Site icon Vistara News

Brahmastra Review | ಬಾಲಿವುಡ್ ವಿರುದ್ಧ ಮತ್ತೊಮ್ಮೆ ಬಾಯ್ಕಾಟ್ ‘ಬ್ರಹ್ಮಾಸ್ತ್ರ’

Brahmastra Review

ಬಾಲಿವುಡ್ ಸಿನಿಮಾಗಳು ಸಾಲು ಸಾಲಾಗಿ ಮಕಾಡೆ ಮಲಗುತ್ತಿವೆ. ಈ ಸಾಲಿಗೆ ರಣಬೀರ್ ಸಿನಿಮಾ ಬಾಕಿ ಉಳಿದಿತ್ತು. ಇದೀಗ ಆ ಘಟನೆಯೂ ನಡೆದು ಹೋಗಿದೆ. ಪತಿ-ಪತ್ನಿ ಅಭಿನಯಿಸಿದ್ದ ಸಿನಿಮಾ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಪಡೆದಿದೆ. ರಣಬೀರ್ ಕಪೂರ್ & ಆಲಿಯಾ ಭಟ್​ ಅಭಿನಯದ ‘ಬ್ರಹ್ಮಾಸ್ತ್ರ’ (Brahmastra Review) ಮೊದಲ ದಿನವೇ ಮಕಾಡೆ ಮಲಗಿದೆ ಎಂಬ ಮಾತುಗಳು ಬಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿವೆ.

‘ಬ್ರಹ್ಮಾಸ್ತ್ರ’ ಫ್ಯಾಂಟಸಿ ಕೆಟಗರಿ ಸಿನಿಮಾ. ಇದೇ ಕಾರಣಕ್ಕೆ ಕುತೂಹಲ ಒಂಚೂರು ಜಾಸ್ತಿಯೇ ಇತ್ತು. ಆದರೆ ಎಲ್ಲೋ ಮಿಸ್ಟೇಕ್ ಆಗಿದೆ ಎಂಬ ಮಾತನ್ನು ಟ್ರೈಲರ್ ರಿಲೀಸ್ ಆದ ದಿನವೇ ಪ್ರೇಕ್ಷಕರು ಹೇಳಿದ್ದರು. ಈ ಮಾತು ಸಿನಿಮಾ ರಿಲೀಸ್ ಆದ ದಿನವೇ ಸತ್ಯ ಆಗಿದೆ ಎನ್ನುತ್ತಿದ್ದಾರೆ ವಿಮರ್ಶಕರು. ಬಾಕ್ಸ್ ಆಫಿಸ್​ನಲ್ಲೂ ಅಂದುಕೊಂಡ ಮಟ್ಟಕ್ಕೆ ಚಿತ್ರ ಯಶಸ್ಸು ಕಾಣದೇ ಇರುವುದು ನಿರ್ಮಾಪಕರಿಗೆ ಆತಂಕ ತಂದಿದೆ.

₹400 ಕೋಟಿ ಬಜೆಟ್
‘ಬ್ರಹ್ಮಾಸ್ತ್ರ’ಗೆ ಹಾಕಿದ್ದ ದುಡ್ಡು ಒಂದೆರಡು ಕೋಟಿ ರೂಪಾಯಿ ಅಲ್ಲ. ಬರೋಬ್ಬರಿ ₹410 ಕೋಟಿ ರೂಪಾಯಿ ಎಂದಿದ್ದಾರೆ ನಿರ್ಮಾಪಕರು. ಆದರೆ ಈ ದುಡ್ಡೆಲ್ಲಾ ಹೊಳೆಯಲ್ಲಿ ಹೋಮ ಮಾಡಿದಂತೆ ಆಯ್ತಾ? ಎಂಬ ಅನುಮಾನ ಕಾಡುತ್ತಿದೆ. ಅದರಲ್ಲೂ ಬ್ರಹ್ಮಾಸ್ತ್ರ ಸಿನಿಮಾಗೆ ಬಂದಿರುವ ರಿವ್ಯೂ ನೋಡಿದರೆ ಫ್ಲಾಪ್ ಲಿಸ್ಟ್​ಗೆ ಸೇರಿರೋದು ಪಕ್ಕಾ.

ನಾಳೆ ಮತ್ತು ನಾಡಿದ್ದು ಅಂದರೆ ಶನಿವಾರ & ಭಾನುವಾರ ವೀಕೆಂಡ್ ಇರುವ ಕಾರಣ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದನ್ನು ಕಾದು ನೋಡಬೇಕಿದೆ. ಆದರೆ ಬ್ರಹ್ಮಾಸ್ತ್ರ ಮೊದಲ ದಿನವೇ ಭಾರಿ ಹಿನ್ನಡೆ ಕಂಡಿರುವ ಹಿನ್ನೆಲೆಯಲ್ಲಿ ವಾರಾಂತ್ಯದ ಕಲೆಕ್ಷನ್ ಅಷ್ಟು ದೊಡ್ಡ ಮಟ್ಟದಲ್ಲಿ ಸುಧಾರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ.

ಒಟ್ಟಾರೆ ಬಾಲಿವುಡ್‌ ಸ್ಟಾರ್‌ ನಟರಿಗೆ ಸಾಲು ಸಾಲಾಗಿ ಶಾಕ್‌ ಸಿಗುತ್ತಿದೆ. ಜಗತ್ತಿನ ತುಂಬಾ ತಮ್ಮದೇ ಹವಾ ಇಟ್ಕೊಂಡಿದ್ದ ಬಾಲಿವುಡ್‌ ಸ್ಟಾರ್ ಪಡೆ ಸದ್ಯಕ್ಕೆ ಹಾಕಿದ ಬಂಡವಾಳ ವಾಪಸ್ ತೆಗೆಯಲು ಒದ್ದಾಡುವ ಪರಿಸ್ಥಿತಿ ತಲುಪಿದೆ. ಬಾಲಿವುಡ್ ವಿರುದ್ಧ ಮತ್ತೊಮ್ಮೆ ಬಾಯ್ಕಾಟ್‌ ‘ಬ್ರಹ್ಮಾಸ್ತ್ರ’ ಪ್ರಯೋಗವಾಗಿದ್ದು, ಭವಿಷ್ಯದಲ್ಲಿ ಪ್ರೇಕ್ಷಕರ ಸಿಟ್ಟು ಇದೇ ರೀತಿ ಮುಂದುವರಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Puneeth lucky man | ಲಕ್ಕಿ ಮ್ಯಾನ್ ರಿಲೀಸ್‌ಗೆ ಕ್ಷಣಗಣನೆ: ಅಪ್ಪು ಫ್ಯಾನ್ಸ್‌ಗೆ ಡಬಲ್‌ ಗಿಫ್ಟ್!

Exit mobile version