ಇಂದು ದಿವಂಗತ ಡಾ. ರಾಜ್ ಕುಮಾರ್ (Rajkumar Birth Anniversary) ಅವರ ಜಯಂತ್ಯೋತ್ಸವ. ಕನ್ನಡ (Kannada) ಕಲಾರಸಿಕರ ಹೃದಯ ಸಾಮ್ರಾಟ. ಕನ್ನಡಿಗರಿಗೆಲ್ಲರಿಗೂ ಅವರೊಂದು ಶಕ್ತಿ. ಅವರು ಕನ್ನಡ ಭಾಷೆಯ ಅಸ್ಮಿತೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ನಗಿಸಿ, ಅಳಿಸಿ, ಆಲೋಚನೆಗೆ ಹಚ್ಚಿ, ಛಲ ತುಂಬಿ, ಮಾರ್ಗದರ್ಶನ ನೀಡಿದರು. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅಪ್ರತಿಮ ಸೂಪರ್‌ಸ್ಟಾರ್. 1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಚಿತ್ರದಿಂದ ಮುತ್ತುರಾಜ್ ಕನ್ನಡ ಸಿನಿರಸಿಕರಿಗೆ ಪರಿಚಿತರಾದರು. ಇದೀಗ ರಾಜ್ ಅವರ ಟಾಪ್ 10 ಸಿನಿಮಾಗಳ ಮಾಹಿತಿ ತಿಳಿಯೋಣ.
ಕಸ್ತೂರಿ ನಿವಾಸ (KASTHURI NIVAAS)
ಕಸ್ತೂರಿ ನಿವಾಸ ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲೊಂದು. ರಾಜ್ಯದ ಹಲವಾರು ಚಿತ್ರಮಂದಿರಗಳಲ್ಲಿ ಚಿತ್ರ 175 ದಿನ ಪೂರೈಸಿದರೆ, 16 ಚಿತ್ರಮಂದಿರಗಳಲ್ಲಿ 100 ವಾರ ಪೂರೈಸಿ ದಾಖಲೆಯನ್ನ ಬರೆಯಿತು. ಕಸ್ತೂರಿ ನಿವಾಸ’ ಚಿತ್ರಕ್ಕೆ ಜಿಕೆ ವೆಂಕಟೇಶ್ ಸಂಗೀತ ನೀಡಿದ್ದರು. ವಿಶೇಷ ಅಂದರೆ ಚಿತ್ರದ ಆರಕ್ಕೆ ಆರು ಹಾಡು ಕೂಡ ಸೂಪರ್ ಹಿಟ್. ಚಿತ್ರದಲ್ಲಿನ ‘ಆಡಿಸಿ ನೋಡು ಬೀಳಿಸಿ ನೋಡು’.. ಹಾಡು ಸಂಗೀತ ಪ್ರಿಯರ ಮೇಲೆ ತನ್ನ ಹಿಡಿತ ಸಾಧಿಸಿದೆ ಅಂದರೆ ಎಂತಹವರಿಗೆ ಆದರೂ ಅದು ಅಚ್ಚರಿಯ ಸಂಗತಿಯೇ ಸರಿ. ದೊರೈ-ಭಗವಾನ್ ನಿರ್ದೇಶನ ಈ ಸಿನಿಮಾಗಿದೆ. ಶಿವಾಜಿ ಗಣೇಶನ್ ತಮಿಳಿನಲ್ಲಿ ಚಿತ್ರವನ್ನ ರಿಮೇಕ್ ಮಾಡಿದರು. ಹಿಂದಿಯಲ್ಲಿ ಸಂಜೀವ್ ಕುಮಾರ್ ಡಾ.ರಾಜ್ ಕುಮಾರ್ ಅವರ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನವನ್ನ ಶಾಂದಾರ್ ಚಿತ್ರದಲ್ಲಿ ಮಾಡಿದರು.
ಬಂಗಾರದ ಮನುಷ್ಯ (1972) (Bangarada Manushya)
ಬಂಗಾರದ ಮನುಷ್ಯ T. K. ರಾಮರಾವ್ ಅವರ ಕಾದಂಬರಿಯನ್ನು ಆಧರಿಸಿದ 1972ರ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಶ್ರೀನಿಧಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿದ್ದಲಿಂಗಯ್ಯ ನಿರ್ದೇಶಿಸಿದ್ದರು. ಈ ಮೊದಲು ಸಿದ್ದಲಿಂಗಯ್ಯ ಅವರು ʻಮೇಯರ್ ಮುತ್ತಣ್ಣʼ ಸಿನಿಮಾಗೂ ನಿರ್ದೇಶಿಸಿದ್ದರು. ರಾಜೀವನಾಗಿ ಡಾ ರಾಜ್‌ಕುಮಾರ್, ಲಕ್ಷ್ಮಿಯಾಗಿ ಭಾರತಿ, ರಾಚುತಪ್ಪನಾಗಿ ಬಾಲಕೃಷ್ಣ, ಶರಾವತಿಯಾಗಿ ಆರತಿ, ಗ್ರಾಮದ ಮುಖಂಡನ ಮಗನಾಗಿ ದ್ವಾರಕೀಶ್ ನಟಿಸಿದ್ದರು. ಆರ್.ಲಕ್ಷ್ಮಣ್ ನಿರ್ಮಾಣ ಇದ್ದರೆ, ಜಿ ಕೆ ವೆಂಕಟೇಶ್ ಸಂಗೀತ ನಿರ್ದೇಶಕರಾಗಿದ್ದರು.
ಬರೋಬ್ಬರಿ 2 ವರ್ಷ ಪ್ರದರ್ಶನ ಕಂಡ ಸಿನಿಮಾ ಇದು. ಡಾ. ರಾಜ್‌ಕುಮಾರ್ ಹಾಗೂ ಭಾರತೀ ವಿಷ್ಣುವರ್ಧನ್ ನಟನೆಯ ಈ ಚಿತ್ರ ಬೆಂಗಳೂರಿನ ಸ್ಟೇಟ್ಸ್ ಥಿಯೇಟರ್‌ನಲ್ಲಿ (ಈಗಿನ ಭೂಮಿಕಾ ಥಿಯೇಟರ್) ಎರಡು ವರ್ಷ, ಮೈಸೂರಿನ ಚಾಮುಂಡೇಶ್ವರಿ ಥಿಯೇಟರ್‌ನಲ್ಲಿ 60 ವಾರಗಳ ಕಾಲ ಪ್ರದರ್ಶನಗೊಂಡಿತ್ತು. ಇನ್ನು ಕೆಲವೆಡೆ 1 ವರ್ಷ, ಮತ್ತೆ ಕೆಲವೆಡೆ 25 ವಾರ ಓಡಿತ್ತು.ಪಟ್ಟಣದಿಂದ ಹಳ್ಳಿ ಸೇರಿ ರಾಜೀವ(ಡಾ. ರಾಜ್‌ಕುಮಾರ್) ಬರಡು ಭೂಮಿಯಲ್ಲಿ ಕೃಷಿ ಮಾಡಿ ಗೆಲ್ಲುವ ಕಥೆ ಅನೇಕರಿಗೆ ಸ್ಫೂರ್ತಿಯಾಗಿತ್ತು.ಅಂದಾಜು 13 ಲಕ್ಷ ರೂಪಾಯಿ ಖರ್ಚು ಮಾಡಿ ಸಿನಿಮಾ ನಿರ್ಮಿಸಲಾಗಿತ್ತು. ಆದರೆ ಹಲವು ಪಟ್ಟು ಸಿನಿಮಾ ಲಾಭ ಮಾಡಿತ್ತು. ಬರೋಬ್ಬರಿ 2.5 ಕೋಟಿ ರೂ. ಗಳಿಕೆ ಕಂಡಿತ್ತು ಎನ್ನುವ ಅಂದಾಜಿದೆ. ಇವತ್ತಿನ ಲೆಕ್ಕದಲ್ಲಿ ಕಲೆಕ್ಷನ್ 100 ಕೋಟಿ ರೂ.ಗೂ ಹೆಚ್ಚು ಎನ್ನಬಹುದು.
ಇದನ್ನೂ ಓದಿ: Jai Sriram Slogan: ಜೈ ಶ್ರೀರಾಮ್ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ
ಗಂಧದಗುಡಿ ( GANDHADA GUDI)
ಕನ್ನಡ ನಾಡಿನ ಹಚ್ಚ ಹಸಿರು, ವನ್ಯಜೀವಿಗಳ ಲೋಕ, ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರಿದ ಗಂಧದಗುಡಿ 1973ರ ಸೆಪ್ಟಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಚಿತ್ರರಂಗದಲ್ಲಿ ನಟರಾಗಿ ನಂತರ ನಿರ್ಮಾಪಕರಾಗಿ ಬೆಳೆದವರು ಮೈಸೂರಿನವೇ ಆದ ಎಂ.ಪಿ.ಶಂಕರ್. ಅವರಿಗೂ ಕಾಡಿನ ಕುರಿತು ಏನಾದರೂ ಸಿನೆಮಾ ಮಾಡಬೇಕು ಎನ್ನುವ ಬಯಕೆ. ಅದಕ್ಕಾಗಿ 1969ರಲ್ಲಿ ಕಾಡಿನ ರಹಸ್ಯ ಎನ್ನುವ ಚಿತ್ರ ಮಾಡಿದ್ದರು. 1972ರಲ್ಲಿಯೇ ಮೈಸೂರು ಜಿಲ್ಲೆಯ ನಾಗರಹೊಳೆ, ಬಂಡೀಪುರ ಪ್ರದೇಶದಲ್ಲಿ ಶೂಟಿಂಗ್. ರಾಜಕುಮಾರ್ ಜತೆಗೆ ವಿಷ್ಣುವರ್ಧನ್ ಕೂಡ ಇದ್ದರು. ದೊಡ್ಡ ತಾರಾಗಣದ ಚಿತ್ರ. ವಿಜಯ್ ನಿರ್ದೇಶನ. ಡಿ.ವಿ.ರಾಜಾರಾಂ ಅವರ ಕ್ಯಾಮರಾ. ರಾಜನ್ ನಾಗೇಂದ್ರ ಅವರ ಸಂಗೀತವಿದ್ದ ಚಿತ್ರ.
ಭಕ್ತ ಕುಂಬಾರ
ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿದ 1974 ರ ಕನ್ನಡ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಾಜಕುಮಾರ್ ಮತ್ತು ಲೀಲಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿ ಕೆ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಅದ್ಭುತ ಯಶಸ್ಸಿನ ನಂತರ ಈ ಚಿತ್ರವನ್ನು ನಂತರ ತೆಲುಗಿನಲ್ಲಿ ವಿ. ಮಧುಸೂಧನ್ ರಾವ್ ಅವರು ʻಚಕ್ರಧಾರಿʼ ಎಂದು ಸಿನಿಮಾ ಮಾಡಿದರು. 1977ರಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ನಟಿಸಿದರು.
ಗೋರಾ ಪಾತ್ರದಲ್ಲಿ ಡಾ ರಾಜ್‌ಕುಮಾರ್, ಗೋರ ಪತ್ನಿಯಾಗಿ ಲೀಲಾವತಿ, ಸಂತ ಜ್ಞಾನದೇವನಾಗಿ ರಾಜಶಂಕರ್,
ಗೋರನ ನೆರೆಯವನಾಗಿ ಬಾಲಕೃಷ್ಣ, ಕೃಷ್ಣನಾಗಿ ವಜ್ರಮುನಿ ಪಾತ್ರ ನಿಭಾಯಿಸಿದ್ದರು.
ನಿರ್ದೇಶಕ: ಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕ: ಲಕ್ಷ್ಮಿ ಫಿಲ್ಮ್ಸ್ ಕಂಬೈನ್ಸ್
ಸಂಗೀತ ನಿರ್ದೇಶಕ: ಜಿ ಕೆ ವೆಂಕಟೇಶ್
ಮಯೂರ (Mayura)
ಮಯೂರ 975 ರ ಕನ್ನಡ ಐತಿಹಾಸಿಕ ನಾಟಕ ಚಲನಚಿತ್ರವಾಗಿದೆ. ಇಂದಿನ ಆಧುನಿಕ ಕರ್ನಾಟಕ ರಾಜ್ಯವನ್ನು ಆಳುವ ಸಾಮ್ರಾಜ್ಯವಾದ ಕದಂಬ ರಾಜವಂಶದ ರಾಜಕುಮಾರ ಮಯೂರಶರ್ಮಾ ಪಾತ್ರವನ್ನು ನಿರ್ವಹಿಸಿದ್ದರು ರಾಜ್. ರಾಜ್‌ಕುಮಾರ್ ಅವರ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಇದು ಒಂದಾಗಿದೆ. ಈ ಚಿತ್ರವು ಬ್ರಾಹ್ಮಣ ಯುವಕನಾದ ಮಯೂರನ ಜೀವನವನ್ನು ಚಿತ್ರಿಸುತ್ತದೆ. ಮಯೂರನಾಗಿ ರಾಜಕುಮಾರ್, ಪಲ್ಲವರ ಯುವರಾಜನಾಗಿ ಶ್ರೀನಾಥ್, ರಾಜಕುಮಾರ ವಿಷ್ಣುಗೋಪನಾಗಿ ವಜ್ರಮುನಿ ಪಾತ್ರ ನಿಭಾಯಿಸಿದ್ದರು.
ನಿರ್ದೇಶಕ: ವಿಜಯ್
ನಿರ್ಮಾಪಕ: ಟಿ.ಪಿ. ವೇಣುಗೋಪಾಲ್
ಸಂಗೀತ ನಿರ್ದೇಶಕ: ಜಿ ಕೆ ವೆಂಕಟೇಶ್
ಸನಾದಿ ಅಪ್ಪಣ್ಣ (1977) (sanaadi appanna)
ಸನಾದಿ ಅಪ್ಪಣ್ಣ (ಸನಾದಿ ಅಪ್ಪಣ್ಣ) ವಿಜಯ್ ನಿರ್ದೇಶಿಸಿದ 1977ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಕೃಷ್ಣಮೂರ್ತಿ ಪುರಾಣಿಕ್ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ‘ಸನಾದಿ ಅಪ್ಪಣ್ಣ’ ಚಿತ್ರವು ಕೃಷ್ಣಮೂರ್ತಿ ಪುರಾಣಿಕ್ ಅವರ ‘ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ’ ಕಾದಂಬರಿಯನ್ನು ಆಧರಿಸಿದ್ದು. ಈ ಕಥೆಯ ಹಂದರ ಬಾಗಲಕೋಟೆಯ ಶಹನಾಯಿ ವಾದಕ ಅಪ್ಪಣ್ಣನವರ ಜೀವನ ವೃತ್ತಾಂತವನ್ನು ಒಳಗೊಂಡಿರುವಂತಹುದು. ವಿಜಯ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನವಿದೆ. ಶಹನಾಯಿ ವಾದಕ ಅಪ್ಪಣ್ಣನ ಪಾತ್ರದಲ್ಲಿ ರಾಜಕುಮಾರ್ ಅವರು ತೆರೆಯನ್ನು ಆವರಿಸಿಕೊಂಡರೆ, ಚಿತ್ರದುದ್ದಕ್ಕೂ ಶಹನಾಯಿಯ ವಾದನವನ್ನು ಹಿನ್ನೆಲೆಯಲ್ಲಿ ಮಾಡಿರುವವರು ಬಿಸ್ಮಿಲ್ಲಾ ಖಾನ್.
ಇದನ್ನೂ ಓದಿ: Actor Rajinikanth: ಲೋಕೇಶ್ ಕನಕರಾಜ್-ರಜನಿ ಸಿನಿಮಾಗೆ ಟಾಲಿವುಡ್ ಖ್ಯಾತ ನಟ ಭರ್ಜರಿ ಎಂಟ್ರಿ?
ಪಾತ್ರವರ್ಗ ಮತ್ತು ಸಿಬ್ಬಂದಿ:
ಅಪ್ಪಣ್ಣನಾಗಿ ರಾಜ್‌ಕುಮಾರ್, ಬಸಂತಿಯಾಗಿ ಜಯಪ್ರದಾ, ರಾವ್ ಅಪ್ಪಣ್ಣನ ಮಗನಾಗಿ ಅಶೋಕ್, ಅಪಶ್ರುತಿ ಅಯ್ಯಣ್ಣನಾಗಿ ಬಾಲಕೃಷ್ಣ, ಯುವಕ ಅಶೋಕ್ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್
ನಿರ್ದೇಶಕ: ಎಚ್.ಆರ್.ಭಾರ್ಗವ
ನಿರ್ಮಾಪಕ: ದ್ವಾರಕೀಶ್
ಸಂಗೀತ ನಿರ್ದೇಶಕ: ರಾಜನ್-ನಾಗೇಂದ್ರ
ಬಬ್ರುವಾಹನ (Babruvahana )
ಬಬ್ರುವಾಹನ 1977 ರಲ್ಲಿ ಬಿಡುಗಡೆಯಾದ ಪೌರಾಣಿಕ ಕನ್ನಡ ಚಲನಚಿತ್ರ. ಮೇಕಿಂಗ್ ಮತ್ತು ಸಂಗೀತಕ್ಕೆ ಹೆಸರುವಾಸಿಯಾದ ಸಿನಿಮಾ. ರಾಜ್‌ಕುಮಾರ್ ಅವರೇ ಹಾಡಿರುವ ‘ಈ ಸಮಯ ಆನಂದಮಯ’, ‘ಆರಾಧಿಸುವೆ ಮದನಾರಿ’ ಮತ್ತು ‘ಬರಸಿಡಿಲು ಬಡಿದನಾಥೆ’ ನಂತಹ ಕೆಲವು ಹಾಡುಗಳು ಸಖತ್ ಹಿಟ್ ಕಂಡವು. ಅರ್ಜುನ ಮತ್ತು ಮಗ ಬಬ್ರುವಾಹನ ಪಾತ್ರದಲ್ಲಿ ರಾಜ್‌ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಿ ಸರೋಜಾದೇವಿ ಚಿತ್ರಾಂಗದೆಯಾಗಿ ಕಾಣಿಸಿಕೊಂಡಿದ್ದರು. ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನ ಮತ್ತು ಚಿತ್ರಕಥೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಕೆಸಿಎನ್ ಚಂದ್ರಶೇಖರ್ ನಿರ್ಮಿಸಿದ್ದಾರೆ.
ಪಾತ್ರವರ್ಗ ಮತ್ತು ಸಿಬ್ಬಂದಿ:
ರಾಜಕುಮಾರ್, ಬಿ.ಸರೋಜಾದೇವಿ, ಕಾಂಚನಾ, ಜಯಮಾಲಾ, ವಜ್ರಮುನಿ, ರಾಮಕೃಷ್ಣ, ತೂಗುದೀಪ ಶ್ರೀನಿವಾಸ್.
ನಿರ್ದೇಶಕ: ಹುಣಸೂರು ಕೃಷ್ಣ ಮೂರ್ತಿ
ನಿರ್ಮಾಪಕ: ರಾಜಕಮಲ್ ಆರ್ಟ್ಸ್
ಸಂಗೀತ ನಿರ್ದೇಶಕ: ಟಿ.ಜಿ. ಲಿಂಗಪ್ಪ
ಕವಿರತ್ನ ಕಾಳಿದಾಸ (1983)
ಕವಿರತ್ನ ಕಾಳಿದಾಸ 1983ರ ಕನ್ನಡ ಐತಿಹಾಸಿಕ ಚಲನಚಿತ್ರ. 4 ನೇ ಶತಮಾನದ ಶಾಸ್ತ್ರೀಯ ಸಂಸ್ಕೃತ ಬರಹಗಾರ ಕಾಳಿದಾಸನ ಜೀವನವನ್ನು ಆಧರಿಸಿದೆ. ತ್ತು. ಈ ಚಿತ್ರವನ್ನು ರೇಣುಕಾ ಶರ್ಮಾ ಬರೆದು ನಿರ್ದೇಶಿಸಿದ್ದಾರೆ. ವಿ ಎಸ್ ಗೋವಿಂದ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ಅವರು ಕಾಳಿದಾಸನ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಜಯಪ್ರದಾ ಅವರು ವಿದ್ಯಾಧರೆಯಾಗಿ ಮತ್ತು ಶ್ರೀನಿವಾಸ ಮೂರ್ತಿ ರಾಜ ಭೋಜ ಪಾತ್ರದಲ್ಲಿ ನಟಿಸಿದ್ದರು. ‘ವಜ್ರೇಶ್ವರಿ ಕಂಬೈನ್ಸ್’ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ವಿತರಿಸಿದ್ದರು.
ಪಾತ್ರವರ್ಗ ಮತ್ತು ಸಿಬ್ಬಂದಿ: ಕಾಳಿದಾಸನಾಗಿ ರಾಜ್‌ಕುಮಾರ್, ವಿಧ್ಯಾಧಾರೆಯಾಗಿ ಜಯಪ್ರದ, ರಾಜ ಭೋಜನಾಗಿ ಶ್ರೀನಿವಾಸ ಮೂರ್ತಿ. ನಿರ್ದೇಶಕರು: ರೇಣುಕಾ ಶರ್ಮಾ ನಿರ್ಮಾಪಕ: ವಿ ಎಸ್ ಗೋವಿಂದ ಸಂಗೀತ ನಿರ್ದೇಶಕ: ಎಂ.ರಂಗರಾವ್
ಜೀವನ ಚೈತ್ರ (1992) (Jeevana Chaitra)
ಜೀವನ ಚೈತ್ರ 1992ರಲ್ಲಿ ಬಿಡುಗಡೆಯಾದ ಸಿನಿಮಾ. ದೊರೈ- ಭಗವಾನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಮಾಧವಿ ಈ ಚಿತ್ರದ ನಾಯಕಿ. ಇದು ಒಂದು ರೀತಿಯಲ್ಲಿ ಅಣ್ಣಾವ್ರ ಕಂಬ್ಯಾಕ್ ಸಿನಿಮಾವೂ ಆಗಿತ್ತು.ಇದು ಕಾದಂಬರಿ ಆಧರಿತ ಸಿನಿಮಾ. ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಜೀವನಚೈತ್ರ ಕಾದಂಬರಿಯೇ ಸಿನಿಮಾವಾಗಿತ್ತು.
ಪಾತ್ರವರ್ಗ ಮತ್ತು ಸಿಬ್ಬಂದಿ:
ಡಾ ರಾಜಕುಮಾರ್, ಮಾಧವಿ, ಕೆ.ಎಸ್.ಅಶ್ವಥ್, ಪಂಡರಿ ಬಾಯಿ
ನಿರ್ದೇಶಕ: ದೊರೈ – ಭಗವಾನ್
ನಿರ್ಮಾಪಕಿ: ಪಾರ್ವತಮ್ಮ ರಾಜ್‌ಕುಮಾರ್
ಸಂಗೀತ ನಿರ್ದೇಶಕ: ಉಪೇಂದ್ರ ಕುಮಾರ್
ಆಕಸ್ಮಿಕ (1993) Aakasmika
1993 ರ ಕನ್ನಡ ಆಕ್ಷನ್-ಡ್ರಾಮಾ ಚಲನಚಿತ್ರವಾಗಿದ್ದು, ಇದನ್ನು ನಾಗಾಭರಣ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಜಕುಮಾರ್, ಗೀತಾ ಮತ್ತು ಮಾಧವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಂಸಲೇಖ ಸಂಗೀತ ಜತೆಗೆ ಸಾಹಿತ್ಯವನ್ನು ಬರೆದಿದ್ದಾರೆ. ʻಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಕೇಳಿದರೆ ಎಂಥವರಿಗಾದರೂ ಒಮ್ಮೆ ರೋಮಾಂಚನ ಆಗುತ್ತದೆ. ಈ ಹಾಡಿಗೆ ಇರುವ ತಾಕತ್ತು ಅಂಥದ್ದು. ಹಾಡಿನ ಪ್ರತಿ ಸಾಲುಗಳು ಕನ್ನಡ ನಾಡಿನ ಬಗ್ಗೆ ಇರುವುದು ಒಂದು ವಿಶೇಷವಾದರೆ, ರಾಜ್‌ಕುಮಾರ್ ಅವರ ಕಂಠದಲ್ಲಿ ಈ ಸಾಂಗ್ ಮೂಡಿ ಬಂದಿದೆ ಅನ್ನೋದು ಮತ್ತೊಂದು ವಿಶೇಷ. ಈ ಸಿನಿಮಾದ ಹಿಟ್ ಸಾಂಗ್ ಇದು.
ರಾಜ್‌ಕುಮಾರ್ ರಿಯಲ್ ಹೀರೊ
ತಾವು ಮಾಡುವ ಪಾತ್ರಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಬಾರದು ಅನ್ನೋ ಕಾಳಜಿ ರಾಜ್ ಕುಮಾರ್ ಅವರಿಗೆ ಇತ್ತು. ಹೀಗಾಗಿಯೇ ಸಿನಿಮಾಗಳಲ್ಲಿ ರಾಜ್ ಕುಡಿದಿಲ್ಲ, ಸಿಗರೇಟ್ ಸೇದಿಲ್ಲ, ರೇಪ್ ಸೀನ್, ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿಲ್ಲ. ಅದಷ್ಟೇ ಸಂಭಾವನೆ ಕೊಟ್ಟರೂ ನಾನು ಇಂತ ಪಾತ್ರಗಳಲ್ಲಿ ನಟಿಸಲ್ಲ ಎಂದು ಅವರು ಕಡ್ಡಿ ಮುರಿದಂತೆ ಹೇಳಿದ್ದರು. ಪಾತ್ರಗಳಿಗೆ ಜೀವ ತುಂಬುವ ರಾಜ್ ಅದಕ್ಕಾಗಿ ಕಠಿಣ ನಿಯಮಗಳನ್ನು ಪಾಲಿಸುತ್ತಿದ್ದರು. ‘ಮಂತ್ರಾಲಯ ಮಹಾತ್ಮೆ’ ಸಿನಿಮಾಕ್ಕಾಗಿ ಅವರು ಬಾಡೂಟವನ್ನೇ ಬಿಟ್ಟಿದ್ದರು.