತ್ತರ ನೀಡಿ ʻʻಆ ಹೋಲಿಕೆಯೇ ತಪ್ಪು. ಉದಾಹರಣೆಗೆ ನನ್ನ ಗರ್ಲ್ ಫ್ರೆಂಡ್ ಒಂದು ಮಗುವಿಗೆ ತಾಯಿ ಆದಾಗ , ಅವಳಿಗೆ ಯಾವ ಪ್ರೀತಿ ದೊಡ್ಡದು,. ಅವಳು ತಾಯಿಯೂ ಹೌದು. ತಾಯಿ ಆದಾಗ ಒಂದು ನದಿಯಾಗಿ ಹರಿಬಹುದು. ಅದೇ ಗರ್ಲ್ ಫ್ರೆಂಡ್ ಆದಗ ಮಳೆ ಆಗಿ ಹರಿಬಹುದು. ಮಳೆ ದೊಡ್ಡದಾ, ನದಿ ದೊಡ್ಡದಾ ಅಂದರೆ? ಮಳೆ ಇಂದ ನದಿ, ನದಿ ಇಂದ ಮಳೆ ಅದನ್ನು ಹೇಳುವುದು ಕಷ್ಟʼʼಎಂದರು.
ರಾಜ್ ಬಿ ಶೆಟ್ಟಿ ಹೇಳಿದ್ದೇನು?
ಕಂಡೀಷನ್ ಪ್ರೀತೀಲಿ ಬರಲ್ಲ!
ಮದುವೆ ಆಗೋ ಹುಡುಗಿ ನೀವು ಬದಲಾಗಬೇಕು ಎಂದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ʻʻ‘ನಾನು ಇರುವುದು ಇಷ್ಟೇ. ನಾನು ಇರುವುದೇ ಒಂದು ಲೋಟ. ಆ ನೀರನ್ನು ಚೊಂಬಿನಲ್ಲಿ ಹಾಕಿ ತುಂಬಿಸ್ತೀನಿ ಎಂದರೆ ಸಾಧ್ಯವಿಲ್ಲ. ನಾನು ಇರುವ ಹಾಗೆ ಇರೋಕೆ ಬಿಡು. ನೀನು ಹೇಗಿದ್ದರೂ ನಾನು ಅದನ್ನು ಪ್ರಶ್ನೆ ಮಾಡಲ್ಲ. ಇಬ್ಬರೂ ಬೆಳೆಯುತ್ತಾ ಹೋಗಬೇಕು. ಪ್ರಬುದ್ಧತೆ ಇರುವ ವ್ಯಕ್ತಿ ಕಂಡೀಷನ್ ಹಾಕಲ್ಲ’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.
ಇದನ್ನೂ ಓದಿ: Raj B Shetty: 3.73 ಲಕ್ಷ ಕತೆಗಳ ನಡುವೆ ಟೋಬಿ ಗೆದ್ದೇ ಬಿಟ್ಟಿತ್ತು ಎಂದ ದಯಾನಂದ್; ತಮನ್ನಾ ಇಷ್ಟ ಪಟ್ಟಿದ್ಯಾಕೆ?
ಆರು ವರ್ಷ ಪ್ರೀತಿ ಮಾಡಿದ್ದೆ!
‘ಪದವಿ ಶಿಕ್ಷಣ ಪಡೆಯುವಾಗ ಒಂದು ಹುಡುಗಿ ಪ್ರೀತಿ ಮಾಡಿದ್ಲು. ಆರು ವರ್ಷ ಆ ಪ್ರೀತಿ ಇತ್ತು. ರಿಲೇಷನ್ ಸೆಟ್ ಆಗುವಾಗಲೇ ನಾನು ಅವಳಿಗೆ ಹೇಳಿದ್ದೆ, ‘ನೀನು ಬಿಟ್ಟು ಹೋಗುತ್ತೀಯಾ ಎಂದರೆ ನಾನು ಕಾರಣ ಕೇಳುವುದಿಲ್ಲ’ ಎಂದು. ಹಾಗೆಯೇ ಆಯಿತು. ಆರು ವರ್ಷದ ಬಳಿಕ ಬ್ರೇಕಪ್ ಆಯಿತು. ಅವಳು ಬಿಟ್ಟು ಹೋಗದೇ ಇದ್ದಿದ್ದರೆ ನಾನು ಕೆಟ್ಟ ಮನುಷ್ಯನಾಗಿಯೇ ಉಳಿದುಕೊಳ್ಳುತ್ತಿದ್ದೆ. ಹಾಗಂತ ಈಗ ನಾನು ಒಳ್ಳೆಯವನಾಗಿದ್ದೀನಿ ಎಂದಲ್ಲ. ಕೊನೇಪಕ್ಷ ನಾನು ಎಷ್ಟು ಕೆಟ್ಟವನು ಎನ್ನುವುದು ನನಗೆ ಈಗ ಗೊತ್ತಾಗಿದೆ. ಅವಳು ಬ್ರೇಕಪ್ ಮಾಡಿದ್ದರಿಂದಲೇ ನಾನು ಬೆಳೆದೆ. ನನಗೆ ಪ್ರೀತಿಯೇ ಕೊಡಲು ಬಂದಿರಲಿಲ್ಲ ಎನ್ನುವುದು ನಂತರ ಗೊತ್ತಾಗಿತ್ತು. ನಾನು ಯೋಗ್ಯ ಅಲ್ಲ ಎನ್ನುವುದನ್ನು ತೋರಿಸಿ ಹೋದಳು. ಇದಾದ ಬಳಿಕವೂ ಮತ್ತೊಂದು ಬ್ರೇಕ್‌ಅಪ್ ಆಯಿತು’ ಎಂದಿದ್ದಾರೆ ರಾಜ್.
ಈಗ ಒಂದು ರಿಲೇಶನ್‌ಶಿಪ್ ಇದೆ
‘ಈಗ ಒಂದು ರಿಲೇಶನ್‌ಶಿಪ್ ಇದೆ. ಇಬ್ಬರೂ ಜೀವನದ ಹುಡುಕಾಟದಲ್ಲಿದ್ದೇವೆ. ನಂದೇನೂ ರೂಲ್ಸ್ ಇಲ್ಲ. ಅವಳದ್ದೂ ಇಲ್ಲ. ನಾವು ಖುಷಿಯಿಂದ ಇದ್ದೇವೆ. ನೀನು ಬದುಕು ಕಲಿ, ನಾನು ಬದುಕು ಕಲಿಯುತ್ತೇನೆ ಎಂಬ ಮನಸ್ಥಿತಿ’ ಎಂದು ಈಗಿನ ಪ್ರೀತಿ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಡಿವೋರ್ಸ್ ಹಾಗೂ ಲಿವ್ ಇನ್ ರಿಲೇಶನ್‌ಶಿಪ್ ಬಗ್ಗೆಯೂ ತಮ್ಮ ಅಭಿಪ್ರಾಯ ಸೂಚಿಸಿದ್ದಾರೆ ರಾಜ್ ಬಿ ಶೆಟ್ಟಿ. ಜೀ ವಾಹಿನಿ ಈ ವಿಡಿಯೊ ಕ್ಲಿಪ್ ಕೂಡ ಹಂಚಿಕೊಂಡಿದ್ದು, ರಾಜ್ ಅಭಿಮಾನಿಗಳು ʻʻಸೂಪರ್ ರಾಜ್ ಬಿ ಶೆಟ್ಟಿ ಸರ್. ನಿಮ್ಮ ಮಾತು ಅರ್ಥಪೂರ್ಣವಾಗಿದೆʼʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಇದಪ್ಪ ಮಾತು ಅಂದ್ರೆ ಶೆಟ್ರೆʼʼಎಂದು ಕಮೆಂಟ್ ಮಾಡಿದ್ದಾರೆ.