ಬೆಂಗಳೂರು: ಹಾಡುಗಳ ಕಾಪಿರೈಟ್ ಉಲ್ಲಂಘನೆ (Copy Right Violation) ಆರೋಪದಲ್ಲಿ ನಟ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ವಿರುದ್ಧ ದಾಖಲಾಗಿದ್ದ ಎಫ್ಐಆರ್ (FIR) ಪ್ರಕರಣಕ್ಕೆ ಸಂಬಂಧಿಸಿ, ಯಶವಂತಪುರ ಪೊಲೀಸರ ಎದುರು ವಿಚಾರಣೆಗೆ ನಟ ರಕ್ಷಿತ್ ಶೆಟ್ಟಿ ಹಾಜರಾಗಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಹಾಗೂ ಅವರ ಒಡೆತನದ ಪರಂವಹ ಸ್ಟುಡಿಯೋ ಮೇಲೆ ಎಫ್ಐಆರ್ ದಾಖಲಾಗಿತ್ತು. ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ʼಗಾಳಿಮಾತುʼ ಹಾಗು ʼನ್ಯಾಯ ಎಲ್ಲಿದೆʼ ಎಂಬ ಸಿನಿಮಾದ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡ ಆರೋಪ ಅವರ ಮೇಲಿದೆ. ʼನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಮತ್ತು ʼಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆʼ ಎಂಬ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಎಂಬವರು ದೂರು ಸಲ್ಲಿಸಿದ್ದರು.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಎರಡು ಹಾಡು ಅನುಮತಿಯಿಲ್ಲದೆ ಬಳಕೆ ಮಾಡಿಕೊಂಡ ಆರೋಪದ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಸಿನಿಮಾ ತೆರೆ ಕಾಣುವುದಕ್ಕೂ ಮುನ್ನ MRT ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ರಕ್ಷಿತ್ ಉತ್ತರ ನೀಡಿದ್ದಾರೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ನಾವು ಹಾಡು ಬಳಕೆ ಮಾಡುವ ಕುರಿತು ಮಾತುಕತೆ ನಡೆಸಿದ್ದೆವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಡ್ಜೆಟ್ ಅನ್ನು ಮೀರಿತ್ತು. ಎಂಆರ್‌ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರು ಮಾತುಕತೆಗೆ ತಯಾರಿರರಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಮಾಡಿದ್ದಾರೆ ಎಂದು ಉತ್ತರಿಸಿರುವ ರಕ್ಷಿತ್ ಶೆಟ್ಟಿ, ಚಿತ್ರದಲ್ಲಿ ಬಳಕೆಯಾಗಿರುವ ಹಾಡಿನ ತುಣುಕುಗಳನ್ನು ತೋರಿಸಿದ್ದಾರೆ. ಚಿತ್ರದಲ್ಲಿ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಜನವರಿ 26 ರಂದು ರಿಲೀಸ್ ಆಗಿತ್ತು. ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್, ನಟಿ ಸಿರಿ ರವಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಕಿರಿಕ್ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಕಾಲಿಟ್ಟಿದ್ದರು. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿತ್ತು.
ಈ ಮುಂಚೆ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಬಳಕೆಯಾದ ಒಂದು ಹಾಡಿನ ವಿರುದ್ಧ ಲಹರಿ ಮ್ಯೂಸಿಕ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಕಾಪಿರೈಟ್ ನಿಯಮ ಉಲ್ಲಂಘಿಸಿ ತಮ್ಮ ಸಂಸ್ಥೆಯ ಹಾಡುಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ, ಅನುಮತಿ ಇಲ್ಲದೆ ಹಾಡು ಬಳಸಲಾಗಿದೆ ಎಂದು ಆರೋಪಿಸಿ ಲಹರಿ ಸಂಸ್ಥೆ ಕೇಸ್ ಹಾಕಿತ್ತು.
ಇದನ್ನೂ ಓದಿ | Rakshit Shetty: ರಕ್ಷಿತ್ ಶೆಟ್ಟಿಗೆ ತಪ್ಪದ ಸಂಕಷ್ಟ; ಮತ್ತೊಂದು ದೂರು ದಾಖಲು!