ಬೆಂಗಳೂರು: ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರ ಹೊಸ ಚಿತ್ರ ʼಜೈಲರ್ʼ (Jailer Movie) ಈ ವರ್ಷದ ಬ್ಲಾಕ್‌ಬಸ್ಟರ್ ಆಗಿದ್ದು, ಗಲ್ಲಾ ಪೆಟ್ಟಿಗೆಯನ್ನು ದೋಚುತ್ತಿದೆ. ಆದರೆ ತಲೈವಾ ಮಾತ್ರ ಅದನ್ನು ಸೆಲೆಬ್ರೇಟ್ ಮಾಡುವುದನ್ನು ಬಿಟ್ಟು ಹಿಮಾಲಯದ ಬಾಬಾಜಿ ಗುಹೆಯಲ್ಲಿ (Babaji Cave) ತಮ್ಮ ಧ್ಯಾನನಿರತರಾಗಿದ್ದಾರೆ.
ಜೈಲರ್ ಬಿಡುಗಡೆಯಾದ ಸಂದರ್ಭದಲ್ಲಿಯೇ ಹಿಮಾಲಯಕ್ಕೆ ತೆರಳಿರುವ ರಜನಿ ಅಲ್ಲಿ ತಮ್ಮ ಆಧ್ಯಾತ್ಮಿಕ ಗುರುಗಳನ್ನು ನೆನೆದುಕೊಂಡು ಧ್ಯಾನ ಮಾಡಿದ್ದಾರೆ. ಅವರು ಗುಹೆಯಲ್ಲಿ ಧ್ಯಾನಲೀನರಾಗಿರುವ ವಿಡಿಯೋ ಇದೀಗ ವೈರಲ್ (Viral video) ಆಗಿದೆ.
ರಜನಿಕಾಂತ್ ಅವರು ನಿಯಮಿತವಾಗಿ ಭೇಟಿ ನೀಡುವ ಆಧ್ಯಾತ್ಮಿಕ (spriritual) ತಾಣ ಉತ್ತರಾಖಂಡದಲ್ಲಿದೆ. ಯಾವುದೇ ಮಹತ್ವದ ಕೆಲಸ ಕೈಗೆತ್ತಿಕೊಳ್ಳುವ ಮುನ್ನ ಹಾಗೂ ಅದು ಮುಗಿದ ನಂತರ ಅವರು ಇಲ್ಲಿನ ಬಾಬಾ ಗುಹೆಗೆ ಭೇಟಿ ನೀಡುವ ಹಾಗೂ ಅಲ್ಲಿ ಧ್ಯಾನ (meditation) ಮಾಡುವ ಪರಿಪಾಠ ರೂಢಿಸಿಕೊಂಡಿದ್ದಾರೆ. ಅಲ್ಲಿನ ಸಾಧುಸಂತರನ್ನು ಭೇಟಿಯಾಗಿ ಅವರೊಡನೆ ಆಧ್ಯಾತ್ಮಿಕ ಮಾತುಕತೆಯಲ್ಲಿ ಅವರು ಸಮಯ ಕಳೆಯುತ್ತಾರೆ.
ಆಧ್ಯಾತ್ಮಿಕ ಜೀವನದತ್ತ ರಜನಿ ಒಲವು ಇಂದಿನದಲ್ಲ. ಹಲವು ದಶಕಗಳಿಂದಲೂ ಅವರು ʼಕ್ರಿಯಾ ಯೋಗʼ ಎಂದು ಕರೆಯಲಾಗುವ ಆಧ್ಯಾತ್ಮಿಕ ಮಾರ್ಗದಲ್ಲಿ ಸಕ್ರಿಯರಾಗಿದ್ದಾರೆ. ಮಹರ್ಷಿ ಪರಮಹಂಸ ಯೋಗಾನಂದರ ʼಯೋಗಿಯ ಆತ್ಮಕಥೆʼ ಓದಿದ ಬಳಿಕ ಅವರು ತಮ್ಮ ಆಧ್ಯಾತ್ಮಿಕ ಪಥವನ್ನು ಗುರುತಿಸಿಕೊಂಡಿದ್ದರು. ಇದನ್ನು ಅವರು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.
2002ರಲ್ಲಿ ರಜನಿಕಾಂತ್ ಸ್ವತಃ ʼಬಾಬಾʼ ಎಂಬ ಸಿನಿಮಾವನ್ನು ತಾವೇ ನಿರ್ಮಿಸಿದ್ದರು. ಇದು ಆಧ್ಯಾತ್ಮಿಕ ಸಾಧನೆಯ ಕಥೆಯನ್ನು ಹೊಂದಿದೆ. ಇದರ ನಾಯಕ ನಾಸ್ತಿಕನಾಗಿದ್ದು, ಹಲವು ಘಟನೆಗಳ ಬಳಿಕ ಆಸ್ತಿಕನಾಗಿ ಪರಿವರ್ತಿತನಾಗಿ, ತನ್ನ ಶಕ್ತಿಗಳನ್ನು ಸಮಾಜಕ್ಕೆ ಉಪಯೋಗವಾಗುವಂತೆ ಬಳಸುವುದು ಇದರ ಕಥೆಯಾಗಿದೆ.
ಇದನ್ನೂ ಓದಿ: Rajinikanth: ರಜನಿಗಾಗಿ ಚೆನ್ನೈನಿಂದ ಉತ್ತರಾಖಂಡಕ್ಕೆ 55 ದಿನ ನಡೆದುಕೊಂಡೇ ಬಂದ ಅಭಿಮಾನಿ!