Site icon Vistara News

Rashmika Mandanna: ನಟಿ ರಶ್ಮಿಕಾ ಮಂದಣ್ಣ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ

rashmika

rashmika

ಮುಂಬೈ: ಬಹುಭಾಷಾ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ ಮಾಡಿದ್ದು, ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಘಟನೆ ನಟಿ ಮತ್ತು ಸಹ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿತ್ತು. ಸದ್ಯ ರಶ್ಮಿಕಾ ಸುರಕ್ಷಿತರಾಗಿದ್ದಾರೆ. ಅವರು ವಿಮಾನದಲ್ಲಿ ಕುಳಿತಿರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಆತಂಕದ ಕ್ಷಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಈ ಅನುಭವವನ್ನು ಹಂಚಿಕೊಂಡ ಅವರು, ʼʼಇಂದು ಸಾವಿನಿಂದ ತಪ್ಪಿಸಿಕೊಂಡಿದ್ದೇವೆʼʼ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಜತೆ ಈ ವೇಳೆ ನಟಿ ಶ್ರದ್ಧಾ ದಾಸ್ ಕೂಡ ಇದ್ದರು.

ಶನಿವಾರ ರಶ್ಮಿಕಾ ಸಂಚರಿಸುತ್ತಿದ್ದ ಏರ್‌ ವಿಸ್ತಾರ (Air Vistara) ವಿಮಾನವು ಮುಂಬೈಯಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿತ್ತು. ಮುಂಬೈ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ 30 ನಿಮಿಷಗಳ ನಂತರ ವಿಮಾನ ಮತ್ತೆ ಮುಂಬೈಗೆ ಮರಳಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಘಟನೆಯ ಬಗ್ಗೆ ರಶ್ಮಿಕಾ ಹಂಚಿಕೊಂಡ ಪೋಸ್ಟ್‌ ಕ್ಷಣಾರ್ಧದಲ್ಲಿ ವೈರಲ್‌ ಆಗಿತ್ತು. ನಟಿಯ ಸುರಕ್ಷಯೆ ಬಗ್ಗೆ ಅನೇಕ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಸದ್ಯ ತಮ್ಮ ನೆಚ್ಚಿನ ನಟಿ ಸುರಕ್ಷಿತವಾಗಿರುವುದನ್ನು ತಿಳಿದು ಅವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್‌ನ ʼಅನಿಮಲ್‌ʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಸಂದೀಪ್‌ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮೊದಲ ಬಾರಿಗೆ ರಣಬೀರ್‌ ಕಪೂರ್‌ ಜತೆಗೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 900 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಅಲ್ಲದೆ ಒಟಿಟಿಯಲ್ಲಿಯೂ ತೆರೆಕಂಡು ಅಭಿಮಾನಿಗಳ ಗಮನ ಸೆಳೆದಿದೆ. ರಣಬೀರ್‌ ಕಪೂರ್‌ ಜತೆಗೆ ರಶ್ಮಿಕಾ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಮೋಡಿ ಮಾಡಿದ್ದಾರೆ.

ಇದನ್ನೂ ಓದಿ: Rajkumar Santoshi: ಚೆಕ್ ಬೌನ್ಸ್‌: ಆಮೀರ್‌ ಖಾನ್‌ ಸಿನಿಮಾ ನಿರ್ದೇಶಕನಿಗೆ 2 ವರ್ಷ ಜೈಲು!

ಸದ್ಯ ರಶ್ಮಿಕಾ ವಿವಿಧ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ, ಅಲ್ಲು ಅರ್ಜುನ್‌ ಅವರ ʼಪುಷ್ಪ 2ʼ,‌ ತೆಲುಗಿನ ʼರೈನ್‌ ಬೋʼ, ʼದಿ ಗರ್ಲ್‌ ಫ್ರೆಂಡ್‌ʼ, ಬಾಲಿವುಡ್‌ನ ʼಛಾವಾʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜತೆಗೆ ತಮಿಳಿನಲ್ಲಿ ಧನುಷ್‌ ಅಭಿನಯದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ್ಕಿ ಕೌಶಲ್‌ ನಾಯಕನಾಗಿ ನಟಿಸುತ್ತಿರುವ ʼಛಾವಾʼ ಐತಿಹಾಸಿಕ ಚಿತ್ರ ಎನ್ನುವುದು ವಿಶೇಷ. ಹಿಂದಿ ಮತ್ತು ಮರಾಠಿ ಚಿತ್ರಗಳನ್ನು ನಿರ್ದೇಶಿಸಿರುವ ಲಕ್ಷ್ಮಣ್‌ ಉಟೇಕರ್ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ ʼಛಾವಾʼ. ಈ ಮೂಲಕ ಅವರು ಮರಾಠ ಯೋಧ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್‌ ನಟಿಸುತ್ತಿದ್ದು, ಅವರ ಪತ್ನಿ ಯೇಸುಬಾಯಿಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮೊದಲ ಬಾರಿ ರಶ್ಮಿಕಾ ಐತಿಹಾಸಿಕ ಚಿತ್ರವೊಂದರ ಭಾಗವಾಗುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version