ಸೆಪ್ಟೆಂಬರ್ 6ರಂದು ಮಧ್ಯಪ್ರದೇಶದ ಉಜ್ಜಯಿನಿ ದೇವಸ್ಥಾನಕ್ಕೆ ಆಗಮಿಸಿದ್ದ ಬಾಲಿವುಡ್ ತಾರಾ ಜೋಡಿ ರಣಬೀರ್ ಕಪೂರ್-ಅಲಿಯಾ ಭಟ್ಗೆ ದೇಗುಲ ಪ್ರವೇಶಕ್ಕೆ ಅವಕಾಶ ಸಿಗಲಿಲ್ಲ. ಅವರೆಷ್ಟೇ ಪ್ರಯತ್ನ ಪಟ್ಟರೂ ದೇವರ ದರ್ಶನ ಸಾಧ್ಯವಾಗಲಿಲ್ಲ. ಸ್ಥಳೀಯ ವಿಶ್ವ ಹಿಂದು ಪರಿಷತ್ (ವಿಎಚ್ಪಿ), ಭಜರಂಗ ದಳದ ನಾಯಕರು, ಪ್ರಮುಖರೆಲ್ಲ ಸೇರಿ ರಣಬೀರ್ (ranbir kapoor) ಮತ್ತು ಅಲಿಯಾರನ್ನು ಹೊರಗಡೆಯೇ ತಡೆದಿದ್ದಾರೆ. ಇವರ ಜತೆ ಹೋಗಿದ್ದ ನಿರ್ದೇಶಕ ಆಯನ್ ಮುಖರ್ಜಿ ಅವರಿಗೆ ಮಾತ್ರ ಉಜ್ಜಯಿನಿ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಜ್ಯೋತಿರ್ಲಿಂಗ ದರ್ಶನ ಪಡೆಯಲು ಸಾಧ್ಯವಾಯಿತು.
ಅಂದು ನೀಡಿದ್ದ ಹೇಳಿಕೆಯೇ ಕಾರಣ !
ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಇಬ್ಬರೂ ಬ್ರಹ್ಮಾಸ್ತ್ರ ಸಿನಿಮಾ ಪ್ರಮೋಶನ್ ಮಾಡುತ್ತಿದ್ದಾರೆ. ಸೆಪ್ಟೆಂಬರ್ 9ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿ ದಂಪತಿ ಉಜ್ಜಯಿನಿ ದೇಗುಲಕ್ಕೆ ಭೇಟಿ ಕೊಟ್ಟಿದ್ದರು. ಜತೆಗೆ ಬ್ರಹ್ಮಾಸ್ತ್ರ ನಿರ್ದೇಶನ ಆಯನ್ ಮುಖರ್ಜಿಯೂ ಇದ್ದರು. ಆದರೆ ರಣಬೀರ್ ಹಿಂದೊಮ್ಮೆ ಆಡಿದ್ದ ಮಾತೇ ಈಗ ಅವರನ್ನು ತಡೆಯಲು ಕಾರಣವಾಯಿತು. ‘ನನಗೆ ನಾನ್-ವೆಜ್ಗಳಲ್ಲಿ ಮಟನ್, ಚಿಕನ್ ಮತ್ತು ಗೋಮಾಂಸ (Beef) ತಿನ್ನಲು ಇಷ್ಟ’ ಎಂದು ವರ್ಷಗಳ ಹಿಂದೆ ರಣಬೀರ್ ಕಪೂರ್ ಹೇಳಿದ್ದಾರೆ. ಗೋಮಾಂಸ ತಿನ್ನುವವರಿಗೆ ಈ ಪವಿತ್ರ ದೇಗುಲ ಪ್ರವೇಶಿಸಲು ಅವಕಾಶ ಕೊಡುವುದಿಲ್ಲ’ ಎಂದು ಬಜರಂಗ ದಳದ ನಾಯಕ ಅಂಕಿತ್ ಚೌಬೆ ತಿಳಿಸಿದ್ದಾರೆ.
ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಉಜ್ಜಯಿನಿ ಮಹಾಕಾಲೇಶ್ವರ ದೇಗುಲಕ್ಕೆ ಬರುತ್ತಿದ್ದಂತೆ ವಿಎಚ್ಪಿ ಮತ್ತು ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಇವರಿಬ್ಬರೂ ದೇವಾಲಯ ಪ್ರವೇಶ ಮಾಡಬಾರದು ಎಂದು ಒಂದೇ ಸಮ ಗಲಾಟೆ ಮಾಡಿದ್ದಾರೆ. ಅವರನ್ನು ಪೊಲೀಸರು ತಡೆಯಲು ಯತ್ನಿಸಿದರು. ಆಗ ಪೊಲೀಸರ ಜತೆ ಕೂಡ ಕಾರ್ಯಕರ್ತರು ವಾಗ್ವಾದಕ್ಕೆ ಇಳಿದರು. ಕೆಲವರು ಹೊಡೆದಾಟಕ್ಕೂ ಮುಂದಾದರು ಎಂದು ಉಜ್ಜಯನಿ ಸಿಎಸ್ಪಿ ಓಂ ಪ್ರಕಾಶ್ ಮಿಶ್ರಾ ತಿಳಿಸಿದ್ದಾರೆ. ಅಲಿಯಾ ಭಟ್ ಒಬ್ಬಳು ಹಿಂದು ವಿರೋಧಿ ಮತ್ತು ರಣಬೀರ್ ಕಪೂರ್ ಒಬ್ಬ ಗೋಮಾಂಸ ಸೇವನೆ ಮಾಡುವವ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಗುಲದ ಮುಂದೆ ನಡೆದ ಪ್ರತಿಭಟನೆಯ ವಿಡಿಯೋ ಕೂಡ ವೈರಲ್ ಆಗಿದೆ.
ಯಾವಾಗ ಹೇಳಿದ್ದರು ರಣಬೀರ್ ಕಪೂರ್?
ರಣಬೀರ್ ಕಪೂರ್ ತಮಗೆ ಗೋಮಾಂಸ ತಿನ್ನಲು ಇಷ್ಟವೆಂದು ಹೇಳಿದ್ದು ಇತ್ತೀಚೆಗಲ್ಲ, ಈಗೊಂದು 11 ವರ್ಷಗಳ ಹಿಂದೆ. ಅಂದರೆ 2011ರಲ್ಲಿ ಅವರ ರಾಕ್ಸ್ಟಾರ್ ಸಿನಿಮಾ ಪ್ರಮೋಶನ್ ವೇಳೆ ಮಾತನಾಡುತ್ತ, ‘ನಾನು ಮೂಲತಃ ಪೇಶಾವರದವನು. ನನ್ನ ಕುಟುಂಬದ ಮೂಲ ಅಲ್ಲಿಯೇ ಇದೆ. ಹೀಗಾಗಿ ಪೇಶಾವರಿ ಶೈಲಿಯ ಆಹಾರಗಳನ್ನು ನಾವು ಹೆಚ್ಚಾಗಿ ತಿನ್ನುತ್ತೇವೆ. ನನಗಂತೂ ಮಟನ್, ಚಿಕನ್ ಮತ್ತು ಬೀಫ್ (ಗೋಮಾಂಸ) ತುಂಬ ಇಷ್ಟ’ ಎಂದಿದ್ದರು. ಇತ್ತೀಚೆಗೆ ಅವರ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ದಿನಾಂಕ ಸಮೀಪಿಸುತ್ತಿದ್ದಂತೆ ಈ ವಿಡಿಯೋ ಮತ್ತೆ ವೈರಲ್ ಆಗಿತ್ತು. ಈಗಾಗಲೇ ರಣಬೀರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅವರನ್ನು ಪೇಶಾವರದ ಬೀಫ್ ಹುಡುಗ ಎಂದೂ ಸೋಷಿಯಲ್ ಮೀಡಿಯಾಗಳಲ್ಲಿ ಜರಿಯಲಾಗುತ್ತಿದೆ.
ಇದನ್ನೂ ಓದಿ: ಬ್ರಹ್ಮಾಸ್ತ್ರ: ರಣಬೀರ್ ದೇವಸ್ಥಾನದೊಳಗೆ ಚಪ್ಪಲಿ ಹಾಕಿದನೇ?