ನವ ದೆಹಲಿ: ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನರಾಗಿದ್ದಾರೆ. ಅವರಿಗೆ 58ವರ್ಷ ವಯಸ್ಸಾಗಿತ್ತು. ಆಗಸ್ಟ್ 10ರಂದು ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ದೆಹಲಿಯ ಏಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದೂವರೆ ತಿಂಗಳು ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ, ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಅವರ ಮಿದುಳು ಕಾರ್ಯನಿಲ್ಲಿಸಿತ್ತು ಎಂದು ಹೇಳಲಾಗಿದೆ.
ರಾಜು ಶ್ರೀವಾಸ್ತವ್ ಎಂದಿನಂತೆ ಆಗಸ್ಟ್ 10ರಂದು ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಆಗ ತೀವ್ರ ಹೃದಯಾಘಾತದಿಂದ ಕುಸಿದುಬಿದ್ದಿದ್ದರು. ಜಿಮ್ ತರಬೇತುದಾರ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ರಾಜುಗೆ ಎಚ್ಚರ ಇರಲಿಲ್ಲ. ಸುಮಾರು 15 ದಿನ ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದರು. ವೆಂಟಿಲೇಟರ್ನಲ್ಲೇ ಇಟ್ಟು ಆರೈಕೆ ಮಾಡಲಾಗುತ್ತಿತ್ತು. ಎರಡು ಸಲ ಸಿಪಿಆರ್ (Cardiopulmonary Resuscitation) ಚಿಕಿತ್ಸೆ ಕೂಡ ನೀಡಲಾಗಿತ್ತು. ಆಗಸ್ಟ್ 25ರಂದು ಅವರು ಎಚ್ಚರಗೊಂಡಾಗ, ಆರೋಗ್ಯ ಸುಧಾರಿಸಬಹುದು ಎಂಬ ಭರವಸೆ ಹುಟ್ಟಿತ್ತು. ಆದರೆ ಮತ್ತೆ ಸೆಪ್ಟೆಂಬರ್ 1ರಂದು ವಿಪರೀತ ಜ್ವರ ಕಾಡಿತ್ತು. ಮತ್ತೆ ಆರೋಗ್ಯ ಕ್ಷೀಣಿಸುತ್ತ ಬಂದಿತ್ತು. ಇದೀಗ ಒಂದೂವರೆ ತಿಂಗಳ ಚಿಕಿತ್ಸೆ, ಅನೇಕಾನೇಕ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಇಂದು ಬೆಳಗ್ಗೆ ರಾಜು ಉಸಿರು ನಿಲ್ಲಿಸಿದ್ದಾರೆ.
ರಾಜು ಶ್ರೀವಾಸ್ತವ್ರಿಗೆ ಹೃದಯಾಘಾತವಷ್ಟೇ ಅಲ್ಲ, ಮಿದುಳಿನಲ್ಲೂ ರಕ್ತ ಹೆಪ್ಪುಗಟ್ಟಿತ್ತು. ಇದೇ ಕಾರಣಕ್ಕೇ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಬ್ಬರೂ ರಾಜು ಶ್ರೀವಾಸ್ತವ್ ಪತ್ನಿ ಶಿಖಾ ಶ್ರೀವಾಸ್ತವ್ಗೆ ಕರೆ ಮಾಡಿ, ಚಿಕಿತ್ಸೆಗೆ ಪೂರ್ತಿ ಸಹಾಯ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಏನೆಲ್ಲ ಪ್ರಯತ್ನ ಪಟ್ಟರೂ ಬದುಕುಳಿಯಲಿಲ್ಲ ಹಾಸ್ಯನಟ.
ರಾಜು ಶ್ರೀವಾಸ್ತವ ಅವರು 1980ರಲ್ಲಿಯೇ ಮನರಂಜನೆ ಕ್ಷೇತ್ರ ಪ್ರವೇಶಿಸಿ ಹ್ಯಾಸನಟರಾಗಿ ಗುರುತಿಸಿಕೊಂಡಿದ್ದಾರೆ. “ಬಾಜಿಗರ್”, “ಮೈನೆ ಪ್ಯಾರ್ ಕಿಯಾ”, “ಬಾಂಬೆ ಟು ಗೋವಾ” ಸೇರಿ ಬಾಲಿವುಡ್‌ನ (Bollywood) ಹಲವು ಸಿನಿಮಾಗಳಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. 2005ರಲ್ಲಿ ಆರಂಭವಾದ “ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್” ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಖ್ಯಾತಿ ಗಳಿಸುವ ಜತೆಗೆ ಸ್ಟ್ಯಾಂಡಪ್ ಕಮಿಡಿಯನ್ ಆಗಿಯೂ ರೂಪುಗೊಂಡರು. ಇನ್ನು, “ಪೇಟ್ ಸಫಾ” ಜಾಹೀರಾತಂತೂ ರಾಜು ಶ್ರೀವಾಸ್ತವ ಅವರನ್ನು ಮನೆಮಾತಾಗಿಸಿದೆ.
ಇದನ್ನೂ ಓದಿ: Raju Srivastava | ಹಾಸ್ಯನಟ ರಾಜು ಶ್ರೀವಾಸ್ತವ್ಗೆ ಮರಳಿದ ಪ್ರಜ್ಞೆ; ಮುಂದುವರಿದ ಚಿಕಿತ್ಸೆ