Site icon Vistara News

Ramayana Movie: ದೇಶದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ ʼರಾಮಾಯಣʼ; ಬಜೆಟ್‌ ನಿಮ್ಮ ಊಹೆಗೂ ನಿಲುಕದ್ದು

Ramayana Movie

Ramayana Movie

ಮುಂಬೈ: ಸದ್ಯ ದೇಶಾದ್ಯಂತ ʼರಾಮಾಯಣʼ (Ramayana Movie) ಚಿತ್ರದ್ದೇ ಸದ್ದು. ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾ ಬಹು ತಾರಾಗಣದ ಮೂಲಕವೇ ಸುದ್ದಿಯಾಗುತ್ತಿದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಯರಾಗುತ್ತಿರುವ ಈ ಚಿತ್ರದಲ್ಲಿ ರಾಮನಾಗಿ ರಣಬೀರ್‌ ಕಪೂರ್‌ (Ranbir Kapoor) ಮತ್ತು ಸೀತೆಯಾಗಿ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ (Yash) ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಈ ಮಧ್ಯೆ ಸಿನಿಮಾ ಬಜೆಟ್‌ ಬಗ್ಗೆ ಹೊಸ ಅಪ್‌ಡೇಟ್‌ ಹೊರ ಬಿದ್ದಿದೆ.

ಬಜೆಟ್‌ ಎಷ್ಟು?

ʼರಾಮಾಯಣʼ ಸಿನಿಮಾ ಬರೋಬ್ಬರಿ 835 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದೆ. ಈ ಮೂಲಕ ಭಾರತೀಯ ಸಿನಿರಂಗದಲ್ಲೇ ಅತೀ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ. ʼʼರಾಮಾಯಣ ಕೇವಲ ಸಿನಿಮಾವಲ್ಲ. ಅದೊಂದು ಭಾವನೆ. ನಂಬಿಕೆ. ಹೀಗಾಗಿ ನಿರ್ಮಾಪಕರು ಈ ಚಿತ್ರದ ತಯಾರಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ದುಬಾರಿ ವೆಚ್ಚದಲ್ಲಿ ನಿರ್ಮಾಪಕರು ತೆರೆ ಮೇಲೆ ಮ್ಯಾಜಿಕ್‌ ಮಾಡಲು ಮುಂದಾಗಿದ್ದಾರೆʼʼ ಎಂದು ಮೂಲವೊಂದು ತಿಳಿಸಿದೆ.

ಈಗಾಗಲೇ ರಾಮಾಯಣ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಇತ್ತೀಚೆಗೆ ಶೂಟಿಂಗ್‌ನ ತುಣುಕೊಂಡು ಲೀಕ್‌ ಆಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ʼʼಚಿತ್ರದ ಬಜೆಟ್‌ 835 ಕೋಟಿ ರೂ.ಗೆ ತಲುಪಲಿದೆ. ಪೋಸ್ಟ್‌ ಪ್ರೊಡಕ್ಷನ್‌ಗೇ ಸುಮಾರು 600 ದಿನ ಬೇಕಾಗುತ್ತದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾವೊಂದು ರಾರಾಜಿಸಲಿದೆʼʼ ಎಂದು ವರದಿಯೊಂದರಲ್ಲಿ ವಿವರಿಸಲಾಗಿದೆ.

ಅತ್ಯಂತ ದುಬಾರಿ ಚಿತ್ರ

ಪ್ರಭಾಸ್‌ ಅಭಿನಯದ, ಕಳೆದ ವರ್ಷ ತೆರೆಕಂಡ ʼಆದಿಪುರುಷ್‌ʼ ಸಿನಿಮಾ ಇದುವರೆಗಿನ ಅತ್ಯಂತ ವೆಚ್ಚದ ಸಿನಿಮಾ ಎನಿಸಿಕೊಂಡಿತ್ತು. ರಾಮಾಯಣವನ್ನು ಆಧರಿಸಿದ ಇದು ಸುಮಾರು 700 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿತ್ತು ಎನ್ನಲಾಗಿದೆ. ಎರಡನೇ ಸ್ಥಾನದಲ್ಲಿ ಪ್ರಭಾಸ್‌ ಅವರದ್ದೇ ʼಕಲ್ಕಿ 2898 ಎಡಿʼ ಸಿನಿಮಾ ಇದೆ. ದೀಪಿಕಾ ಪಡುಕೋಣೆ ನಾಯಕಿಯಾಗಿರುವ ಇದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಈ ಚಿತ್ರದ ಬಜೆಟ್‌ ಸುಮಾರು 600 ಕೋಟಿ ರೂ. ಇನ್ನು ರಜನಿಕಾಂತ್‌ ನಟಿಸಿದ್ದ ʼ2.0ʼ ಚಿತ್ರಕ್ಕೆ 570 ಕೋಟಿ ರೂ. ವೆಚ್ಚವಾಗಿತ್ತು. ಹೀಗಾಗಿ ʼರಾಮಾಯಣʼ ಇದುವರೆಗಿನ ದುಬಾರಿ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದು ಸುಮಾರು 3 ಭಾಗಗಳಲ್ಲಿ ತೆರೆಗೆ ಬರಲಿದೆ ಎನ್ನುವ ಸುದ್ದಿಯೂ ಇದೆ.

ಯಶ್‌ ನಟಿಸುತ್ತಾರಾ?

ʼಕೆಜಿಎಫ್‌ʼ ಸರಣಿ ಸಿನಿಮಾ ಮೂಲಕ ದೇಶದ ಗಮನ ಸೆಳೆದ ಸ್ಯಾಂಡಲ್‌ವುಡ್‌ ನಟ ಯಶ್‌ ರಾಮಾಯಣ ಸಿನಿಮಾದಲ್ಲಿ ರಾವಣನನಾಗಿ ಅಬ್ಬರಿಸಲಿದ್ದಾರೆ. ಅದಕ್ಕಾಗಿ ದುಬಾರಿ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದರ ಜತೆಗೆ ಯಶ್‌ ನಟಿಸುತ್ತಿಲ್ಲ, ಬದಲಾಗಿ ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಇದುವರೆಗೆ ಈ ಬಗ್ಗೆ ಚಿತ್ರತಂಡವಾಗಲೀ, ಯಶ್‌ ಕಡೆಯಿಂದಾಗಲೀ ಸ್ಪಷ್ಟನೆ ದೊರೆತಿಲ್ಲ.

ಇದನ್ನೂ ಓದಿ: Ramayana Movie: ರಾಮಾಯಣ’ ಸಿನಿಮಾದ ರಣ್‌ಬೀರ್, ಸಾಯಿ ಪಲ್ಲವಿ ಲುಕ್ ಲೀಕ್

ದಶರಥನಾಗಿ ಅರುಣ್‌ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗುತ್ತಿದೆ. ರಾವಣನ ಸಹೋದರಿ ಶೂರ್ಪನಖಿಯಾಗಿ ರಕುಲ್‌ಪ್ರೀತ್ ಸಿಂಗ್ ನಟಿಸುತ್ತಾರೆ ಎಂದು ವರದಿಯಾಗಿದೆ. ಸದ್ಯ ಯಶ್ ಮತ್ತೊಂದು ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

Exit mobile version