Site icon Vistara News

Rajinikanth : ಲಾಲ್‌ ಸಲಾಂ ಮುಗಿದ ಬೆನ್ನಲ್ಲೇ ಮಾಲ್ಡೀವ್ಸ್‌ನಲ್ಲಿ ಜಾಲಿ ಮೂಡ್‌ನಲ್ಲಿ ರಜನಿಕಾಂತ್‌

Rajinikanth in maldives

ಚೆನ್ನೈ: ರಜನಿಕಾಂತ್‌ (Rajinikanth) ಅವರು ʼಜೈಲರ್‌ʼ ಆಗಿ ತೆರೆಯ ಮೇಲೆ ಮಿಂಚಲು ಸಿದ್ಧವಾಗುತ್ತಿದ್ದರೆ ಇನ್ನೊಂದತ್ತ ಮಗಳು ಐಶ್ವರ್ಯ ಅವರ ʼಲಾಲ್‌ ಸಲಾಂʼ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ʼಲಾಲ್‌ ಸಲಾಂʼ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ರಜನಿಕಾಂತ್‌ ಅವರು ಸದ್ಯ ಪ್ರವಾಸದ ಮೂಡ್‌ನಲ್ಲಿದ್ದಾರೆ. ಅದಕ್ಕೆಂದೇ ಅವರು ಮಾಲ್ಡೀವ್ಸ್‌ಗೆ ತೆರಳಿದ್ದು, ಅಲ್ಲಿನ ಕಡಲ ದಡದಲ್ಲಿ ನಡೆದಾಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ರಜನಿಕಾಂತ್‌ ಅವರು ಮಾಲ್ಡೀವ್ಸ್‌ನ ಕಡಲ ದಡದಲ್ಲಿ ಟಿ ಶರ್ಟ್‌, ಶಾರ್ಟ್ಸ್‌ ತೊಟ್ಟುಕೊಂಡು ಬರಿಗಾಲಿನಲ್ಲಿ ನಡೆದಾಡುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸೂಪರ್‌ ಸ್ಟಾರ್‌ ಅವರ ಸಿಂಪ್ಲಿಸಿಟಿ ಬಗ್ಗೆ ಜನರು ಚರ್ಚೆ ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ: Jailor Movie : ರಜನಿಕಾಂತ್‌ ʼಜೈಲರ್‌ʼ ಬಿಡುಗಡೆ ದಿನಾಂಕ ಫಿಕ್ಸ್‌; ಕನ್ನಡದಲ್ಲೂ ಇದೆಯೆ?
ಅಂದ ಹಾಗೆ ರಜನಿಕಾಂತ್‌ ಅವರು ಕಳೆದ ವಾರವೇ ಮಾಲ್ಡೀವ್ಸ್‌ನತ್ತ ಪ್ರಯಾಣ ಬೆಳೆಸಿದ್ದರು. ಈ ಬಗ್ಗೆ ಸಿನಿಮಾ ವಿಮರ್ಶಕ ರಮೇಶ್‌ ಬಾಲಾ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಅದರಲ್ಲಿ ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿತ್ತು. ಒಂದರಲ್ಲಿ ತಲೈವಾ ಅವರು ವಿಮಾನದ ಎದುರು ನಿಂತಿರುವ ಫೋಟೋವಾಗಿದ್ದರೆ, ಇನ್ನೊಂದು ರಜನಿಕಾಂತ್‌ ಅವರಿಗೆ ವಿಮಾನದ ಸಿಬ್ಬಂದಿ ಹೂವಿನಗುಚ್ಛ ಕೊಡುವ ಫೋಟೋವಾಗಿತ್ತು. ರಜನಿಕಾಂತ್‌ ಅವರು ಚೆನ್ನೈನಿಂದ ಮಾಲ್ಡೀವ್ಸ್‌ಗೆ ಹೊರಟಿದ್ದಾರೆ ಎಂದು ಆ ಪೋಸ್ಟ್‌ನಲ್ಲಿ ಮಾಹಿತಿ ಕೊಡಲಾಗಿತ್ತು.‌

ರಜನಿಕಾಂತ್‌ ಅವರು ʼಲಾಲ್‌ ಸಲಾಂʼ ಸಿನಿಮಾದಲ್ಲಿ ಮೊಯ್ಡೀನ್‌ ಭಾಯ್‌ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪುತ್ರಿ ಐಶ್ವರ್ಯ ರಜನಿಕಾಂತ್‌ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಅವರೇ ರಜನಿಕಾಂತ್‌ ಅವರ ಫಸ್ಟ್‌ ಲುಕ್‌ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ʼಲಾಲ್‌ ಸಲಾಂʼ ಅಲ್ಲದೆ ರಜನಿಕಾಂತ್‌ ಅವರು ನೆಲ್ಸನ್‌ ದಿಲೀಪ್‌ಕುಮಾರ್‌ ಅವರ ʼಜೈಲರ್‌ʼ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಸನ್‌ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಅನಿರುದ್ಧ ರವಿಚಂದರ್‌ ಸಂಗೀತ ಸಂಯೋಜನೆ ಮಾಡಿರುವ ಈ ಸಿನಿಮಾದ ಕಾವಾಲಯ್ಯ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಭಾರೀ ವೈರಲ್‌ ಆಗಿದೆ.

Exit mobile version